ಪೈಲ್ವಾನ್ ಅಸಲಿ ಆಟ ಶುರು- ಪೈರಸಿ ಬಗ್ಗೆ ಸುದೀಪ್ ಖಡಕ್ ಮಾತು

Public TV
3 Min Read
pailwaan 1

ಬೆಂಗಳೂರು: ತಮ್ಮ ಅಭಿಯನದ ‘ಪೈಲ್ವಾನ್’ ಸಿನಿಮಾ ಪೈರಸಿ ಬಗ್ಗೆ ನಟ ಕಿಚ್ಚಾ ಸುದೀಪ್ ಖಡಕ್ ಸಂದೇಶ ರವಾನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸುದೀಪ್, ಪೈರಸಿ ಮೂಲವನ್ನು ತಿಳಿಯುವವರೆಗೂ ನಾನು ವಿಶ್ರಾಂತಿ ಪಡೆಯುವುದಿಲ್ಲ. ನಮ್ಮ ಕಠಿಣ ಶ್ರಮವನ್ನ ಹಾಳು ಮಾಡಲು ನಾನು ಬಿಡುವುದಿಲ್ಲ. ಪೈರಸಿ ಮಾಡಿದವರಿಗಿಂತ ಪೈರಸಿ ಬಗ್ಗೆ ನಾನು ಹೆಚ್ಚು ಆಸಕ್ತಿ ಹೊಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ, ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತ್ತಿಲ್ಲ. ನನ್ನ ಮೌನ, ತಾಳ್ಮೆ, ಎರಡನ್ನೂ ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳನ್ನು ಬಯಲಿಗೆ ತಂದರೆ ನೆಮ್ಮದಿಯ ನಿದ್ರೆ ಬರುತ್ತದೆ. ಆ ಸಂದರ್ಭ ಕೆಲವು ದಿನಗಳ ಬರಲಿದೆ ಎಂದು  ಬರೆದುಕೊಂಡಿದ್ದಾರೆ.

ಪೈಲ್ವಾನ್ ಸಿನಿಮಾದ ಲಿಂಕ್ ಫೇಸ್‍ಬುಕ್‍ನಲ್ಲಿ ಶೇರ್ ಮಾಡಿಕೊಂಡಿದ್ದಕ್ಕೆ ಪೊಲೀಸರು ಗುರುವಾರ ರಾತ್ರಿ ದಾಬಸ್ ಪೇಟೆಯಲ್ಲಿ ಅರೆಸ್ಟ್ ಮಾಡಿದ್ದರು. ಬಳಿಕ ಈ ಬಗ್ಗೆ ವಿಚಾರಣೆ ನಡೆಸಿದ್ದಾಗ ರಾಕೇಶ್ ಸಿಸಿಬಿ ಪೊಲೀಸರ ಮುಂದೆ ತಪ್ಪೊಪಿಕೊಂಡಿದ್ದಾನೆ.

ವಿಚಾರಣೆ ವೇಳೆ ರಾಕೇಶ್, ನಾನು ದರ್ಶನ್ ಅಭಿಮಾನಿ. ಇದೇ ಕಾರಣಕ್ಕೆ ನಾನು ಸಿನಿಮಾವನ್ನು ಲೀಕ್ ಮಾಡಿದೆ. ನನಗೆ ನಮ್ಮ ಡಿ-ಬಾಸ್ ಸಿನಿಮಾನೇ ಗ್ರೇಟ್. ಪೈಲ್ವಾನ್ ಸಿನಿಮಾದ ಲಿಂಕ್ ಅನ್ನು ಮೊದಲು ನಾನು ನನ್ನ ಇಬ್ಬರ ಸ್ನೇಹಿತರಿಗೆ ಶೇರ್ ಮಾಡಿದೆ. ನಂತರ ಅದು ಯಾರಿಗೆಲ್ಲಾ ಹೋಗಿದೆ ಎಂಬುದು ನನಗೆ ಗೊತ್ತಿಲ್ಲ. ನಾನು ಯಾವುದೇ ಹಣಕ್ಕಾಗಿ ಸಿನಿಮಾವನ್ನು ಲೀಕ್ ಮಾಡಿಲ್ಲ. ದರ್ಶನ್ ಅವರ ಅಭಿಮಾನಕ್ಕಾಗಿ ಈ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾನೆ. ಆದರೆ ಚಿತ್ರದ ಲಿಂಕ್ ಹೇಗೆ ಸಿಕ್ತು ಎಂಬ ವಿಷಯವನ್ನು ಹೇಳುತ್ತಿಲ್ಲ. ಹಾಗಾಗಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

