ಬೆಂಗಳೂರು: ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಗಂಟುಮೂಟೆ ಚಿತ್ರವೀಗ ಚರ್ಚೆಯ ಕೇಂದ್ರಬಿಂದುವಾಗಿ ಬದಲಾಗಿದೆ. ಕನ್ನಡದಲ್ಲಿ ಮಹಿಳಾ ನಿರ್ದೇಶಕಿಯರ ಕೊರತೆ ಕಾಡುತ್ತಿರೋ ಕಾಲದಲ್ಲಿಯೇ ಹೊಸ ಬಗೆಯ ಕಥೆಯೊಂದಿಗೆ ಎಂಟ್ರಿ ಕೊಟ್ಟಿರೋ ರೂಪಾ ರಾವ್ ಪಾಲಿಗಿದು ಆರಂಭಿಕ ಹೆಜ್ಜೆಯಾದರೂ ಭರ್ಜರಿಯಾಗಿಯೇ ಸದ್ದು ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಲಾಂಚ್ ಆಗಿತ್ತು. ಇದಕ್ಕೆ ವ್ಯಾಪಕ ಸದಭಿಪ್ರಾಯ ಮೂಡಿಕೊಂಡಿರೋ ವಾತಾವರಣದಲ್ಲಿಯೇ ಕಿಚ್ಚ ಸುದೀಪ್ ಕೂಡಾ ಈ ಟ್ರೇಲರನ್ನು ಮೆಚ್ಚಿಕೊಂಡಿದ್ದಾರೆ.
ಗಂಟುಮೂಟೆ ಟ್ರೇಲರ್ ಬಗ್ಗೆ ಸುದೀಪ್ ಟ್ವೀಟ್ ಮಾಡೋ ಮೂಲಕ ಒಳ್ಳೆ ಮಾತುಗಳನ್ನಾಡಿದ್ದಾರೆ. ಈ ಸಣ್ಣ ಟ್ರೇಲರ್ ಸಾವಿರ ಮಾತುಗಳನ್ನಾಡುತ್ತಿದೆ. ಇದುವೇ ಈ ಚಿತ್ರ ಅದ್ಭುತ ಚಿಂತನೆಯೊಂದಿಗೆ ಮೂಡಿ ಬಂದಿರೋ ಸೂಚನೆಗಳನ್ನೂ ನೀಡುವಂತಿದೆ ಅಂದಿರೋ ಸುದೀಪ್ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಖುದ್ದು ಸುದೀಪ್ ಅವರೇ ಈ ರೀತಿ ಮೆಚ್ಚಿಕೊಂಡು ಮಾತಾಡಿರೋದರಿಂದ ಗಂಟುಮೂಟೆಯತ್ತ ಅಗಾಧ ಪ್ರಮಾಣದಲ್ಲಿ ಪ್ರೇಕ್ಷಕರು ಚಿತ್ತ ನೆಟ್ಟಿದ್ದಾರೆ. ರೂಪಾ ರಾವ್ ಸೇರಿದಂತೆ ಚಿತ್ರತಂಡಕ್ಕೆ ಹೊಸ ಹುರುಪೂ ಸಿಕ್ಕಂತಾಗಿದೆ.
ಗಂಟುಮೂಟೆ ಟ್ರೇಲರ್ ಹೀಗೆ ಎಲ್ಲ ದಿಕ್ಕಿನಿಂದಲೂ ಒಳ್ಳೆ ಪ್ರತಿಕ್ರಿಯೆ ಪಡೆದುಕೊಳ್ಳುವಂತೆಯೇ ಮೂಡಿ ಬಂದಿದೆ. ತೊಂಬತ್ತರ ದಶಕದ ಹೈಸ್ಕೂಲು ಪ್ರೇಮದ ಕಥೆ ಹೇಳೋ ಈ ಸಿನಿಮಾ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿದೆ. ಬಿಡುಗಡೆಗೂ ಮುನ್ನವೇ ವಿದೇಶಗಳಲ್ಲಿಯೂ ಕನ್ನಡದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದೆ. ಹಾಗೆಂದಾಕ್ಷಣ ಇದೇನು ಆರ್ಟ್ ಮೂವಿ ಅಂದುಕೊಳ್ಳಬೇಕಿಲ್ಲ. ಪಕ್ಕಾ ಕಮರ್ಶಿಯಲ್ ಅಂಶಗಳೊಂದಿಗೆ ಅಪರೂಪದ ಕಥೆಯ ಜೊತೆಗೇ ರೂಪಾ ಈ ಚಿತ್ರವನ್ನು ರೂಪಿಸಿದ್ದಾರಂತೆ.
https://www.facebook.com/publictv/videos/742395332886864/?v=742395332886864