ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಬಳಿಕ ಈಗ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಐಪಿಎಲ್‍ನಿಂದ ಅಮಾನತುಗೊಳ್ಳುವ ಸಾಧ್ಯತೆಯಿದೆ.
ಪಂಜಾಬ್ ತಂಡದ ಮಾಲೀಕರಾಗಿರುವ ನೆಸ್ ವಾಡಿಯಾ ಜಪಾನ್ ನಲ್ಲಿ ಮಾದಕ ಪದಾರ್ಥಗಳೊಂದಿಗೆ ಸಿಕ್ಕಿಬಿದ್ದು ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವ ಬಿಸಿಸಿಐ ನೆಸ್ ವಾಡಿಯಾ ಮೇಲಿರುವ ಆರೋಪ ಸಾಬೀತಾದರೆ ಪಂಜಾಬ್ ತಂಡವನ್ನು ನಿಷೇಧಿಸುವ ಸಾಧ್ಯತೆಯಿದೆ.
Advertisement
Advertisement
ಐಪಿಎಲ್ ಫ್ರಾಂಚೈಸಿ ಮಾಲೀಕರು ಆನ್‍ಫೀಲ್ಡ್ ಮತ್ತು ಆಫ್ ಫೀಲ್ಡ್ ನಿಯಮಗಳನ್ನು ಮೀರುವಂತಿಲ್ಲ. ಒಂದು ವೇಳೆ ಈ ನಿಯಮಗಳನ್ನು ಮೀರಿ ಆರೋಪ ಸಾಬೀತಾಗಿ ದೋಷಿ ಎಂದಾದರೆ ಆ ತಂಡವನ್ನು ಅಮಾನತಿನಲ್ಲಿಡಲು ಬಿಸಿಸಿಐಗೆ ಅಧಿಕಾರವಿದೆ.
Advertisement
ಈ ಪ್ರಕರಣದ ವಿಚಾರಣೆಗೆ ಬಿಸಿಸಿಐ ಒಂದು ಸಮಿತಿಯನ್ನು ನೇಮಿಸಲಿದ್ದು, ಈ ಸಮಿತಿ ಒಂಬುಡ್ಸ್‌ಮನ್ ಅವರಿಗೆ ವರದಿ ಸಲ್ಲಿಸಲಿದೆ. ಹೀಗಾಗಿ ಈ ಪ್ರಕರಣದಲ್ಲಿ ಬಿಸಿಸಿಐ ನಡೆ ಏನು ಎನ್ನುವ ಕುತೂಹಲ ಹೆಚ್ಚಾಗಿದೆ.
Advertisement
ಈ ಹಿಂದೆ ಐಪಿಎಲ್ ಮಾಲೀಕರ ಬೆಟ್ಟಿಂಗ್ ಪ್ರಕರಣ ಬೆಳಕಿಗೆ ಬಂದಾಗ ಲೋಧಾ ಸಮಿತಿ ತನಿಖೆ ನಡೆಸಿತ್ತು. ಇದಾದ ಬಳಿಕ ಚೆನ್ನೈ ಮತ್ತು ರಾಜಸ್ಥಾನ ರಾಯಲ್ಸ್ ತಂಡ 2 ವರ್ಷ ನಿಷೇಧ ಶಿಕ್ಷೆ ಅನುಭವಿಸಿತ್ತು.
ಏನಿದು ಪ್ರಕರಣ?
ಕಳೆದ ಮಾರ್ಚ್‍ನಲ್ಲಿ ನೆಸ್ ವಾಡಿಯಾ ಪ್ರವಾಸಕ್ಕೆಂದು ಜಪಾನ್‍ಗೆ ತೆರಳಿದ್ದ ವೇಳೆ ತಮ್ಮ ಬಳಿ 25 ಗ್ರಾಂ ಗಾಂಜಾ ಇಟ್ಟುಕೊಂಡಿದ್ದರು. ನ್ಯೂ ಚಿಟೋಸ್ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಶ್ವಾನಗಳು ಅವರ ಬಳಿಯಿದ್ದ ಗಾಂಜಾವನ್ನು ಪತ್ತೆ ಹಚ್ಚಿತ್ತು. ನಂತರ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿತ್ತು.
ವಿಚಾರಣೆಯ ಸಂದರ್ಭದಲ್ಲಿ ನಾನು ಸ್ವಂತ ಬಳಕೆಗಾಗಿ ಗಾಂಜಾವನ್ನು ಇಟ್ಟುಕೊಂಡಿದ್ದೆ ಎಂದು ನೆಸ್ ತಿಳಿಸಿದ್ದರು. ಈ ಹೇಳಿಕೆಯನ್ನು ಪುರಸ್ಕರಿಸಿದ ಕೋರ್ಟ್ ನೆಸ್‍ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದರೂ ನಿಯಮಗಳ ಅನ್ವಯ ಅವರ ಶಿಕ್ಷೆಯನ್ನು ಅಮಾನತ್ತಿನಲ್ಲಿ ಇಟ್ಟಿತ್ತು. ಹೀಗಾಗಿ ಅವರು ಜೈಲು ಶಿಕ್ಷೆಯಿಂದ ಪಾರಾಗಿ ಭಾರತಕ್ಕೆ ಮರಳಿದ್ದರು.
ಜಪಾನಿನಲ್ಲಿ ಡ್ರಗ್ಸ್ ಕುರಿತಂತೆ ಕಠಿಣ ಕಾನೂನು ಜಾರಿಯಾಗಿದ್ದು, ದೋಷಿಯಾದರೆ 7 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೆ ಮೊದಲ ಬಾರಿಗೆ ಸಿಕ್ಕಿಬಿದ್ದರೆ ಶಿಕ್ಷೆಯನ್ನು ಅಮಾನತಿನಲ್ಲಿ ಇಡಬಹುದಾಗಿದೆ. ಎರಡನೇ ಬಾರಿಗೆ ಸಿಕ್ಕಿಬಿದ್ದರೆ ಶಿಕ್ಷೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗುತ್ತದೆ.