ಬೆಂಗಳೂರು: ಜಾಮೀನು ಸಿಗುವ ನಿರೀಕ್ಷೆಯಲ್ಲಿರುವ ಮಾಜಿ ಸಚಿವ ಎಚ್.ಡಿ ರೇವಣ್ಣ (HD Revanna) ಅವರು ಸದ್ಯ ಟೆನ್ಶನ್ ಆಗಿದ್ದಾರೆ
ಕಿಡ್ನಾಪ್ ಕೇಸ್‍ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ (Parappana Agrahara Jail) ರೇವಣ್ಣ ಅವರು ಇಂದು ಮುಂಜಾನೆ 4.30ಕ್ಕೆ ನಿದ್ರೆಯಿಂದ ಎದ್ದು ಜೈಲಿನ ಬ್ಯಾರಕ್ ನಲ್ಲಿ ಕೆಲ ಹೊತ್ತು ವಾಕಿಂಗ್ ಮಾಡಿದ್ದಾರೆ. ಬಳಿಕ ಜೈಲ್ ಸಿಬ್ಬಂದಿ ಕಾಫಿ ನೀಡಿದ್ದಾರೆ. ಕಾಫಿ ಕುಡಿದ ಬಳಿಕ ದಿನಪತ್ರಿಕೆಯಲ್ಲಿನ ವಿದ್ಯಮಾನಗಳ ಕಡೆ ಕಣ್ಣಾಡಿಸಿದ್ದಾರೆ. ಜೈಲಿನ ಮೇನು ಪ್ರಕಾರ ಸಿಬ್ಬಂದಿ ಇಂದು ಉಪ್ಪಿಟ್ಟು ನೀಡಿದ್ದಾರೆ.
ಕಳೆದ ಐದು ದಿನಗಳಿಂದ ರೇವಣ್ಣ (HD Revanna) ಜೈಲಿನಲ್ಲಿದ್ದಾರೆ. ಒಬ್ಬ ಸಾಮಾನ್ಯ ವಿಚಾರಣಾಧೀನ ಬಂಧಿಯಂತೆ ದಿನ ಕಳೆಯುತ್ತಿದ್ದು, ಇಂದು ಬೇಲ್ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಬೇಲ್ ಸಿಕ್ರೆ ಬಿಡುಗಡೆ ಭಾಗ್ಯ, ಇಲ್ಲ ಅಂದ್ರೆ ಜೈಲಿನಲ್ಲಿ ಸೆರೆವಾಸ ಮುಂದುವರಿಕೆಯಾಗಲಿದೆ. ಇದನ್ನೂ ಓದಿ: ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ ಚಲಾಯಿಸಿ: ಮೋದಿ ಕರೆ
ಸಂತ್ರಸ್ತೆ ಕಿಡ್ನಾಪ್ ಸಂಬಂಧ ಹೆಚ್.ಡಿ ರೇವಣ್ಣ ಹಾಗೂ ಸತೀಶ್ ಬಾಬಣ್ಣ ವಿರುದ್ಧ ಕೆ.ಆರ್ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಪ್ರಕರಣದಲ್ಲಿ ರೇವಣ್ಣ ಮೊದಲನೇ ಆರೋಪಿಯಾಗಿದ್ದಾರೆ. ಕಿಡ್ನಾಪ್ ಪ್ರಕರಣದ ತನಿಖೆ ನಡೆಸುತ್ತಿರೋ ಎಸ್‍ಐಟಿ, ರೇವಣ್ಣರನ್ನ ನಾಲ್ಕು ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದೆ. ವಿಚಾರಣೆ ಬಳಿಕ ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಎಸ್ ಪಿಪಿ ಜೈನಾ ಕೊಥಾರಿ ಹಾಗೂ ಆಶೋಕ್ ನಾಯಕ್ ಅವರು ಎಸ್‍ಐಟಿ ಪರ ವಾದ ಮಂಡಿಸಲಿದ್ದು, ಇತ್ತ ಹಿರಿಯ ವಕೀಲ ಸಿ ವಿ ನಾಗೇಶ್ ಅವರು ರೇವಣ್ಣ ಪರ ವಾದ ಮಂಡಿಸಲಿದ್ದಾರೆ. ಈಗಾಗಲೇ ಜಾಮೀನಿಗೆ ಎಸ್‍ಐಟಿ ಆಕ್ಷೇಪಣೆ ಸಲ್ಲಿಸಿದೆ. ಮಾಜಿ ಸಚಿವರು ಕಳೆದ ಬುಧವಾರ ಪರಪ್ಪನ ಆಗ್ರಹಾರ ಜೈಲು ಸೇರಿದ್ದರು. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ರೇವಣ್ಣಗೆ ಜೈಲಿನಿಂದ ಮುಕ್ತಿ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.