pailwaan arrest update

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು, ಪೈಲ್ವಾನ್ ಚಿತ್ರ ಪೈರಸಿ ಮಾಡಿದ್ದಕ್ಕೆ ಗುರುವಾರ ರಾತ್ರಿ ದಾಬಸ್‍ಪೇಟೆಯಲ್ಲಿ ರಾಕೇಶ್‍ನನ್ನು ಬಂಧಿಸಿದ್ದೇವೆ. ಕಾಪಿ ರೈಟ್ ಉಲ್ಲಂಘನೆ ಮಾಡಿ ಚಿತ್ರದ ಲಿಂಕ್ ಫೇಸ್‍ಬುಕ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದು ಅಪರಾಧ. ಚಿತ್ರದ ನಿರ್ಮಾಪಕರ ದೂರಿನ ಆಧಾರದ ಮೇಲೆ ನಾವು ಆರೋಪಿಯನ್ನು ಬಂಧಿಸಿದ್ದೇವೆ. ಈ ಬಗ್ಗೆ ಇನ್ನು ಹೆಚ್ಚಿನ ತನಿಖೆ ಮಾಡಬೇಕಿದೆ. ಈ ಚಿತ್ರದ ಲಿಂಕ್ ಇವನ ಬಳಿ ಹೇಗೆ ಬಂತು, ಎಷ್ಟು ಜನರಿಗೆ ಶೇರ್ ಮಾಡಿದ್ದಾನೆ ಎಂಬ ಬಗ್ಗೆ ತನಿಖೆ ಮಾಡಬೇಕಿದೆ. ರಾಕೇಶ್ ಹಿಂದೆ ಯಾರಾದರೂ ಇದ್ದರಾ ಎಂಬ ವಿಷಯ ತಿಳಿಯಬೇಕಿದೆ ಎಂದು ಹೇಳಿದ್ದರು.

ಇದಕ್ಕೂ ಮುನ್ನ ನಟ ಸುದೀಪ್ ಮನೆಗೆ ಇಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಭೇಟಿ ನೀಡಿದ್ದರು. ಕಿಚ್ಚನ ಮನೆಗೆ ಭಾಸ್ಕರ್ ರಾವ್ ದಿಢೀರ್ ಎಂಟ್ರಿ ಕೊಟ್ಟಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಭಾಸ್ಕರ್ ರಾವ್, ಸುದೀಪ್ ಮತ್ತು ಕುಟುಂಬದ ಜೊತೆ ಕೆಲವು ಸಮಯ ಕುಳಿತು ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಸುದೀಪ್ ಹಾಗೂ ಅವರ ತಂದೆ ಜೊತೆಗೆ ಫೋಟೋ ಕ್ಲಿಸಿಕೊಂಡಿದ್ದಾರೆ.

ಏನಿದು ಪ್ರಕರಣ?:
ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು ಚಿತ್ರ ಬಿಡುಗಡೆ ಆದ ದಿನವೇ ಪೈರಸಿಯಾಗಿತ್ತು ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದರು. ನಿರ್ಮಾಪಕಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ದೂರು ನೀಡಿದ ಬಳಿಕ ಸ್ವಪ್ನಕೃಷ್ಣ, ಸಾಮಾಜಿಕ ಜಾಲತಾಣದಲ್ಲಿ ಸಿನಿಮಾವನ್ನು ಪೈರಸಿ ಮಾಡಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ನಾನು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇವೆ. ಸುಮಾರು 3,500ಕ್ಕೂ ಹೆಚ್ಚು ಲಿಂಕ್‍ಗಳ ಬಗ್ಗೆ ಪೊಲೀಸರಿಗೆ ತಿಳಿಸಿದ್ದೇವೆ. ದರ್ಶನ್ ಅವರ ಅಭಿಮಾನಿಗಳು ಈ ಸಿನಿಮಾವನ್ನು ಪೈರಸಿ ಮಾಡಿಲ್ಲ. ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ಯಾರೇ ಈ ರೀತಿ ಪೈರಸಿ ಮಾಡಿದರೂ ಅದು ತಪ್ಪು. ಚಿತ್ರರಂಗದ ಬೆಳವಣಿಗೆಗೆ ಪೈರಸಿ ಎನ್ನುವುದು ಈಗ ಮಾರಕವಾಗಿದೆ ಎಂದು ಪ್ರತಿಕ್ರಿಯಿಸಿದ್ದರು.

pailwaan

ಪೈಲ್ವಾನ್ ಚಿತ್ರವನ್ನು ಎಸ್ ಕೃಷ್ಣ ಅವರು ನಿರ್ದೇಶನ ಮಾಡಿದ್ದು, ಅವರ ಪತ್ನಿ ಸ್ವಪ್ನ ಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ನಟಿಸಿದ್ದಾರೆ. ಬಾಲಿವುಡ್‍ನ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ನಟನೆ ಮಾಡಿರುವ ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *