Bengaluru City
ಬಿಎಸ್‍ವೈ ಡೈರಿ ಹೊಡೆತಕ್ಕೆ ಸ್ಟೀಲ್ ಬ್ರಿಡ್ಜ್ ಕುಸಿತ!

ಬೆಂಗಳೂರು: ಕರ್ನಾಟಕ ಸರ್ಕಾರ ಸ್ಟೀಲ್ ಸೇತುವೆ ನಿರ್ಮಾಣ ಯೋಜನೆಯನ್ನು ಕೈ ಬಿಟ್ಟಿರುವುದು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಡೈರಿ ಹೋರಾಟಕ್ಕೆ ಸಿಕ್ಕ ಜಯ ಎಂದು ಬಿಜೆಪಿ ಮುಖಂಡ ಸುರೇಶ್ ಕುಮಾರ್ ಬಣ್ಣಿಸಿದ್ದಾರೆ.
ಈ ಸಂಬಂಧ ಅವರು ‘ಬಿಎಸ್‍ವೈ ಡೈರಿ ಹೊಡೆತಕ್ಕೆ ಸ್ಟೀಲ್ ಬ್ರಿಡ್ಜ್ ಕುಸಿತ’ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಸ್ಟೀಲ್ ಬ್ರಿಡ್ಜ್ ಯೋಜನೆ ಕೈ ಬಿಟ್ಟ ತಕ್ಷಣ ಡೈರಿಯಲ್ಲಿನ ಬರವಣಿಗೆ ಮಾಯವಾಗುವುದಿಲ್ಲ. ಡೈರಿ ಕುರಿತು ಬಿಜೆಪಿ ಮಾಡುತ್ತಿದ್ದ ಆರೋಪಕ್ಕೆ ಇದೊಂದು ಸಾಕ್ಷಿಯಷ್ಟೇ ಎಂದು ಬರೆದು ಸುರೇಶ್ ಕುಮಾರ್ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ವಿಧಾನಸೌಧದಲ್ಲಿ ಬೆಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ಶಾಸಕರ ಜೊತೆ ನಡೆದ ಮಹತ್ವದ ಸಭೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ರದ್ದು ಮಾಡುವ ನಿರ್ಧಾರ ಮಾಡಿದ್ದೇವೆ ಎಂದು ಅಧಿಕೃತವಾಗಿ ತಿಳಿಸಿದರು.
ಸ್ಟೀಲ್ ಸೇತುವೆಯಿಂದ 65 ಕೋಟಿ ರೂ. ಹಣವನ್ನು ಸಿಎಂ ತೆಗೆದುಕೊಂಡಿದ್ದಾರೆ ಅಂತಾ ಆರೋಪ ಮಾಡಿದ್ದಾರೆ. ಬೆಳಗ್ಗೆ ಸಂಜೆಯಾದರೆ ಈ ಆರೋಪ ಕೇಳಿ ಕೇಳಿ ಸಾಕಾಗಿದೆ. ಸ್ಟೀಲ್ ಬ್ರಿಡ್ಜ್ ವಿಚಾರದಲ್ಲಿ ಒಂದು ರೂಪಾಯಿ ಯಾರಿಗೂ ಕೊಟ್ಟಿಲ್ಲ ಎಂದು ಜಾರ್ಜ್ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ಸ್ಟೀಲ್ ಸೇತುವೆಯಿಂದ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ. ಭ್ರಷ್ಟಾಚಾರದ ಸ್ಮಾರಕ ಅಂತಾ ಬಿಂಬಿಸಲಾಗುತ್ತಿದೆ. ಸ್ಟೀಲ್ ಬ್ರಿಡ್ಜ್ ನಿಂದ ಸರ್ಕಾರಕ್ಕೆ ಏಕೆ ಕೆಟ್ಟ ಹೆಸರು ತೆಗೆದುಕೊಳ್ಳಬೇಕು? ಚುನಾವಣೆ ಬಳಿಕ ಯಾರು ಬರುತ್ತಾರೋ ಅವರು ಮಾಡುತ್ತಾರೆ ಬಿಡಿ ಎಂದು ತಿಳಿಸಿದರು.
