ರಾಮನಗರ: ರಣಹದ್ದು ಬಗ್ಗೆ ತಪ್ಪಾದ ಮಾಹಿತಿ ಹರಡಿದ ಆರೋಪದಡಿ ಬಿಗ್ ಬಾಸ್ ವಿರುದ್ಧ ರಣಹದ್ದು (Vulture) ಸಂರಕ್ಷಣಾ ಟ್ರಸ್ಟ್ ವತಿಯಿಂದ ದೂರು ನೀಡಿದ್ದ ಹಿನ್ನೆಲೆ, ಬಿಗ್ ಬಾಸ್ (Bigg Boss) ಪ್ರೋಗ್ರಾಂ ಹೆಡ್‌ಗೆ ಅರಣ್ಯ ಇಲಾಖೆಯಿಂದ ತಿಳುವಳಿಕೆ ನೋಟಿಸ್ ಜಾರಿ ಮಾಡಲಾಗಿದೆ.
ರಣಹದ್ದು ಸಂರಕ್ಷಣಾ ಟ್ರಸ್ಟ್ ನೀಡಿದ ದೂರಿನನ್ವಯ ನೋಟಿಸ್ ಜಾರಿ ಮಾಡಿರುವ ಅಧಿಕಾರಿಗಳು, ರಣಹದ್ದುಗಳು ಯಾವುದೇ ಪ್ರಾಣಿಗಳನ್ನ ಬೇಟೆಯಾಡುವುದಿಲ್ಲ. ಹದ್ದು ಹಾಗೂ ರಣಹದ್ದಿಗೂ ಬಹಳ ವ್ಯತ್ಯಾಸ ಇದೆ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ರಣಹದ್ದು ‘ಹೊಂಚು ಹಾಕಿ ಸಂಚು ಮಾಡಿ ಲಬಕ್ ಅಂತ ಹಿಡಿಯುವುದು’ ಎಂದು ತಪ್ಪು ಮಾಹಿತಿ ಹರಡಲಾಗಿದೆ. ಇದು ಪಕ್ಷಿ ಪ್ರೇಮಿಗಳಿಗೆ ಬೇಸರ ತರಿಸಿದ್ದು, ಅಳಿವಿನಂಚಿನಲ್ಲಿರುವ ಪಕ್ಷಿ ಉಳಿವಿಗೆ ಹಿನ್ನಡೆಯಾಗಲಿದೆ. ಹಾಗಾಗಿ, ಹದ್ದು ಹಾಗೂ ರಣಹದ್ದಿಗೂ ಇರುವ ವ್ಯತ್ಯಾಸದ ಬಗ್ಗೆ ಸ್ಪಷ್ಟೀಕರಣ ನೀಡುವಂತೆ, ಖಾಸಗಿ ಚಾನಲ್‌ನ ಪ್ರೋಗ್ರಾಂ ಹೆಡ್‌ಗೆ ನೋಟಿಸ್ ನೀಡಿ ಸೂಚನೆ ನೀಡಲಾಗಿದೆ. ರಾಮನಗರ ಡಿಆರ್‌ಎಫ್ಓ ಸುಷ್ಮಾ ಖುದ್ದು ನೋಟಿಸ್ ನೀಡಿ, ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪಷ್ಟೀಕರಣ ನೀಡುವಂತೆ ತಿಳಿಹೇಳಿದ್ದಾರೆ. ಇದನ್ನೂ ಓದಿ: ಕಿತ್ತಾಟದಿಂದ ಕ್ಷಮೆಯತ್ತ – ಒಬ್ಬರಿಗೊಬ್ಬರು Sorry ಕೇಳಿ, ನಗುವಿನ ಅಪ್ಪುಗೆ ನೀಡಿದ ಗಿಲ್ಲಿ, ಅಶ್ವಿನಿ
ಕೆಲ ವಾರಗಳ ಹಿಂದೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಒಬ್ಬೊಬ್ಬ ಸ್ಪರ್ಧಿ ಕೊರಳಿಗೆ ಅವರ ಗುಣಕ್ಕೆ ಹೋಲುವಂತೆ ಒಂದೊಂದು ಪ್ರಾಣಿ-ಪಕ್ಷಿಯ ಚಿತ್ರ ಹಾಕುವ ಟಾಸ್ಕ್ ನೀಡಲಾಗಿತ್ತು. ಆಗ ಗಿಲ್ಲಿ ಕೊರಳಿಗೆ ಧ್ರುವಂತ್ ರಣಹದ್ದಿನ ಫೋಟೊ ಹಾಕಿದ್ದರು. ‘ಹೊಂಚುಹಾಕಿ ಸಂಚು ಮಾಡಿ ಕರೆಕ್ಟ್ ಟೈಂಗೆ ಲಬಕ್ ಅಂತ ಹಿಡಿಯುತ್ತೆ ರಣಹದ್ದು’ ಎಂದು ಕಿಚ್ಚು ಸುದೀಪ್ ಹೇಳಿದ್ದರು. ರಣಹದ್ದಿನ ಕುರಿತ ಮಾತು ವಿವಾದಕ್ಕೆ ಕಾರಣವಾಗಿತ್ತು.

