– ರೇವಣ್ಣ ಪರ ವಕೀಲ ಸಿವಿ ನಾಗೇಶ್ ವಾದ
– ಮತ್ತಷ್ಟು ಸಮಯಾವಕಾಶ ಕೇಳಿದ ಎಸ್‌ಪಿಪಿ
ಬೆಂಗಳೂರು: ಸಂತ್ರಸ್ತೆಯನ್ನು ಕಿಡ್ನಾಪ್ (Kidnap) ಮಾಡಿಸಿದ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ (Judicial Custody) ಮಾಜಿ ಮಂತ್ರಿ ಹೆಚ್‌ಡಿ ರೇವಣ್ಣಗೆ (HD Revanna) ಇಂದು ಕೂಡ ಜಾಮೀನು (Bail) ಸಿಗಲಿಲ್ಲ. ಸುದೀರ್ಘ ವಿಚಾರಣೆ ಬಳಿಕ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಇಂದು ಬೆಳಗ್ಗೆ ಜಾಮೀನು (Bail) ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿ (SIT) ಪರ ವಕೀಲರು ಮತ್ತಷ್ಟು ಸಮಯಾವಕಾಶ ಕೋರಿದರು. ಇದಕ್ಕೆ ಜಡ್ಜ್ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿ ದಿನ ಹೊಸ ವಿಶೇಷ ಸಾರ್ವಜನಿಕ ಅಭಿಯೋಜಕರು (SPP) ಬರುತ್ತಾರೆ. ಹಾಗೆಂದ ಮಾತ್ರಕ್ಕೆ ಸಮಯ ನೀಡಲು ಆಗುವುದಿಲ್ಲ. ನಾನು ವಾದ-ಪ್ರತಿವಾದ ಆಲಿಸಲು ರೆಡಿ ಇದ್ದೇನೆ. ನೀವು ಮಧ್ಯಾಹ್ನವೇ ವಾದ ಮಂಡಿಸಿ ಎಂದ ನ್ಯಾಯಾಧೀಶರು ಕೆಲ ಹೊತ್ತು ವಿಚಾರಣೆ ಮುಂದೂಡಿದರು. ಇದನ್ನೂ ಓದಿ: ಕರ್ನಾಟಕ ಬಿಜೆಪಿ ಐಟಿ ಸೆಲ್ ಸಂಚಾಲಕ ಪ್ರಶಾಂತ್ ಮಾಕನೂರು ಅರೆಸ್ಟ್
ಮಧ್ಯಾಹ್ನವೂ ಎಸ್‌ಐಟಿ ಪರ ವಕೀಲರು ಇದೇ ವಿಚಾರ ತಿಳಿಸಿದರೂ ನ್ಯಾಯಾಧೀಶರು ವಾದ-ಪ್ರತಿವಾದಕ್ಕೆ ಅವಕಾಶ ನೀಡಿದರು. ಈ ಸಂದರ್ಭದಲ್ಲಿ ರೇವಣ್ಣ ಪರ ವಕೀಲ ಸಿವಿ ನಾಗೇಶ್, ಕಿಡ್ನಾಪ್ ಪ್ರಕರಣದಲ್ಲಿ ರೇವಣ್ಣ ಪಾತ್ರ ಸಾಬೀತಾಗಿಲ್ಲ. ಪ್ರಕರಣವನ್ನು ಅಗತ್ಯಕ್ಕಿಂತ ಹೆಚ್ಚು ವೈಭವೀಕರಿಸಲಾಗಿದೆ. ಯಾರೋ ಬಂದು ಯಾರದ್ದೋ ಹೆಸರು ಹೇಳಿದ ಮಾತ್ರಕ್ಕೆ ಕಕ್ಷಿದಾರರು ಆರೋಪಿ ಆಗುವುದಿಲ್ಲ. ಇದು ರಾಜಕೀಯ ಪ್ರೇರಿತ ಪ್ರಕರಣವಾಗಿದೆ. ಪ್ರಾದೇಶಿಕ ಪಕ್ಷದ ಮೇಲೆ ದಾಳಿ ನಡೆಸಲಾಗ್ತಿದೆ ಎಂದು ವಾದ ಮಂಡಿಸಿದರು. ಇದನ್ನೂ ಓದಿ: ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣಕ್ಕೆ ಟ್ವಿಸ್ಟ್- ಸಂತ್ರಸ್ತೆಗೆ ಮೂವರಿಂದ ಬೆದರಿಕೆ!
ಸಂತ್ರಸ್ತೆ ಸಿಕ್ಕಿದ್ದಾರೆ ಎನ್ನುತ್ತಿದ್ದಾರೆ. ಆದರೆ ಸಂತ್ರಸ್ತೆಯ ವಿವರ ನೀಡುತ್ತಿಲ್ಲ. ಸಂತ್ರಸ್ತೆ ಪತ್ತೆಯಾದ ಜಾಗದಲ್ಲಿ ಸ್ಥಳ ಮಹಜರು ನಡೆಸಿಲ್ಲ ಎಂದು ಎಸ್‌ಐಟಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು. ಇದೊಂದು ಸಾಮಾನ್ಯ ಪ್ರಕರಣ. ವಿಚಾರಣೆಗೂ ರೇವಣ್ಣ ಸಹಕರಿಸಿದ್ದಾರೆ. ಜಾಮೀನು ಮಂಜೂರು ಮಾಡಿ ಎಂದು ಮನವಿ ಮಾಡಿದರು.
ಇದಕ್ಕೆ ಎಸ್‌ಐಟಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಅಪಹರಣ ಪ್ರಕರಣ ಆರೋಪಿಯ ಮೇಲೆ ಈಗಾಗಲೇ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಇದು ದೊಡ್ಡ ಅಪರಾಧ. ಅವರು ಹೊರಗೆ ಬಂದರೆ ಸಾಕ್ಷಿ ನಾಶ ಮಾಡುವ ಸಂಭವ ಇದೆ. ತಮಗೆ ವಾದ ಮುಂದುವರೆಸಲು ಸೋಮವಾರದವರೆಗೂ ಅವಕಾಶ ಬೇಕು ಎಂದು ಕೋರಿದರು. ಇದು ಕಾಲಹರಣ ಪ್ರಯತ್ನ ಎಂದು ರೇವಣ್ಣ ಪರ ವಕೀಲರು ದೂರಿದರು. ಕೊನೆಗೆ ವಿಚಾರಣೆಯನ್ನು ನ್ಯಾಯಾಧೀಶರು ಸೋಮವಾರಕ್ಕೆ ಮುಂದೂಡಿದರು.