ಸ್ಟೀಲ್ ಬ್ರಿಡ್ಜ್ ಸಂಬಂಧ ಸಿಎಂ ಸಿದ್ದರಾಮಯ್ಯಗೆ 65 ಕೋಟಿ ರೂ. ಕಿಕ್‍ಬ್ಯಾಕ್ ಹೋಗಿದೆ. ಐಟಿ ದಾಳಿ ವೇಳೆ ಪತ್ತೆಯಾದ ಗೋವಿಂದರಾಜು ಡೈರಿಯಲ್ಲಿ 65 ಕೋಟಿ ರೂ. ಕಪ್ಪದ ಬಗ್ಗೆ ಬರವಣಿಗೆ ಸಾಕ್ಷಿ ಇದೆ ಅಂತಾ ಬಿಎಸ್‍ವೈ ಆರೋಪಿಸಿದ್ದರು.
ಏನಿದು ಸ್ಟೀಲ್‍ಬ್ರಿಡ್ಜ್ ವಿವಾದ ?: ಬೆಂಗಳೂರಿನ ಚಾಲುಕ್ಯ ಸರ್ಕಲ್‍ನಿಂದ ಹೆಬ್ಬಾಳದವರೆಗೆ 1790 ಕೋಟಿ ರೂ. ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ನಡೆಸಿತ್ತು. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಈ ಯೋಜನೆಯನ್ನು ಮಾಡಲಾಗಿತ್ತು. ಆದ್ರೆ ಬ್ರಿಡ್ಜ್ ನಿರ್ಮಾಣದಿಂದ ಸಾವಿರಾರು ಮರಗಳ ಮಾರಣಹೋಮವಾಗಲಿದ್ದು ಪರಿಸರಕ್ಕೆ ಹಾನಿಯಾಗುತ್ತೆ ಎಂಬ ಕಾರಣಕ್ಕೆ ವಿವಾದವಾಗಿತ್ತು. ಪ್ರತಿಪಕ್ಷ ಬಿಜೆಪಿ ಕೂಡ ಈ ಯೋಜನೆಯನ್ನು ವಿರೋಧಿಸಿತ್ತು. ಬಳಿಕ ಈ ಯೋಜನೆಯಲ್ಲಿ ಡೀಲ್ ಆಗಿದೆ ಅಂತಾ ಬಿಜೆಪಿ ಆರೋಪಿಸಿತ್ತು. ಪರಿಸರವಾದಿಗಳು ಚೆನ್ನೈನ ಹಸಿರು ಪೀಠದಿಂದ ಯೋಜನೆಗೆ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ಹಿನ್ನೆಲೆಯಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣ ವಿಳಂಬವಾಗಿತ್ತು. ಈ ನಡುವೆ ಗೋವಿಂದರಾಜು ಡೈರಿಯಲ್ಲಿ ಸ್ಟೀಲ್‍ಬ್ರಿಡ್ಜ್‍ಗಾಗಿ ಸಿಎಂ 65 ಕೋಟಿ ರೂ. ಕಿಕ್‍ಬ್ಯಾಕ್ ಪಡೆದಿರುವ ಉಲ್ಲೇಖವಿದೆ ಎಂದು ಬಿಎಸ್‍ವೈ ಆರೋಪ ಮಾಡಿದ್ದರು.
"Kickbacks" gave such a Kick that made Steel Bridge to collapse.
— S.Suresh Kumar, Minister – Govt of Karnataka (@nimmasuresh) March 2, 2017
ಯಡ್ಯೂರಪ್ಪನವರ "ಡೈರಿ" ಹೊಡೆತಕ್ಕೆ ಸ್ಟೀಲ್ ಬ್ರಿಡ್ಜ್ ಕುಸಿತ.
— S.Suresh Kumar, Minister – Govt of Karnataka (@nimmasuresh) March 2, 2017
"ಸ್ಟೀಲ್ ಬ್ರಿಡ್ಜ್" ಯೋಜನೆ ಕೈ ಬಿಟ್ಟ ತಕ್ಷಣ ಡೈರಿಯಲ್ಲಿನ ಬರವಣಿಗೆ ಮಾಯವಾಗುವುದಿಲ್ಲ. ಡೈರಿ ಕುರಿತು ಬಿಜೆಪಿ ಮಾಡುತ್ತಿದ್ದ ಆರೋಪಕ್ಕೆ ಇದೊಂದು ಸಾಕ್ಷಿಯಷ್ಟೇ!
— S.Suresh Kumar, Minister – Govt of Karnataka (@nimmasuresh) March 2, 2017
Thanks to Sri @BSYBJP's expose of #DonationGate @CMofKarnataka cancels #SteelFlyOver which mocked Nation as CONgress's Symbol of Corruption.
— C T Ravi ???????? ಸಿ ಟಿ ರವಿ (@CTRavi_BJP) March 2, 2017
