ಮಲೇಷ್ಯಾದಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜಾಂಗ್ ಉನ್ ಸಹೋದರ ಕಿಮ್ ಜಾಂಗ್ ನಾಮ್ ಕೊಲೆ ನಡೆದಿದೆ. ಯುದ್ಧದಲ್ಲಿ ಬಳಸುವ ‘ವಿಎಕ್ಸ್’ ಹೆಸರಿನ ಪ್ರಬಲ ವಿಷವನ್ನು ಬಳಸಿ ಈ ಹತ್ಯೆ ನಡೆಸಲಾಗಿದೆ. ಹೀಗಾಗಿ ಇಲ್ಲಿ ಈ ಹತ್ಯೆ ಹೇಗಾಯ್ತು ಮತ್ತು ಈ ವಿಷದ ವಿಶೇಷತೆ ಏನು ಎನ್ನುವ ಮಾಹಿತಿಯನ್ನು ನೀಡಲಾಗಿದೆ.
ಅಂದು ಏನಾಯ್ತು?
ಫೆಬ್ರವರಿ 13ರಂದು ರಾಜಧಾನಿ ಕೌಲಾಲಂಪುರದಿಂದ ಕಿಮ್ ಜಾಂಗ್ ನಾಮ್ ಚೀನಾದ ಆಡಳಿತಕ್ಕೊಳಪಟ್ಟ ಮಕಾವ್ ಪ್ರದೇಶಕ್ಕೆ ಹೋಗಬೇಕಾಗಿತ್ತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟಿಕೆಟ್ ಖರೀದಿಸಲು ಮುಂದಾಗುತ್ತಿದ್ದಾಗ ಇದ್ದಕ್ಕಿಂದಂತೆ ನಾಮ್ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ ಇಬ್ಬರು ಅಪರಿಚಿತ ಮಹಿಳೆಯರು ಏನೋ ಸ್ಪ್ರೇ ಮಾಡಿದರು ಎಂದು ಕೊನೆಯದಾಗಿ ಹೇಳಿದ್ದರು.
Advertisement
ವಿಷ ಬಳಸಿ ಹತ್ಯೆ:
ಮರಣೋತ್ತರ ಪರೀಕ್ಷೆಯಲ್ಲಿ ಬಳಿಕ ಕಿಮ್ ಜಾಂಗ್ ನಾಮ್ ಅವರನ್ನು ರಾಸಾಯನಿಕ ಯುದ್ಧದಲ್ಲಿ ಬಳಸುವ ವಿಎಕ್ಸ್ ಹೆಸರಿನ ವಿಷವನ್ನು ಸಿಂಪಡಿಸಿ ಹತ್ಯೆ ಮಾಡಲಾಗಿದೆ ಎಂದು ಮಲೇಷ್ಯಾ ಪೊಲೀಸರು ಅಧಿಕೃತವಾಗಿ ಹೇಳಿದರು. ಪೊಲೀಸರ ಹೇಳಿಕೆಯಿಂದಾಗಿ ಈಗ ವಿಶ್ವದಲ್ಲಿ ಈ ಕೊಲೆ ಕೇಸ್ ಭಾರೀ ಸದ್ದು ಮಾಡುತ್ತಿದೆ.
Advertisement
ಏನಿದು ವಿಎಕ್ಸ್?
Venomous Agent X ಹೃಸ್ವರೂಪವೇ ವಿಎಕ್ಸ್. ಇದೊಂದು ರಾಸಾಯನಿಕ ಅಸ್ತ್ರವಾಗಿದ್ದು ದ್ರವ, ಗ್ಯಾಸ್, ಕ್ರೀಂ ರೂಪದಲ್ಲಿ ಬಳಸಬಹುದು. ಈ ರಾಸಾಯನಿಕ ವಿಷ ಮನುಷ್ಯನ ದೇಹ ಸೇರಿದರೆ ನೇರವಾಗಿ ನರಮಂಡಲವನ್ನು ಶಿಥಿಲಗೊಳಿಸಿ ಆತನ ಸಾವಿಗೆ ಕಾರಣವಾಗುತ್ತದೆ. ಈ ಕಾರಣಕ್ಕೆ ಇಂಗ್ಲಿಷಿನಲ್ಲಿ ಇದನ್ನು ವಿಎಕ್ಸ್ ನರ್ವ್ ಏಜೆಂಟ್ಸ್ ಎಂದು ಕರೆಯಲಾಗುತ್ತದೆ.
