ಜೈಪುರ್: 15 ವರ್ಷದ ಅಪ್ರಾಪ್ತೆಯನ್ನು ಆಕೆಯ ಪತಿ ಸೇರಿ ನಾಲ್ವರು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಬುಂಡಿಯಲ್ಲಿ ನಡೆದಿದೆ.
ಸಂತ್ರಸ್ತೆಗೆ ಚಿಕ್ಕ ವಯಸ್ಸಿನಲ್ಲಿಯೇ ವಿವಾಹವಾಗಿದೆ ಎಂದು ತಿಳಿದು ಬಂದಿದೆ. ನವೆಂಬರ್ 27 ರಂದು ಸಂತ್ರಸ್ತೆ ತನ್ನ ಸ್ನೇಹಿತರ ಜೊತೆ ಶಾಲೆಗೆ ಹೋಗುತ್ತಿದ್ದಳು. ಆಗ ಒಂದು ವ್ಯಾನಿನಲ್ಲಿ ನಾಲ್ವರು ಅಪರಿಚಿತರು ಬಂದು ಅಪಹರಿಸಿದ್ದಾರೆ. ಅವರಲ್ಲಿ ಒಬ್ಬ ಆಕೆಯ ಪತಿ ಎಂದು ಪೊಲೀಸರು ಶಂಕಿಸಿದ್ದಾರೆ.
ಸಂತ್ರಸ್ತೆಯ ತಂದೆ ಬಾಬು ಲಾಲ್ ಗುಜ್ಜರ್, ಹಿಂದೋಲಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ನೀಡಿದ್ದಾರೆ. ತನ್ನ ಮಗಳು ಸ್ನೇಹಿತರೊಂದಿಗೆ ಶಾಲೆಗೆ ಹೋಗುವಾಗ ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದಾರೆ. ಅಪಹರಣಕಾರರು ನನ್ನ ಮಗಳ ಜೊತೆಗಿದ್ದ ಇತರರನ್ನು ಅಪಹರಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ಸಂತ್ರಸ್ತೆ ಅಪ್ರಾಪ್ತೆಯಾಗಿರುವುದರಿಂದ ಬಾಲಿಕಾ ಗೃಹದಲ್ಲಿ ಇರಿಸಲಾಗಿದೆ. ಈಗಾಗಲೇ ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ. ಸಂತ್ರಸ್ತೆಯನ್ನು ಬಾಲಿಕಾ ಗೃಹದಿಂದ ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಸತ್ನಾಮ್ ಸಿಂಗ್ ತಿಳಿಸಿದ್ದಾರೆ.