ಬೆಂಗಳೂರು: ರಾಜ್ಯದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಚಿಕ್ಕ ವಯಸ್ಸಿಗೇನೆ ಕಿಡ್ನಿಗಳನ್ನ ಕಳೆದುಕೊಂಡು ಜನರ ಜೀವನ ನರಕವಾಗುತ್ತಿದೆ. ಅದರಲ್ಲೂ ಕಿಡ್ನಿ ಡ್ಯಾಮೇಜ್ ಮಾಡಿಕೊಳ್ಳೋರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಿದ್ದು, ಪ್ರತಿ ವರ್ಷಕ್ಕೆ 2 ಲಕ್ಷ ಮಂದಿ ಹೊಸ ಕಿಡ್ನಿ ಸಮಸ್ಯೆಯ ರೋಗಿಗಳು ಆಸ್ಪತ್ರೆ ಸೇರುತ್ತಿದ್ದಾರೆ ಎನ್ನಲಾಗಿದೆ.
ಬದಲಾಗುತ್ತಿರುವ ಜನರ ಜೀವನ ಶೈಲಿಯಿಂದ ಒಂದಲ್ಲ ಒಂದು ಕಾಯಿಲೆಗೆ ತುತ್ತಾಗ್ತಿದ್ದಾರೆ. ಅದರಲ್ಲೂ ಸಿಲಿಕಾನ್ ಸಿಟಿ ಮಂದಿ ನೀರನ್ನು ಕುಡಿಯುವುದು ಕೂಡ ಕಮ್ಮಿ, ಹೀಗಾಗಿ ಇತ್ತೀಚೆಗೆ ಸಾರ್ವಜನಿಕರಲ್ಲಿ ಕಿಡ್ನಿ ಸಮಸ್ಯೆ ಹೆಚ್ಚಾಗ್ತಿದೆ. ಕಿಡ್ನಿಯಲ್ಲಿ ಕಲ್ಲುಗಳು ಬೆಳೆಯುವ ಪ್ರಕರಣಗಳು ಜಾಸ್ತಿಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಅದರಲ್ಲೂ ಬೇಸಿಗೆ ಕಾಲ ಬಂದರೆ ಈ ಪ್ರಕರಣಗಳ ಸಂಖ್ಯೆ ಶೇ. 20ರಷ್ಟು ಹೆಚ್ಚಾಗಲಿದೆ ಎಂದು ವೈದ್ಯರು ಹೇಳಿದ್ದಾರೆ. ಅದರಲ್ಲೂ ಕಳೆದ ಹದಿನೈದು ತಿಂಗಳುಗಳಿಂದ ಕಿಡ್ನಿ ಸ್ಟೋನ್ ಇರುವ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ನಗರದ ವಿಕ್ಟೋರಿಯಾ ಆವರಣದಲ್ಲಿರುವ ನೆಪ್ರೋಯುರಾಲಜಿ ಆಸ್ಪತ್ರೆಯಲ್ಲಿ ಬೆಡ್ ಕೂಡ ಸಿಗುತ್ತಿಲ್ಲ. ಇದಕ್ಕೆ ನಮ್ಮ ಜೀವನ ಶೈಲಿಯೇ ಕಾರಣ ಎಂದು ವೈದ್ಯರು ತಿಳಿಸಿದರು.
ದಿನಕ್ಕೆ 3-4 ಲೀಟರ್ ನೀರು ಕುಡಿಯುವುದು ಒಳ್ಳೆದು:
ಸಿಕ್ಕಾಪಟ್ಟೆ ಹೆಚ್ಚಾಗ್ತಿದ್ದಾರೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಜಂಕ್ ಫುಡ್, ಬಿಯರ್ ಕುಡಿತದಿಂದ ಕಿಡ್ನಿ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಹೆಚ್ಚು ನೀರು ಕುಡಿಯುವವರ ಸಂಖ್ಯೆ ಕಡಿಮೆ ಆಗಿರುವುದರಿಂದ ಕಿಡ್ನಿಯಲ್ಲಿ ಕಲ್ಲುಗಳು ಆಗುತ್ತಿರುವ ರೋಗಿಗಳ ಸಂಖ್ಯೆ ಶೇ. 20ರಷ್ಟು ಹೆಚ್ಚಳವಾಗಿದೆ. ಬಿಪಿ, ಶುಗರ್ ಇರುವ ಮಂದಿಗೆ ಕಿಡ್ನಿ ವೈಫಲ್ಯವಾಗುತ್ತಿದೆ. ದಿನಕ್ಕೆ ಕನಿಷ್ಟ 3ರಿಂದ 4 ಲೀಟರ್ ನೀರನ್ನ ಕುಡಿಯಲೇ ಬೇಕು. ಅದರಲ್ಲೂ ಬೇಸಿಗೆ ಬಂದರೆ ರೋಗಿಗಳ ಸಂಖ್ಯೆ ಹೆಚ್ಚಾಗಲಿದೆ. ಉಪ್ಪಿನಾಂಶ, ರೆಡ್ ಮೀಟ್‍ನಿಂದಲೂ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ನೆಪ್ರೋಯುರಾಲಜಿ ಆಸ್ಪತ್ರೆ ನಿರ್ದೇಶಕ ಡಾ. ಕೇಶವ್ ಮೂರ್ತಿ ಹೇಳಿದರು.
ಕಳೆದ ಹದಿನೈದು ದಿನಗಳಿಂದ ನೆಪ್ರೋಯುರಾಲಜಿಗೆ ಬರುವ ರೋಗಿಗಳು ಹೆಚ್ಚುತ್ತಿದ್ದಾರೆ. ಇತ್ತೀಚೆಗೆ ನಾವು ತಿನ್ನೋ ಪದಾರ್ಥಗಳೇ ನಮ್ಮ ಕಿಡ್ನಿ ಸಮಸ್ಯೆ ಕಾರಣ. ಸರಿಯಾಗಿ ನೀರು ಕುಡಿಯದ ಪರಿಣಾಮ ಕಿಡ್ನಿಯಲ್ಲಿ ಕಲ್ಲು ಬೆಳೆಯುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ದೇಹದ ಅತ್ಯಮೂಲ್ಯ ಅಂಗವಾಗಿರುವ ಕಿಡ್ನಿಗೆ ಇತ್ತೀಚೆಗೆ ಹೆಚ್ಚು ಸಮಸ್ಯೆ ಆಗ್ತಿದೆ.