ಬೆಂಗಳೂರು: ಬಿಗ್ ಬಾಸ್ ಸೀಸನ್-7ರಲ್ಲಿ ಸೇಬಿಗಾಗಿ ಜಗಳ ಆಡಿದ ಸುಜಾತ, ಚಂದನ್ ಹಾಗೂ ಚೈತ್ರಾ ಕೋಟೂರು ಅವರಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡರು.
ಶನಿವಾರ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಸುದೀಪ್ ಮೊದಲು ಸುಜಾತ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಚೈತ್ರಾ ಅವರು ಸೇಬು ತೆಗೆದುಕೊಂಡ ನಂತರ ಮರುದಿನ ಅವರಿಗೆ ನೀಡದಿದ್ದರೆ ಅಲ್ಲಿಗೆ ಎಲ್ಲವೂ ಸರಿ ಹೋಗುತ್ತಿತ್ತು. ಅದನ್ನು ಬಿಟ್ಟು ನೀವು ಕಾಮನ್‍ಸೆನ್ಸ್, ನಾನ್‍ಸೆನ್ಸ್ ಎಂಬ ಪದ ಬಳಸಿ ಈ ರೀತಿ ಮಾತನಾಡುವ ಅವಶ್ಯಕತೆ ಇರಲಿಲ್ಲ ಎಂದರು. ಸುದೀಪ್ ಹೇಳುತ್ತಿದ್ದಂತೆ ಸುಜಾತ, ಚೈತ್ರಾ ಅವರ ಬಳಿ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಒಂದು ಆ್ಯಪಲ್‍ನ ಕತೆ – ಸೇಬಿಗಾಗಿ ಬಿಗ್ ಮನೆಯಲ್ಲಿ ಸ್ಪರ್ಧಿಗಳಿಂದ ರಂಪಾಟ
ಇದಾದ ಬಳಿಕ ಚೈತ್ರಾ ಬಳಿ ಮಾತನಾಡಿದ ಸುದೀಪ್, ಚೈತ್ರಾ ನೀವು ಕ್ಯಾಮೆರಾ ಬಳಿ ಹೋಗಿ ನನ್ನ ಜೊತೆ ಯಾರು ಮಾತನಾಡಲ್ಲ, ಯಾರೂ ಸೇರಲ್ಲ, ನನ್ನನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಹೇಳುತ್ತಿದ್ದೀರಿ. ಆದರೆ ಆ್ಯಪಲ್ ವಿಷಯಕ್ಕಾಗಿ ಜಗಳವಾಗಿ ನೀವು ಅಳುವಾಗ ಹಲವು ಸ್ಪರ್ಧಿಗಳು ನಿಮ್ಮನ್ನು ಸಮಾಧಾನ ಮಾಡಲು ಬಂದಿದ್ದರು. ಸ್ಪರ್ಧಿಗಳ ಬಳಿ ಹೋಗಿ ನಾನು ನಿಮ್ಮ ಬಗ್ಗೆ ತಪ್ಪು ತಿಳಿದುಕೊಂಡಿದ್ದೆ, ಧನ್ಯವಾದಗಳು ಎಂದು ಕೂಡ ಹೇಳಲಿಲ್ಲ ಎಂದು ಚೈತ್ರಾ ಅವರಿಗೆ ಬುದ್ಧಿವಾದ ಹೇಳಿದರು.
ಆ್ಯಪಲ್ ಜಗಳದಲ್ಲಿ ಡಿಸೆನ್ಸಿ ಎಂಬ ಪದ ಬಳಸಿದ ಚಂದನ್ ಅವರಿಗೂ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದು, ನಿಮ್ಮ ಪ್ರಕಾರ ಡಿಸೆನ್ಸಿ ಎಂದರೆ ಏನು ಎಂದು ಚಂದನ್ ಅವರಿಗೆ ಪ್ರಶ್ನಿಸಿದ್ದರು. ಈ ವೇಳೆ ಮಾತನಾಡಿದ ಚಂದನ್, ಬೆಳಗ್ಗೆ ಎದ್ದ ತಕ್ಷಣ ಸುಜಾತ ಅವರು ಚೈತ್ರಾಗೆ ನೀವು ಆ್ಯಪಲ್ ತಿಂದ್ರಾ ಎಂದು ಪ್ರಶ್ನಿಸಿದರು. ಆಗ ಚೈತ್ರಾ ನಾನು ತಿಂದೆ ಎಂದು ಹೇಳುವ ಬದಲು ಚಂದನ್, ರಾಜು, ಕುರಿ ಪ್ರತಾಪ್ ಅವರಿಗೆ ಕೊಟ್ಟೆ ಎಂದು ಹೇಳಿದರು. ಇದರಿಂದ ಕೋಪ ಬಂತು ಎಂದು ಚಂದನ್ ಹೇಳಿದ್ದಾರೆ.
ಚೈತ್ರಾ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಸಲುವಾಗಿ ಅವರು ಎಲ್ಲರ ಜೊತೆ ಹಂಚಿಕೊಂಡರು. ಚೈತ್ರಾ ಅವರ ಈ ವರ್ತನೆ ನನಗೆ ಇಷ್ಟವಾಗಿಲ್ಲ. ಈ ಸಣ್ಣ ವಿಷಯದಲ್ಲಿ ಸ್ನೇಹಿತ ನನಗೆ ಸಹಾಯ ಮಾಡಿದ್ದಾರೆ. ಈ ವಿವಾದವನ್ನು ಹುಷಾರಾಗಿ ನಿಭಾಯಿಸಿದ್ದರೆ ನಾನು ಕೋಪ ಮಾಡಿಕೊಳ್ಳುವ ಪ್ರಶ್ನೆಯೇ ಇರುತ್ತಿರಲಿಲ್ಲ ಎಂದು ಚಂದನ್ ತಿಳಿಸಿದ್ದರು. ಈ ವೇಳೆ ಸುದೀಪ್, ನೀವು ಡಿಸೆನ್ಸಿ ಬಗ್ಗೆ ಮಾತನಾಡುತ್ತಿದ್ದಿರಿ. ಆದರೆ ಒಬ್ಬರ ಕೈ ಹಿಡಿದು ಎಳೆಯುವುದು ಡಿಸೆನ್ಸಿ ಅಲ್ಲ. ಮೊದಲು ನೀವು ಸರಿಯಾಗಿರಿ ಬಳಿಕ ಮತ್ತೊಬ್ಬರಿಗೆ ಡಿಸೆನ್ಸಿ ಪದವನ್ನು ಬಳಸಿ ಎಂದರು. ಆಗ ಚಂದನ್, ಸುದೀಪ್ ಅವರ ಬಳಿ ಕ್ಷಮೆ ಕೇಳಿದ್ದಾರೆ.