ಕೋಲ್ಕತ್ತಾ: ಎರಡು ಬಾರಿ ಚಾಂಪಿಯನ್ ಆಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಧಿಕೃತವಾಗಿ ಪ್ಲೇ-ಆಫ್‌ಗೆ ಎಂಟ್ರಿ ಕೊಟ್ಟಿದೆ. ತವರಿನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಕೆಕೆಆರ್ 18 ರನ್‌ಗಳ ಜಯ ಸಾಧಿಸಿದೆ. 9 ಪಂದ್ಯಗಳ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದೆ.
ಮಳೆ ಪರಿಣಾಮವಾಗಿ ಮ್ಯಾಚ್ ತಡವಾಗಿ ಆರಂಭವಾಯಿತು. ಪಂದ್ಯಕ್ಕೂ ಮುನ್ನ ಮಳೆ ಬಂದ ಕಾರಣ ಇನ್ನಿಂಗ್ಸ್ ಅನ್ನು 16 ಓವರ್‌ಗಳಿಗೆ ನಿಗದಿಪಡಿಸಲಾಯಿತು. ಟಾಸ್ ಗೆದ್ದ ಮುಂಬೈ ಮೊದಲು ಬೌಲಿಂಗ್ ಆಯ್ದುಕೊಂಡಿತು.
Advertisement
Advertisement
ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ 16 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. 158 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವನ್ನು ಕೋಲ್ಕತ್ತಾ ಬೌಲರ್ಸ್ ಕಟ್ಟಿಹಾಕಿದರು. 16 ಓವರ್‌ಗಳಲ್ಲಿ 8 ವಿಕೆಟ್‌ಗೆ 138 ರನ್ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.
Advertisement
ಕೋಲ್ಕತ್ತಾ ಬ್ಯಾಟಿಂಗ್‌ನಲ್ಲಿ ಆರಂಭಿಕ ಆಘಾತ ಎದುರಿಸಿತು. ಓಪನರ್ ಜೋಡಿ ಸುನಿಲ್ ನರೈನ್ (0) ಮತ್ತು ಫಿಲಿಪ್ ಸಾಲ್ಟ್ (6) ಅವರನ್ನು ತಂಡ ಬೇಗನೆ ಕಳೆದುಕೊಂಡಿತು. ಆದರೆ ವೆಂಕಟೇಶ್ ಅಯ್ಯರ್ 21 ಎಸೆತಗಳಲ್ಲಿ 42 ರನ್‌ಗಳ ನಿರ್ಣಾಯಕ ಪಾತ್ರವನ್ನು ವಹಿಸಿದರು. ನಾಯಕ ಶ್ರೇಯಸ್ ಅಯ್ಯರ್ ಕೇವಲ 7 ರನ್ ಗಳಿಸಿ ಔಟಾದರು.
Advertisement
ನಿತೀಶ್ ರಾಣಾ (33), ಆಂಡ್ರೆ ರಸೆಲ್ (24), ರಿಂಕು ಸಿಂಗ್ (20), ರಮಣ್‌ದೀಪ್ ಸಿಂಗ್ (17) ತಂಡದ ಪರವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಸವಾಲಿನ ಮೊತ್ತ ದಾಖಲಿಸಲು ನೆರವಾದರು. ಮುಂಬೈ ಪರ ಜಸ್ಪ್ರೀತ್ ಬುಮ್ರಾ, ಪಿಯೂಷ್ ಚಾವ್ಲಾ ತಲಾ 2 ಹಾಗೂ ನುವಾನ್ ತುಷಾರ, ಅಂಶುಲ್ ಕಾಂಬೋಜ್ ತಲಾ 1 ವಿಕೆಟ್ ಕಿತ್ತರು.
ಕೋಲ್ಕತ್ತಾ ನೀಡಿದ 158 ರನ್ ಗುರಿ ಬೆನ್ನತ್ತಿದ ಮುಂಬೈ ತಂಡಕ್ಕೆ ಇಶಾನ್ ಕಿಶನ್ 22 ಎಸೆತಗಳಿಗೆ 40 ರನ್ ಗಳಿಸಿ ಭದ್ರಬುನಾದಿ ಹಾಕಿಕೊಟ್ಟರು. ಆದರೆ ಇತರೆ ಆಟಗಾರರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ರೋಹಿತ್ (19), ಸೂರ್ಯಕುಮಾರ್ ಯಾದವ್ (11) ಮಿಂಚಲಿಲ್ಲ. ತಿಲಕ್ ವರ್ಮಾ 17 ಎಸೆತಕ್ಕೆ 32 ರನ್ ಗಳಿಸಿ ಮುಂಬೈಗೆ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ಯಾವೊಬ್ಬ ಬ್ಯಾಟರ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯದ ಕಾರಣ ಮುಂಬೈ ಸೋಲನುಭವಿಸಿತು.
ಕೋಲ್ಕತ್ತಾ ಪರ ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಆಂಡ್ರೆ ರಸೆಲ್ ತಲಾ 2 ವಿಕೆಟ್ ಕಿತ್ತು ತಂಡದ ಗೆಲುವಿಗೆ ಆಸರೆಯಾದರು. ಸುನಿಲ್ ನರೈನ್ 1 ವಿಕೆಟ್ ಕಿತ್ತರು.