ಬೆಂಗಳೂರು: ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘುಲಾಠಿ ಚಾರ್ಚ್ ಮಾಡಿ, ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಇದರಿಂದಾಗಿ ಯಾರಿಗಾರದೂ ಬೇಸರವಾಗಿದ್ದಲ್ಲಿ ಕ್ಷಮೇ ಇರಲಿ ಎಂದು ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.
ಕಿಚ್ಚ ಸುದೀಪ್‍ರವರು ಇಂದು ತಮ್ಮ 45 ನೇ ಹುಟ್ಟುಹಬ್ಬವನ್ನು ಸರಳವಾಗಿ ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿದ್ದಾರೆ. ಅಲ್ಲದೇ ಶನಿವಾರ ತಡರಾತ್ರಿ ಜೆಪಿ ನಗರದ ನಿವಾಸದ ಬಳಿ ಸಾವಿರಾರು ಅಭಿಮಾನಿಗಳು ಸುದೀಪ್ ಅವರನ್ನು ಕಾಣಲು ಆಗಮಿಸಿದ್ದರು. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಸುಬ್ರಮಣ್ಯಪುರಂ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಅಭಿಮಾನಿಗಳನ್ನ ಚದುರಿಸಿದ್ದರು.
Advertisement
Advertisement
ಈ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಹುಟ್ಟುಹಬ್ಬದ ದಿನಾಚರಣೆಯನ್ನು ಆಚರಿಸಿಕೊಳ್ಳಲು ಇಷ್ಟಪಟ್ಟಿರಲಿಲ್ಲ, ವರ್ಷಕ್ಕೆ ಒಮ್ಮೆಯಾದರೂ ನಮಗೆ ಸಿಗಬೇಕೆಂದು ಅಭಿಮಾನಿಗಳು ಕೇಳಿಕೊಂಡಿದ್ದರು. ನಾನು ಬೆಳೆದಿದ್ದು ಅಭಿಮಾನಿಗಳಿಂದ. ಹೀಗಾಗಿ ಹುಟ್ಟುಹಬ್ಬದ ದಿನವನ್ನು ಅಭಿಮಾನಿಗಳಿಗೆ ಮೀಸಲಿಡಬೇಕೆಂದು ನಿರ್ಧರಿಸಿದ್ದೆ. ಕಳೆದ ಬಾರಿ ಅಭಿಮಾನಿಗಳನ್ನು ಭೇಟಿ ಆಗದೆ ಇರುವುದಕ್ಕೆ ಬೇಸರವಾಗಿದೆ ಎಂದು ತಿಳಿಸಿದರು.
Advertisement
ಶನಿವಾರ ತಡರಾತ್ರಿ ಬಂದು ಸ್ವಲ್ಪ ಸಮಯ ಅಭಿಮಾನಿಗಳೊಂದಿಗೆ ಮಾತನಾಡಿ ಹಾಗೇ ಮನೆಯೊಳಗೆ ಹೋದೆ. ಆದಾದ ನಂತರ ಏನಾಯಿತು ಎಂಬುದು ಗೊತ್ತಿಲ್ಲ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, ಈ ವೇಳೆ ಒಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದುಬಂತು. ಆದರೆ ನಾನು ಅಭಿಮಾನಿಗಳನ್ನು ನೋಡಬಾರದೆಂದು ಹಾಗೆ ಮಾಡಿರಲಿಲ್ಲ. ಕಳೆದ 20 ದಿನಗಳ ಬಳಿಕ ಮನೆಗೆ ವಾಪಾಸ್ಸಾಗಿದ್ದರಿಂದ ಮನೆಯವರಿಗೆ ಆದ್ಯತೆ ನೀಡುವ ಸಲುವಾಗಿ ಹಾಗೆ ಮಾಡಿದೆ. ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಇದರಿಂದಾಗಿ ಯಾರಿಗಾದರೂ ಬೇಸರವಾಗಿದ್ದಲ್ಲಿ ನಾನು ಕ್ಷಮೆ ಕೋರುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕಿಚ್ಚ ಸುದೀಪ್‍ಗೆ 45ನೇ ಹುಟ್ಟಹಬ್ಬದ ಸಂಭ್ರಮ – ನಿವಾಸದಲ್ಲಿ ಅಭಿಮಾನದ ಸಾಗರ
Advertisement
ಕೇಕ್ ಹಾಗೂ ಹಾರಕ್ಕೆ ಖರ್ಚು ಮಾಡೋದು ಇಷ್ಟವಿಲ್ಲವೆಂದು ನಾನು ಅಭಿಮಾನಿಗಳಲ್ಲಿ ಮನವಿಮಾಡಿಕೊಂಡಿದ್ದೆ. ನನ್ನ ಮನವಿಗೆ ಅಭಿಮಾನಿಗಳು ಕೂಡ ಸ್ಪಂದಿಸಿದ್ದಾರೆ. ದಿನಪೂರ್ತಿ ಅಭಿಮಾನಿಗಳೊಂದಿಗೆ ಕಾಲ ಕಳೆಯುತ್ತೇನೆ. ಅಭಿಮಾನಿಗಳು ನನ್ನ ಮನವಿಯನ್ನು ಸ್ವೀಕರಿಸಿದ್ದಕ್ಕೆ ತುಂಬಾ ಖುಷಿಯಾಗಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.
ಈ ಬಾರಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಪೈಲ್ವಾನ್, ಅಂಬಿ ನಿಂಗ್ ವಯಸ್ಸಾಯ್ತೋ, ಕೋಟಿಗೊಬ್ಬ 3 ಹಾಗೂ ಸೈರಾ ಚಿತ್ರದಲ್ಲಿನ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಅಭಿಮಾನಿಗಳು ಸಾಕಷ್ಟು ಇಷ್ಟಪಟ್ಟಿದ್ದಾರೆ. ಅಭಿಮಾನಿಗಳ ಸಂತೋಷವೇ ನಮ್ಮ ಸಂತೋಷ. ನನ್ನನ್ನು ಅವರು ಸ್ವೀಕರಿಸಿದ್ದಾರೆ. ನನ್ನ ಹುಟ್ಟು ಹಬ್ಬದಂದೇ ಟೀಸರ್ ಗಳನ್ನು ಬಿಡುಗಡೆಗೊಳಿಸಲು ನಿರ್ಮಾಪಕರು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಅವರಿಗೆಲ್ಲ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಕಳೆದ 20 ವರ್ಷದ ಹುಟ್ಟುಹಬ್ಬಕ್ಕೂ ಇಂದಿನ ಹುಟ್ಟುಹಬ್ಬಕ್ಕೂ ತುಂಬಾ ವ್ಯತ್ಯಾಸ ಇದೆ. ಅಭಿಮಾನಿಗಳು ಹೆಚ್ಚಾಗಿದ್ದಾರೆ. ಪ್ರೀತ್ಸೋರು, ಆರಾಧಿಸುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮ ಒಲವು ಅಭಿಮಾನಿಗಳನ್ನ ಹೆಚ್ಚಿಗೆ ಮಾಡಿಕೊಳ್ಳಬೇಕು. ಅದ್ಧೂರಿ ಅಚರಣೆ ಮಾಡಿಕೊಳ್ಳುವ ಕಡೆ ಇರಬಾರದು. ಸಿನಿಮಾಗೋಸ್ಕರ ಮನಸ್ಸು ಹಾತೊರೆಯುವಾಗ ಒಳ್ಳೊಳ್ಳೆ ಸಿನಿಮಾ ಕೊಡಬೇಕು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv