ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ‘ದಿ-ವಿಲನ್’ ಚಿತ್ರದಲ್ಲಿ ನಟಿಸುತ್ತಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಆದರೆ ಈ ಜೋಡಿ ಈಗ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮತ್ತೆ ಒಂದಾಗಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಶಿವರಾಜ್ ಕುಮಾರ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅತಿಥಿಯಾಗಿ ಆಗಮಿಸಿದ್ದಾರೆ. ಈಗಾಗಲೇ ಸುದೀಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಚಿಕೆಯನ್ನು ಚಿತ್ರಿಕರಿಸಲಾಗಿದ್ದು, ಕಿಚ್ಚನ ಜೊತೆ ಬೇರೆ ಯಾವ ಅತಿಥಿ ಬರಲಿದ್ದಾರೆ ಎಂಬ ಕುತೂಹಲ ಹುಟ್ಟಿಸಿದೆ.
ಕಿಚ್ಚ ಸುದೀಪ್ ಕಾರ್ಯಕ್ರಮದಲ್ಲಿ ಭಾಗವಹಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಫೋಟೋದಲ್ಲಿ ಸುದೀಪ್ ಕಪ್ಪು ಬಣ್ಣದ ಉಡುಪಿನಲ್ಲಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೇ ಫೋಟೋದಲ್ಲಿ ಶಿವಣ್ಣ, ಕಿಚ್ಚ ಸುದೀಪ್ ಅವರಿಗೆ ಡ್ಯಾನ್ಸ್ ಹೇಳಿಕೊಡುತ್ತಿರುವುದು ಕಾಣಬಹುದು.
ಸದ್ಯ ಶಿವಣ್ಣನ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರ ಸಂಚಿಕೆ ಇದೇ ಭಾನುವಾರ ಪ್ರಸಾರವಾಗುತ್ತಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಈ ಹಿಂದೆ ಈ ಕಾರ್ಯಕ್ರಮದಲ್ಲಿ ನಟಿ ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಉಪೇಂದ್ರ, ಶರಣ್, ಲೂಸ್ ಮಾದ ಯೋಗಿ, ಧನಂಜಯ್, ವಸಿಷ್ಟ ಸಿಂಹ, ದಿಗಂತ್ ಅತಿಥಿಯಾಗಿ ಆಗಮಿಸಿದ್ದರು.