ಐಷಾರಾಮಿ ಮನೆಯಲ್ಲೇ ಬಾರ್, ಮಲೇಷ್ಯಾ ಹುಡುಗಿಯರು – ಉದ್ಯಮಿಗಳಿಗೆ 200 ಕೋಟಿ ವಂಚಿಸಿದ್ದ ಕಿಂಗ್‌ಪಿನ್ ಅರೆಸ್ಟ್

Public TV
2 Min Read
Mangaluru Loan Fraud Arrest

– ಸಾಲ ನೀಡಲು 5-10 ಕೋಟಿ ರೂ. ಸ್ಟ್ಯಾಂಪ್ ಡ್ಯೂಟಿ
– ಮನೆಯಲ್ಲೇ ಸೀಕ್ರೆಟ್ ರೂಮ್ ಇಟ್ಕೊಂಡು ಭಾರೀ ವಂಚನೆ

ಮಂಗಳೂರು: ಜಿಲ್ಲಾ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಭಾರೀ ವಂಚನಾ ಜಾಲವೊಂದು ಭೇದಿಸಿದ್ದು, ಈ ಮೂಲಕ ಉದ್ಯಮಿಗಳಿಗೆ ನೂರಾರು ಕೋಟಿ ಸಾಲ ಕೊಡಿಸುವ ನೆಪದಲ್ಲಿ ಕೋಟಿ ಕೋಟಿ ವಂಚನೆ ಮಾಡುತ್ತಿದ್ದ ಕಿಂಗ್ ಪಿನ್ ರೋಹನ್‌ನನ್ನು ಬಂಧಿಸಿದ್ದಾರೆ.

ರೊನಾಲ್ಡ್ ಸಲ್ಡಾನಾ ಅಲಿಯಾಸ್ ರೋಹನ್ ಬಂಧಿತ ಆರೋಪಿ. ಗುರುವಾರ ರಾತ್ರಿ (ಜು.17) ಮಂಗಳೂರು (Mangaluru) ಹೊರವಲಯದ ಜಪ್ಪಿನಮೊಗರು ಎಂಬಲ್ಲಿನ ಐಷಾರಾಮಿ ಬಂಗಲೆಯ ಮೇಲೆ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಉತ್ತರ ಪ್ರದೇಶ| 8ರ ಬಾಲಕಿಯ ರೇಪ್‌ & ಕೊಲೆ ಕೇಸ್‌ – ಆರೋಪಿ ಎನ್‌ಕೌಂಟರ್‌ಗೆ ಬಲಿ

ಪ್ರಾಥಮಿಕ ಮಾಹಿತಿ ಪ್ರಕಾರ, ಆರೋಪಿ ರೋಹನ್ ತಾನು ಉದ್ಯಮಿಯೆಂದು ಬಿಂಬಿಸಿ ಹೊರರಾಜ್ಯ, ಹೊರಜಿಲ್ಲೆಯಲ್ಲಿರುವ ಐಷಾರಾಮಿ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿ, ಜಾಗದ ವ್ಯವಹಾರ, ಸಾಲ ನೀಡುವ ನೆಪದಲ್ಲಿ ನಂಬಿಕೆ ಗಳಿಸುತ್ತಿದ್ದ. ಅದಲ್ಲದೇ ದೇಶದ ಪ್ರಮುಖ ನಗರಗಳಲ್ಲಿ ತನ್ನ ವಂಚನೆಗಾಗಿ ಏಜೆಂಟರ್‌ಗಳನ್ನ ಇರಿಸಿದ್ದ. ಅವರ ಮೂಲಕ ಡೀಲ್ ಕುದುರಿಸಲು ಮಂಗಳೂರಿನ ತನ್ನ ಐಷಾರಾಮಿ ಮನೆಗೆ ಕರೆಸುತ್ತಿದ್ದ. ತಾನೊಬ್ಬ ಅಗರ್ಭ ಶ್ರೀಮಂತ ಅನ್ನೋ ರೀತಿ ಪೋಸ್ ಕೊಡುತ್ತಿದ್ದ.

ಮನೆಯಲ್ಲೇ ಬಾರ್:
ಮನೆಯಲ್ಲಿನ ಚಿನ್ನ, ಬಣ್ಣದ ಚಿತ್ತಾರ, ಎಲ್ಲಿ ನೋಡಿದ್ರೂ ವಿದೇಶಿ ಮದ್ಯಗಳು, ಮಲೇಶಿಯನ್ ಹುಡುಗಿಯರು ಎಲ್ಲವನ್ನು ಮನೆಗೆ ಬಂದ ಉದ್ಯಮಿಗಳಿಗೆ ನೀಡುತ್ತಿದ್ದ. ಐಷಾರಾಮಿ ಮನೆ, ಅಲ್ಲಿನ ಆತಿಥ್ಯ ನೋಡಿಯೇ ಉದ್ಯಮಿಗಳು ಖೆಡ್ಡಾಕ್ಕೆ ಬೀಳುತ್ತಿದ್ದರು.

