– ಬೆಂಗಳೂರಿಗೆ ಸತತ 6ನೇ ಸೋಲು
ಕೋಲ್ಕತ್ತಾ: ಕೊನೇ ಓವರ್‌ನಲ್ಲಿ ಮೂರು ಸಿಕ್ಸರ್ ಸಿಡಿಸಿದ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೆಕೆಆರ್ (KKR) ವಿರುದ್ಧ 1 ರನ್‌ಗಳ ವಿರೋಚಿತ ಸೋಲಿಗೆ ತುತ್ತಾಯಿತು.
ಕೊನೇ ಓವರ್ ಥ್ರಿಲ್ಲರ್:
223 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ ಗೆಲುವಿಗೆ ಕೊನೇ ಓವರ್‌ನಲ್ಲಿ 21 ರನ್ ಅಗತ್ಯವಿತ್ತು. ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿದ್ದರು. ಈ ವೇಳೆ ಕ್ರೀಸ್‌ನಲ್ಲಿದ್ದ ಕರ್ಣ್ ಶರ್ಮಾ (Karn Sharma) ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ್ರು. 2ನೇ ಎಸೆತದಲ್ಲಿ ರನ್ ಗಳಿಸುವಲ್ಲಿ ವಿಫಲರಾದರೂ 3-4ನೇ ಎಸೆತಗಳನ್ನು ಸತತವಾಗಿ ಸಿಕ್ಸರ್‌ಗೆ ಅಟ್ಟಿದರು. ಈ ವೇಳೆ ಪಂದ್ಯ ರೋಚಕ ಹಂತಕ್ಕೆ ತಿರುಗಿತ್ತು. ಡಗೌಟ್‌ನಲ್ಲಿದ್ದ ಆಟಗಾರರು ಮಾತ್ರವಲ್ಲದೇ ಅಭಿಮಾನಿಗಳಲ್ಲೂ ಹೃದಯ ಬಡಿತ ಹೆಚ್ಚಾಗಿತ್ತು. ಮೈ ರೋಮಾಂಚನಗೊಳಿಸುವಂತಿತ್ತು. ಆದ್ರೆ ಕೊನೇ 2 ಎಸೆತಗಳಲ್ಲಿ ಮೂರು ರನ್‌ಗಳ ಬೇಕಿದ್ದಾಗಲೇ ಕರ್ಣ್ ಶರ್ಮಾ 1 ರನ್ ಕದಿಯಲು ಯತ್ನಿಸಿ ಸ್ಟಾರ್ಕ್‌ಗೆ (Mitchell Starc) ಕ್ಯಾಚ್ ನೀಡಿ ಔಟಾದರು. ಕೊನೇ ಎಸೆತದಲ್ಲಿ ಸ್ಟ್ರೈಕ್ ಮಾಡಿದ ಲಾಕಿ ಫರ್ಗೂಸನ್ 2 ರನ್ ಕದಿಯಲು ಯತ್ನಿಸಿ ರನೌಟ್‌ಗೆ ತುತ್ತಾದರು. ಇದರಿಂದ ಆರ್‌ಸಿಬಿ 1 ರನ್‌ನಿಂದ ವಿರೋಚಿತ ಸೋಲಿಗೆ ತುತ್ತಾಯಿತು.
ಟಾಸ್ ಸೋತು ಮೊದಲು ಫೀಲ್ಡಿಂಗ್‌ಗೆ ಇಳಿದ ಆರ್‌ಸಿಬಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಕೋಲ್ಕತ್ತಾ ನೈಟ್‌ರೈಡರ್ಸ್‌ಗೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 222 ರನ್ ಬಾರಿಸಿತ್ತು. 223 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿ ವಿರೋಚಿತ ಸೋಲನುಭವಿಸಿತು.
ಚೇಸಿಂಗ್ ವೇಳೆ ಸ್ಫೋಟಕ ಆರಂಭ ಪಡೆಯಲು ಮುಂದಾಗಿದ್ದ ಆರ್‌ಸಿಬಿ 2.1 ಓವರ್‌ಗಳಿದ್ದಾಗ 27 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. 7 ಎಸೆತಗಳಲ್ಲಿ 18 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೆ, ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಸಹ ಸುಲಭ ಕ್ಯಾಚ್‌ಗೆ ತುತ್ತಾದರು. ಇದು ಆರ್‌ಸಿಬಿಗೆ ಭಾರೀ ಆಘಾತವುಂಟುಮಾಡಿತ್ತು.
ವಿಲ್-ಪಾಟಿದಾರ್ ಶತಕದ ಜೊತೆಯಾಟ:
3.1 ಓವರ್‌ಗಳಲ್ಲಿ 35 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿಗೆ ವಿಲ್ ಜಾಕ್ಸ್ (Will Jacks) ಹಾಗೂ ರಜತ್ ಪಾಟೀದಾರ್ (Rajat Patidar) ಬಲ ತುಂಬಿದರು. 3ನೇ ವಿಕೆಟ್‌ಗೆ ಈ ಜೋಡಿ 48 ಎಸೆತಗಳಲ್ಲಿ ಭರ್ಜರಿ 102 ರನ್‌ಗಳ ಜೊತೆಯಾಟ ನೀಡಿತ್ತು. ಇದರಿಂದ ತಂಡದಲ್ಲಿ ಗೆಲುವಿನ ಆಸೆ ಚಿಗುರಿತ್ತು. ಆದ್ರೆ ಮಧ್ಯಮ ಕ್ರಮಾಂಕದ ಬ್ಯಾಟರ್ಸ್‌ಗಳು ಕೈಕೊಟ್ಟ ಪರಿಣಾಮ ಆರ್‌ಸಿಬಿ ಸೋಲಿಗೆ ತುತ್ತಾಯಿತು.
