ಉಡುಪಿ: ಕೊರೊನಾ ಮಹಾಮಾರಿ ಭಾರತಕ್ಕೆ ಬೀಗ ಹಾಕಿಸಿದೆ. ಉಡುಪಿಯಲ್ಲಿ ಕಾರ್ಮಿಕರು, ನಿರ್ಗತಿಕರು ಊಟಕ್ಕಿಲ್ಲದೆ ಪರಿತಪಿಸುವ ಪ್ರಮೇಯ ಬಂದಿದೆ. ಚಾಂದ್ರಮಾನ ಯುಗಾದಿ ಆಚರಿಸುತ್ತಿರುವ ಉಡುಪಿಯ ಕಿಣಿ ಫ್ಯಾಮಿಲಿ ಪ್ರತಿದಿನ ನೂರು ಜನಕ್ಕೆ ಊಟ ಕೊಡಲು ಪಬ್ಲಿಕ್ ಟಿವಿ ಮೂಲಕ ಘೋಷಿಸಿದೆ.
ಮುಂದಿನ 21 ದಿನ ನಗರದ ಅಲ್ಲಲ್ಲಿ ನೂರು ಊಟ ಕೊಡುವುದಾಗಿ ರಾಘವೇಂದ್ರ ಕಿಣಿ ಘೋಷಿಸಿದ್ದಾರೆ. ಜನರಿದ್ದಲ್ಲಿಗೆ ಪ್ರತಿದಿನ ಊಟ ಪಾರ್ಸೆಲ್ ಆಗಲಿದೆ. ಅಡುಗೆಗೆ, ಸಪ್ಲೈಗೆ ಜನರನ್ನು ಆಯ್ಕೆ ಮಾಡಿದ್ದೇವೆ. ಸ್ವಚ್ಛತೆಗೆ ಅಡ್ಡಿಯಾಗದೆ, ಸರ್ಕಾರದ ಆರೋಗ್ಯ ಇಲಾಖೆಯ ನಿಯಮ ಪಾಲಿಸಿಕೊಂಡು ಊಟ ವಿತರಿಸುವುದಾಗಿ ರಾಘವೇಂದ್ರ ಕಿಣಿ ಹೇಳಿದ್ದಾರೆ.
Advertisement
Advertisement
ಸಹೋದರ ನರಸಿಂಹ ಕಿಣಿಯವರ ಕಡಿಯಾಳಿಯ ಹೋಟೆಲಿನಲ್ಲಿ ಊಟದ ಪೊಟ್ಟಣ ಪಾರ್ಸೆಲ್ ಕಟ್ಟಲಾಗುತ್ತಿದೆ. ಕಾರು, ಬೈಕ್ ಮೂಲಕ ನಗರದ ಕಲ್ಸಂಕ, ಸಿಟಿ ಬಸ್ ನಿಲ್ದಾಣ, ಅಜ್ಜರಕಾಡು ಪಾರ್ಕ್, ಅಂಬಲಪಾಡಿ, ಸಂತೆಕಟ್ಟೆ ಕಲ್ಯಾಣಪುರದಲ್ಲಿ ಊಟ ಅಗತ್ಯ ಇರುವವರಿಗೆ ವಿತರಿಸುವ ನಿರ್ಧಾರವನ್ನು ಕಿಣಿಯವರ ಟ್ರಸ್ಟ್ ಮೂಲಕ ಮಾಡಲಾಗಿದೆ.
Advertisement
ಯುಗಾದಿ ಆಚರಿಸುವ ಸಂದರ್ಭ ಕೋವಿಡ್ 19 ಹಬ್ಬದ ಖುಷಿಗೆ ಅಡ್ಡಿಯಾಗಿ ನಿಂತಿದೆ. ನಾವು ಹಬ್ಬ ಮಾಡಬಹುದು, ಒಪ್ಪೊತ್ತು ಊಟ ಇಲ್ಲದವರು ನಮ್ಮ ನಡುವೆ ಕೋಟಿ ಜನರು ಇದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಅಭಿಯಾನಕ್ಕೆ ಕೈ ಜೋಡಿಸಲಿ. ಮನೆ ಪಕ್ಕದಲ್ಲಿ ಊಟಕ್ಕೆ ಕಷ್ಟ ಇರುವ ಮನೆಗೆ ನಾಲ್ಕು ಊಟ ಬಡಿಸಿದರೆ ಅದೊಂದು ಪುಣ್ಯಕಾರ್ಯ ಆಗುತ್ತದೆ ಎಂದು ರಾಘವೇಂದ್ರ ಕಿಣಿ ಹೇಳಿದರು.
Advertisement
ಸಹೋದರ ನರಸಿಂಹ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ತಮ್ಮನ ಜನ ಸೇವೆಗೆ ನಾನೂ ಸಹಾಯ ಮಾಡುತ್ತಿರುವುದು ಖುಷಿಯಾಗುತ್ತದೆ. ದೊಡ್ಡ ಸಂಕಷ್ಟ ಜನಕ್ಕೆ ಬಾರದಿರಲಿ ಎಂಬುದು ನನ್ನ ಪ್ರಾರ್ಥನೆ ಎಂದರು. ರಾಜ್ಯದ ಮೂಲೆ ಮೂಲೆಯಲ್ಲಿ ಜನ ಅನ್ನದಾನಕ್ಕೆ ಸಿದ್ಧರಾಗಬೇಕು. ಅನ್ನದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ ಎಂದರು. ಸಾಮಾಜಿಕ ಕಾರ್ಯಕರ್ತರು ಆಹಾರದ ಪೊಟ್ಟಣ ವಿತರಿಸುವ ಕೆಲಸ ಮಾಡಿದರು. ಅಂತರ ಕಾಯ್ದು, ಶುಚಿತ್ವದಲ್ಲಿ ಊಟ ಮಾಡುವಂತೆ ವಿನಂತಿ ಮಾಡಲಾಯಿತು.