Mangaluru Loan Fraud Arrest 1

ಮೊದಲ ಸುತ್ತಿನ ಮಾತುಕತೆ ಬಳಿಕ ಉದ್ಯಮಿಗಳನ್ನು ತನ್ನ ವಂಚನಾ ಜಾಲಕ್ಕೆ ಬೀಳಿಸಿಕೊಳ್ಳುತ್ತಿದ್ದ. ಉದ್ಯಮಿಗಳ ಒಪ್ಪಿಗೆಯ ನಂತರ 50 ರಿಂದ 100 ಕೋಟಿ ರೂ. ಅಥವಾ ಅದಕ್ಕಿಂತ ದೊಡ್ಡ ಮೊತ್ತದ ಸಾಲ ನೀಡಲು 5-10 ಕೋಟಿ ರೂ. ಸ್ಟ್ಯಾಂಪ್ ಡ್ಯೂಟಿ ಹಣ ನೀಡುವಂತೆ ಕೇಳುತ್ತಿದ್ದ. ಆತನ ಬಣ್ಣದ ಮಾತಿಗೆ ಮರುಳಾಗಿ ಉದ್ಯಮಿಗಳು ಹಿಂದೆ-ಮುಂದೆ ನೋಡದೇ ಕೋಟ್ಯಂತರ ರೂ. ಹಣವನ್ನು ನಗದು ರೂಪದಲ್ಲಿ ನೀಡುತ್ತಿದ್ದರು.

Mangaluru Loan Fraud Arrest 3

ತಾನು ನಿರೀಕ್ಷೆ ಮಾಡಿದಷ್ಟು ಹಣ ವಸೂಲಿಯಾದ ಬಳಿಕ ನಾನಾಕಾರಣ ಹೇಳಿ ಮೊಬೈಲ್ ಸ್ವಿಚ್ಛ್ ಆಫ್ ಮಾಡಿ ಉದ್ಯಮಿಗಳಿಂದ ಎಸ್ಕೇಪ್ ಆಗುತ್ತಿದ್ದ. ಹೀಗೆ ಈತನಿಂದ ವಂಚನೆಗೊಳಗಾದ ಇಬ್ಬರು ದೂರು ದಾಖಲಿಸಿದ್ದು, ದೂರಿನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಏಕಾಏಕಿ ಮನೆಗೆ ನುಗ್ಗಿ ಆರೋಪಿಯನ್ನು ಬಂಧಿಸಿದ್ದಾರೆ. ಕೇವಲ 3 ತಿಂಗಳಲ್ಲೇ 45 ಕೋಟಿ ರೂ. ವಂಚಿಸಿದ್ದು, ಈವರೆಗೂ 200 ಕೋಟಿ ರೂ. ಅಧಿಕ ಹಣವನ್ನು ವಂಚಿಸಿರುವುದು ಬಯಲಾಗಿದೆ.

ಮನೆಯಲ್ಲೇ ಸೀಕ್ರೆಟ್ ರೂಮ್:
ಬಂಗಲೆಯಲ್ಲಿಯೇ ಅಡಗು ತಾಣವನ್ನು ಮಾಡಿಕೊಂಡು, ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಲಿಂಕ್ ಮಾಡಿಸಿದ್ದ. ಮನೆಯ ಸುತ್ತಮುತ್ತಲೂ ಸಿಸಿ ಕ್ಯಾಮೆರಾ ಹಾಕಿಸಿಕೊಂಡು ಮೋಸ ಹೋದವರು ಹಣ ಕೇಳಲು ಬಂದರೆ ಸೀಕ್ರೆಟ್ ರೂಮ್‌ಗೆ ಹೋಗಿ ಮನೆಯಲ್ಲಿ ಯಾರೂ ಇಲ್ಲ ಎಂಬಂತೆ ಬಿಂಬಿಸುತ್ತಿದ್ದ.

Mangaluru Loan Fraud Arrest 2

ಪೊಲೀಸರ ತನಿಖೆ ವೇಳೆ ಮತ್ತಷ್ಟು ಮಾಹಿತಿ ಬಹಿರಂಗವಾಗಿದ್ದು, ಆತನ ಬ್ಯಾಂಕ್ ಖಾತೆಗಳಲ್ಲಿ 40 ಕೋಟಿ ರೂ. ಹಣ ಪತ್ತೆಯಾಗಿದೆ. ಜೊತೆಗೆ ಬೇರೆ ಬೇರೆ ಕಡೆಗಳಲ್ಲಿ ಉದ್ಯಮ ನಡೆಸುತ್ತಿದ್ದು, ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿದ್ದ. ತನ್ನ ಹೆಂಡತಿ ಹಾಗೂ ಮಗುವಿನೊಂದಿಗೆ ಚೆನ್ನೈನಲ್ಲಿ ವಾಸವಾಗಿದ್ದ ಈತ, ಹೆಂಡತಿಯ ಹೆಸರಿನಲ್ಲೂ ಹಲವು ಉದ್ಯಮ ನಡೆಸುತ್ತಿದ್ದ ಎನ್ನುವುದು ಬಯಲಾಗಿದೆ.ಇದನ್ನೂ ಓದಿ: ರಾಜ್ಯದಲ್ಲಿ ಮಳೆ ಅಬ್ಬರ – ಕೊಡಗಿಗೆ ರೆಡ್, 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

Share This Article