ಆರ್‌ಸಿಬಿ ಪರ ವಿಲ್ ಜಾಕ್ಸ್ 55 ರನ್ (32 ರನ್, 5 ಸಿಕ್ಸರ್, 4 ಬೌಂಡರಿ), ರಜತ್ ಪಾಟೀದಾರ್ 52 ರನ್ (23 ಎಸೆತ, 5 ಸಿಕ್ಸರ್, 3 ಬೌಂಡರಿ), ವಿರಾಟ್ ಕೊಹ್ಲಿ 18 ರನ್, ಫಾಫ್ ಡು ಪ್ಲೆಸಿಸ್ 7 ರನ್, ಕ್ಯಾಮರೂನ್ ಗ್ರೀನ್ 6 ರನ್, ಮಹಿಪಾಲ್ ಲೋಮ್ರೋರ್ 4 ರನ್, ಸುಯೇಶ್ ಪ್ರಭುದೇಸಾಯಿ 24 ರನ್, ದಿನೇಶ್ ಕಾರ್ತಿಕ್ 25 ರನ್, ಕರ್ಣ್ ಶರ್ಮಾ ಸ್ಫೋಟಕ 20 ರನ್ (7 ಎಸೆ, 3 ಸಿಕ್ಸರ್), ಲಾಕಿ ಫರ್ಗೂಸನ್ 1 ರನ್ ಗಳಿಸಿದರು.
ಕೆಕೆಆರ್ ಪರ ಆಲ್‌ರೌಂಡರ್ ಪ್ರದರ್ಶನ ನೀಡಿದ ಆಂಡ್ರೆ ರಸೆಲ್ 3 ಓವರ್‌ಗಳಲ್ಲಿ 3 ವಿಕೆಟ್ ಕಿತ್ತರೆ, ಹರ್ಷಿತ್ ರಾಣಾ ಮತ್ತು ಸುನೀಲ್ ನರೇನ್ ತಲಾ 2 ವಿಕೆಟ್ ಹಾಗೂ ಮಿಚೆಲ್ ಸ್ಟಾರ್ಕ್ ಮತ್ತು ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ಆರಂಭದಿಂದ ಅಬ್ಬರಿಸಲು ಶುರು ಮಾಡಿತು. ಆರಂಭಿಕರಾದ ಸುನೀಲ್ ನರೇನ್ ಮತ್ತು ಪಿಲ್ ಸಾಲ್ಟ್ ಜೋಡಿ ಮೊದಲ ವಿಕೆಟ್‌ಗೆ 26 ಎಸೆತಗಳಲ್ಲಿ ಸ್ಫೋಟೊ 56 ರನ್‌ಗಳ ಜೊತೆಯಾಟ ನೀಡಿತ್ತು. ಬಳಿಕ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಕೆಕೆಆರ್ ತಂಡ ಮತ್ತೊಂದೆಡೆ ರನ್ ಕಲೆಹಾಕುತ್ತಾ ಸಾಗಿತು.
ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ಮತ್ತು ರಿಂಕು ಸಿಂಗ್ ಜೋಡಿ 40 ರನ್, ರಸ್ಸೆಲ್ ಮತ್ತು ಅಯ್ಯರ್ 42 ರನ್ ಹಾಗೂ ರಸ್ಸೆಲ್ ಮತ್ತು ರಮಣದೀಪ್ ಸಿಂಗ್ ಜೋಡಿ ನೀಡಿದ 43 ರನ್‌ಗಳ ಜೊತೆಯಾಟದಿಂದ ಕೆಕೆಆರ್ ತಂಡ 222 ರನ್‌ಗಳ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು.
ಶ್ರೇಯಸ್ ಅಯ್ಯರ್ 50 ರನ್ (36 ಎಸೆತ, 1 ಸಿಕ್ಸರ್, 7 ಬೌಂಡರಿ), ಪಿಲ್ ಸಾಲ್ಟ್ (Phil Salt) ಸ್ಫೋಟಕ 48 ರನ್ (14 ಎಸೆತ, 3 ಸಿಕ್ಸರ್, 7 ಬೌಂಡರಿ), ಸುನೀಲ್ ನರೇನ್ 10 ರನ್, ರಘುವಂಶಿ 3 ರನ್, ವೆಂಕಟೇಶ್ ಅಯ್ಯರ್ 16 ರನ್, ರಿಂಕು ಸಿಂಗ್ 24 ರನ್, ಆಂಡ್ರೆ ರಸ್ಸೆಲ್ 27 ರನ್, ರಮಣದೀಪ್ ಸಿಂಗ್ 24 ರನ್ ಬಾರಿಸಿದ್ರೆ ವೈಡ್, ನೋಬಾಲ್ ಬೈಸ್‌ನಿಂದಲೇ ಹೆಚ್ಚುವರಿ 20 ರನ್ ತಂಡಕ್ಕೆ ಸೇರ್ಪಡೆಯಾಯಿತು.
ಆರ್‌ಸಿಬಿ ಪರ ಯಶ್ ದಯಾಳ್ 4 ಓವರ್‌ಗಳಲ್ಲಿ 56 ರನ್ ಬಿಟ್ಟುಕೊಟ್ಟು ಮತ್ತು ಕ್ಯಾಮರೂನ್ ಗ್ರೀನ್ 4 ಓವರ್‌ಗಳಲ್ಲಿ 35 ರನ್ ಬಿಟ್ಟುಕೊಟ್ಟು ತಲಾ 2 ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್ ಹಾಗೂ ಕರ್ಣ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.