ಕಾರವಾರ: ಗ್ರಾಮದಲ್ಲಿ ಒಂದು ಬಿಂದಿಗೆ ನೀರು ತರಲು ಸಾವಿನೊಂದಿಗೆ ಸರಸವಾಡಬೇಕು ಅಂದ್ರೆ ಯಾರೂ ನಂಬೋದಿಲ್ಲ. ಅಂತಹ ಗ್ರಾಮ ಒಂದು ನಮ್ಮ ರಾಜ್ಯದಲ್ಲಿದೆ. ಅಂದ್ರೆ ನೀವು ನಂಬಲೇ ಬೇಕು. ಹೌದು, ಆಧುನಿಕತೆ ಇಲ್ಲಿ ಸುಳಿದ್ರೂ ಗ್ರಾಮದ ಜನರ ಬದುಕು ಮಾತ್ರ ಬದಲಾಗಲಿಲ್ಲ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಭಾಗವಾಡಾ, ಚಾಮಕುಳಿವಾಡಾ, ಅಂಬೆಜೂಗ, ಝಾಡಕಿ ಗ್ರಾಮದಲ್ಲಿ ಜನರು ಕುಡಿಯುವ ನೀರಿಗಾಗಿ ಪ್ರತಿನಿತ್ಯ ಸಾವಿನೊಂದಿಗೆ ಸರಸವಾಡುತ್ತಾರೆ. ಮಹಿಳೆಯರು ಒಂದು ಕೊಡ ಕುಡಿಯುವ ನೀರನ್ನು ತರಲು ಮೂರು ಕಿಲೋಮೀಟರ್ ಗೂ ಹೆಚ್ಚು ಕಲ್ಲು ಮುಳ್ಳಿನ ಹಾದಿಯಲ್ಲಿ ಸಂಚರಿಸಿ ಕಾಳಿ ನದಿಯ ಹಿನ್ನೀರು ಹರಿಯುವ ಅಂಬೆಜೂಗ ಹಳ್ಳ ದಾಟಿ ದಿಗಾಳಿ ಗ್ರಾಮದ ಸಾರ್ವಜನಿಕ ಬಾವಿಯಿಂದ ನೀರು ತರಬೇಕಾದ ಪರಿಸ್ಥಿತಿ ಕಳೆದ ಮೂರು ವರ್ಷಗಳಿಂದ ಉದ್ಭವಿಸಿದೆ.
Advertisement
Advertisement
ಈ ಭಾಗದ ಊರುಗಳಲ್ಲಿ ಬಾವಿ ತೆಗೆದರೆ ಉಪ್ಪುನೀರು ಸಿಗುತ್ತದೆ. ಹೀಗಾಗಿ ಮೂರು ವರ್ಷದ ಹಿಂದೆ ಅಂಬೆಜೂಗ ಹಳ್ಳಕ್ಕೆ ಮರದ ಸಂಕ ನಿರ್ಮಿಸಲಾಗಿತ್ತು. ಆದ್ರೆ ಇದು ಮುರಿದು ಬಿದ್ದಿದ್ದು ದಿಗಾಳಿ ಗ್ರಾಮಕ್ಕೆ ಮಹಿಳೆಯರು ನೀರು ತರಲು ಜೀವ ಕೈಯಲ್ಲಿಟ್ಟು ಎದೆ ಮಟ್ಟಕ್ಕೆ ಬರುವ ಹಳ್ಳದ ನೀರಿನಲ್ಲಿ ಸಾಗಿ ತರಬೇಕು. ಇನ್ನು ಮಳೆಗಾಲದಲ್ಲಂತೂ ಮಳೆಯ ನೀರೇ ಇವರಿಗೆ ಕುಡಿಯುವ ನೀರು. ನಗರಕ್ಕೆ ಬರಬೇಕಾದರೂ ಜನ ಈ ದಾರಿಯಲ್ಲೇ ಬರುವುದು ಅನಿವಾರ್ಯವಾಗಿದ್ದು. ಈ ಮಾರ್ಗ ಬಿಟ್ಟು ಮೊತ್ತೊಂದು ಮಾರ್ಗದಲ್ಲಿ ಬರಬೇಕಾದರೇ ಕಾಡು ಮೇಡು ದಾಟಿ 10 ಕಿಲೋಮೀಟರ್ ರಸ್ತೆ ದಾಟಬೇಕಿದೆ.
Advertisement
ಸುಮಾರು ಸಾವಿರದಷ್ಟು ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ನೀರಿಗಾಗಿ ಜೀವ ಪಣಕ್ಕಿಡುವುದು ಸಾಮಾನ್ಯ ಸಂಗತಿಯಂತಾಗಿದೆ. ಕಾರವಾರದ ಶಾಸಕ ಸತೀಶ್ ಸೈಲ್, ಜಿಲ್ಲಾ ಉಸ್ತುವಾರಿ ಸಚಿವ ಆರ್ .ವಿ ದೇಶಪಾಂಡೆ ಯವರಿಗೆ ಹಲವು ವರ್ಷಗಳಿಂದ ಈ ಗ್ರಾಮಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಮನವಿ ಮಾಡಲಾಗಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಅಂತಾ ಗ್ರಾಮಸ್ಥರು ಹೇಳುತ್ತಿದ್ದಾರೆ.
Advertisement
ಜಿಲ್ಲಾಡಳಿತ ಮನಸ್ಸು ಮಾಡಿದ್ರೆ ಕೊನೆ ಪಕ್ಷ ತೂಗು ಸೇತುವೆ ನಿರ್ಮಿಸಬಹುದಿತ್ತು. ಇಲ್ಲವಾದಲ್ಲಿ ಕುಡಿಯುವ ನೀರಿಗೆ ಬದಲಿ ವ್ಯವಸ್ಥೆ ಕಲ್ಪಿಸಬಹುದಿತ್ತು. ಆದ್ರೆ ಇದ್ಯಾವುದನ್ನೂ ಮಾಡದೇ ಮೌನ ವಹಿಸಿದ್ರೆ ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿ ಮಾತ್ರ ಈ ಊರು ನೆನಪಾಗುತ್ತದೆ. ಇನ್ನಾದರೂ ಎಚ್ಚೆತ್ತು ಈ ಊರಿನ ಮಹಿಳೆಯರ ಸಂಕಷ್ಟವನ್ನ ಪರಿಹರಿಸುತ್ತಾರ ಎಂಬುದನ್ನು ಕಾದುನೋಡಬೇಕಿದೆ.