Advertisement
ಎಷ್ಟು ಪವರ್‍ಫುಲ್ ?
ವಿಎಕ್ಸ್ ರಾಸಾಯನಿಕ ಅಸ್ತ್ರ ಎಷ್ಟು ಪವರ್‍ಫುಲ್ ಅಂದ್ರೆ ದೇಹದ ಒಳಗಡೆ ಸೇರಿದ 20 ನಿಮಿಷದಲ್ಲಿ ವ್ಯಕ್ತಿ ಮೃತಪಡುತ್ತಾನೆ. ಕೇವಲ 10 ಮಿಲಿ ಗ್ರಾಂ ವಿಎಕ್ಸ್ ದೇಹಕ್ಕೆ ಸೇರಿದರೂ ಆತನ ಸಾವು ನಿಶ್ಚಿತ. ಮೃತ ವ್ಯಕ್ತಿಯ ಮುಖ ಮತ್ತು ಕಣ್ಣುಗಳಲ್ಲಿ ವಿಎಕ್ಸ್ ರಾಸಾಯನಿಕ ಬಳಸಿದ ಕುರುಹುಗಳನ್ನು ಪತ್ತೆಯಾಗುತ್ತದೆ.
Advertisement
ಬಳಕೆ ಹೇಗೆ?
ಸಾಧಾರಣವಾಗಿ ವ್ಯಕ್ತಿಯ ಮುಖ ಅಥವಾ ದೇಹದ ಮೇಲೆ ಸಿಂಪಡಿಸಿ ಹತ್ಯೆ ಮಾಡಲಾಗುತ್ತದೆ. ಇಲ್ಲದಿದ್ದಲ್ಲಿ ವ್ಯಕ್ತಿ ಆಹಾರ ಮತ್ತು ಪಾನೀಯದಲ್ಲಿ ಮಿಶ್ರಣ ಮಾಡಿ ನೀಡಲಾಗುತ್ತದೆ.
ಸಂಶೋಧಿಸಿದ್ದು ಯಾರು?
ಇಂಗ್ಲೆಂಡಿನ ಐಸಿಐ ಕಂಪೆನಿಯ ವಿಜ್ಞಾನಿಗಳು ಈ ರಾಸಾಯನಿಕವನ್ನು ಮೊದಲು ಕಂಡುಹಿಡಿದರು. ಕೀಟನಾಶಕ ಕಂಪೆನಿಗೆ ಕೆಲಸ ಮಾಡುತ್ತಿದ್ದಾಗ ಈ ವಿಷವನ್ನು ಅಭಿವೃದ್ಧಿ ಪಡಿಸಿದರು. ಇದಾದ ಬಳಿಕ ಇಂಗ್ಲೆಂಡ್ ಅಮೆರಿಕಕ್ಕೆ ಈ ವಿಷದ ಮಾಹಿತಿಯನ್ನು ನೀಡಿತು. ಇದಾದ ಬಳಿಕ ರಷ್ಯಾ ಈ ವಿಷವನ್ನು ಬಳಸತೊಡಗಿತು. ಇರಾಕ್ ಸರ್ವಾಧಿಕಾರಿ ಸದ್ದಾ ಹುಸೇನ್ ಈ ವಿಷವನ್ನು ಬಳಸಿ ತನ್ನ ವಿರೋಧಿಗಳನ್ನು ಹತ್ಯೆ ಮಾಡುತ್ತಿದ್ದ. 1995ರಲ್ಲಿ ಜಪಾನ್ ಟೋಕಿಯೋ ಸಬ್‍ವೇಯಲ್ಲಿ ಗುಂಪೊಂದು ಈ ರಾಸಾಯನಿಕವನ್ನು ಬಳಸಿ 12 ಜನರನ್ನು ಹತ್ಯೆ ಮಾಡಿತ್ತು.
ರಾಸಾಯನಿಕ ಯುದ್ಧದಲ್ಲಿ ಬಳಕೆ ಹೇಗೆ?
ಆರ್ಟಿಲರಿ ಶೆಲ್, ರಾಕೆಟ್, ಕ್ಷಿಪಣಿ ಸಿಡಿತಲೆ, ವಿಮಾನದಿಮದ ಹಾಕುವ ಬಾಂಬ್, ಸ್ಪ್ರೇ ಟ್ಯಾಂಕ್ ಗಳಲ್ಲಿ ವಿಎಕ್ಸ್ ರಾಸಾಯನಿಕ ಅಸ್ತ್ರವನ್ನು ಬಳಸಲಾಗುತ್ತದೆ.
ತಯಾರಿಕೆ ಸುಲಭವೇ?
ಈ ವಿಷವನ್ನು ಸುಲಭವಾಗಿ ತಯಾರಿಸಲು ಸಾಧ್ಯವಿಲ್ಲ. ದೀರ್ಘಾವಧಿಗೆ ಇದನ್ನು ಸಂಗ್ರಹಿಸುವುದು ಕಷ್ಟದ ಕೆಲಸ. ತಯಾರಿಕೆಗೆ ಭಾರೀ ಪ್ರಮಾಣದ ಹಣ ಬೇಕಾಗುತ್ತದೆ.
ಅಂತಾರಾಷ್ಟ್ರೀಯ ಕಾನೂನು ಏನು ಹೇಳುತ್ತೆ?
ವಿಶ್ವಸಂಸ್ಥೆಯ ಸಮೂಹ ನಾಶಕ ಆಯುಧಗಳ ಪಟ್ಟಿಯಲ್ಲಿ ವಿಎಕ್ಸ್ ಹೆಸರಿದ್ದು ಇದರ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ ವಿಎಕ್ಸ್ ವಿಷ ಸೇರಿದಂತೆ 5,000 ಟನ್‍ಗಳಷ್ಟು ರಾಸಾಯನಿಕ ಅಸ್ತ್ರಗಳನ್ನು ಉತ್ತರ ಕೊರಿಯಾ ದಾಸ್ತಾನು ಮಾಡಿಕೊಂಡಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಕೊಲೆ ಮಾಡಿದವರು ಯಾರು?
ಉತ್ತರ ಕೊರಿಯಾದಿಂದ ಗಡಿಪಾರು ಆಗಿದ್ದ ಹಿನ್ನೆಲೆಯಲ್ಲಿ ಜಾಂಗ್ ನಾಮ್ ದೇಶದ ಹೊರಗಡೆ ಜೀವಿಸುತ್ತಿದ್ದರು. ಕಿಮ್ ಜಾಂಗ್ ನಾಮ್ ಉತ್ತರ ಕೊರಿಯಾದ ಅಧ್ಯಕ್ಷರಾಗಬೇಕು ಎನ್ನುವ ಮಾತುಗಳು ಈ ಹಿಂದಿನಿಂದಲೇ ಕೇಳಿ ಬಂದಿತ್ತು. ತಮ್ಮ ಕಿಮ್ ಜಾಂಗ್ ಉನ್ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸುತ್ತಿದ್ದರು. ಈ ಮಧ್ಯೆ ತಮ್ಮನನ್ನು ಇಳಿಸಿ ಅಧ್ಯಕ್ಷರಾಗಲು ಕಿಮ್ ಜಾಂಗ್ ಹೊರಟಿದ್ದರು ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಅಣ್ಣನನ್ನು ವಿಎಕ್ಸ್ ವಿಷದ ಮೂಲಕ ಕಿಮ್ ಜಾಂಗ್ ನಮ್ ಹತ್ಯೆ ಮಾಡಿರಬಹುದು ಎನ್ನುವ ಆರೋಪ ಕೇಳಿ ಬಂದಿದೆ.
ಚಲನ ಚಿತ್ರ ಬಂದಿವೆ:
ಈ ವಿಎಕ್ಸ್ ವಿಷವನ್ನು ಕೇಂದ್ರವಾಗಿಟ್ಟುಕೊಂಡು ಚಲನಚಿತ್ರ ಮತ್ತು ಸಾಕ್ಷ್ಯಚಿತ್ರಗಳು ಬಂದಿವೆ. 1996ರಲ್ಲಿ ಹಾಲಿವುಡ್‍ನಲ್ಲಿ ದಿ ರಾಕ್ ಚಿತ್ರ ತಯಾರಾಗಿದೆ. ಬಿಬಿಸಿ, ಹಿಸ್ಟರಿ ವಾಹಿನಿಗಳು ಈ ವಿಷದ ಬಗ್ಗೆ ಸಾಕ್ಷ್ಯಚಿತ್ರಗಳನ್ನು ತಯಾರಿಸಿವೆ.
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್