ಕಿಚ್ಚನ ಭೇಟಿ ಈ ಹುಡುಗನ ಬದುಕು ಬದಲಿಸಿತು!

Public TV
2 Min Read
Still Gurudatth copy

ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಮೂಲಕ ಇಪ್ಪತ್ತಾರು ವರ್ಷದ ಗುರುದತ್ ಗಾಣಿಗ ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ. ಇಷ್ಟು ಚಿಕ್ಕ ವಯಸಿನಲ್ಲಿಯೇ ಈ ಹುಡುಗನ ಅದೃಷ್ಟ ಕಂಡು ಅನೇಕರು ಬೆರಗಾಗಿದ್ದಾರೆ. ಆದರೆ ಗುರುದತ್ ನಡೆದು ಬಂದ ಹಾದಿಯನ್ನು ಗಮನಿಸಿದರೆ ಖಂಡಿತಾ ಇದು ಅದೃಷ್ಟವಲ್ಲ, ಬದಲಾಗಿ 10 ವರ್ಷಗಳ ಕಠಿಣ ಪರಿಶ್ರಮದ ಪ್ರತಿಫಲ ಎಂಬ ವಿಚಾರ ಯಾರಿಗಾದರೂ ಮನದಟ್ಟಾಗುತ್ತದೆ!

ambi ambareesh

ಕುಂದಾಪುರದ ನಾಗೂರಿನ ಗುರುದತ್ ಗೆ ತಾನು ಸಿನಿಮಾ ನಿರ್ದೇಶಕನಾಗಬೇಕೆಂಬ ಕನಸು ಹತ್ತಿಕೊಂಡಿದ್ದು ಹೈಸ್ಕೂಲು ದಿನಗಳಲ್ಲಿಯೇ. ಓದಿನಲ್ಲಿ ಹೇಳಿಕೊಳ್ಳುವಂಥಾದ್ದೇನೂ ಆಸಕ್ತಿ ಇಲ್ಲದಿದ್ದ ಗುರುದತ್ ಮನೆ ಮಂದಿಯ ಒತ್ತಾಸೆಯ ಮೇರೆಗೆ ಪಿಯುಸಿ ಸೇರಿಕೊಂಡಿದ್ದರು. ಆದರೆ ಪಿಯುಸಿ ಫಲಿತಾಂಶ ಬರುವ ಮುನ್ನವೇ ನಾನು ಸಿನಿಮಾಗೆ ಸೇರ್ತೀನಿ ಅಂತ ಮನೆಯಲ್ಲಿ ಘೋಷಿಸಿದವರೇ ಹೆತ್ತವರಿಗೆ ಇಷ್ಟವಿಲ್ಲದಿದ್ದರೂ ಬೆಂಗಳೂರಿಗೆ ಹೊರಟಿದ್ದರು. ಹಾಗೆ ಗುರುದತ್ ಗುರುತು ಪರಿಚಯವೇ ಇಲ್ಲದಿದ್ದ ಬೆಂಗಳೂರಿಗೆ ಬಂದಿಳಿಯುವಾದ ಅವರಿಗೆ ಕೇವಲ ಹದಿನಾರು ವರ್ಷ!

GURUDAT GANIGA 3 copy

ಬೆಂಗಳೂರು ಎಂಬ ಮಾಯಾನಗರಿಯಲ್ಲಿ ಆ ದಿನಗಳಲ್ಲಿ ಒಂದು ನರಪಿಳ್ಳೆಯ ಪರಿಚಯವೂ ಗುರುದತ್ ಗಿರಲಿಲ್ಲ. ಈ ಊರಿನಲ್ಲಿ ಹತ್ತಿರ ಸಂಬಂಧಿಗಳೂ ಇರಲಿಲ್ಲ. ಗುರಿ ಚಿತ್ರರಂಗವಾದರೂ ಗಾಂಧಿನಗರ ಯಾವ ದಿಕ್ಕಿನಲ್ಲಿದೆ ಎಂಬುದೂ ಅವರಿಗೆ ಗೊತ್ತಿರಲಿಲ್ಲ. ಒಂದಷ್ಟು ದಿನ ಹೊಟ್ಟೆ ಹೊರೆಯಲು ಅದೂ ಇದೂ ಕೆಲಸ ಮಾಡಿಕೊಂಡಿದ್ದ ಅವರು ಕಡೆಗೂ ಮೇಕಪ್ ಸಹಾಯಕರಾಗಿ ಚಿತ್ರರಂಗಕ್ಕೆ ಅಡಿಯಿರಿಸಿದ್ದರು. ಅಲ್ಲಿಂದಲೇ ಸಂಪರ್ಕ ಸಾಧಿಸಿ ನಿರ್ದೇಶನ ವಿಭಾಗಕ್ಕೆ ತೂರಿಕೊಳ್ಳಬೇಕೆಂಬುದು ಆ ದಿನಗಳಲ್ಲಿ ಗುರುದತ್ ಗಿದ್ದ ಏಕಮೇವ ಕನಸು!

AMBI 1

ಹೀಗೇ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಗುರುದತ್ ಅದೊಂದು ದಿವ್ಯ ಘಳಿಗೆಯಲ್ಲಿ ಕಿಚ್ಚ ಸುದೀಪ್ ಅವರನ್ನು ಸಂಧಿಸಿದ್ದರು. ಬಳಿಕ ಅವರ ಬಳಿಯೇ ಕೆಲಸ ಗಿಟ್ಟಿಸಿಕೊಂಡಿದ್ದರು. ಒಂದಷ್ಟು ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಸಹಾಯಕರಾಗಿದ್ದುಕೊಂಡು ಸುದೀಪ್ ಅವರ ಶಿಸ್ತು, ನಿಖರವಾದ ಕಸುಬುದಾರಿಕೆ ಕಲಿತುಕೊಂಡ ಗುರುದತ್ ಗುರಿಯ ನೇರಕ್ಕೆ ಬಂದು ನಿಂತಿದ್ದು, ಅವರ ಬದುಕಿನಲ್ಲಿಯೂ ಬದಲಾವಣೆಯ ಗಾಳಿ ಬೀಸಲಾರಂಭಿಸಿದ್ದು ಆವಾಗಿನಿಂದಲೇ.

GURUDAT GANIGA 1 copy

ಆರಂಭದಲ್ಲಿ ಕಿಚ್ಚ ಸುದೀಪ್ ಅವರು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರವನ್ನು ನಿರ್ದೇಶನ ಮಾಡಲು ಒಂದಷ್ಟು ಮಂದಿಗಾಗಿ ಅರಸಿದ್ದರಂತೆ. ಅದು ತನ್ನದಾಗುತ್ತದೆ ಎಂಬ ಕನಸಾಗಲೀ, ನಿರೀಕ್ಷೆಯಾಗಲಿ ಗುರುದತ್‍ಗಿರಲಿಲ್ಲ. ಆದರೆ ಅದೊಂದು ದಿನ ಇದ್ದಕ್ಕಿದ್ದಂತೆ ಗುರುದತ್ ರನ್ನು ಕರೆದ ಸುದೀಪ್ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಜವಾಬ್ದಾರಿಯನ್ನು ಹೊರಿಸಿದ್ದರು. ಹಾಗೆ ಮಹಾ ಜವಾಬ್ದಾರಿಯೊಂದನ್ನು ವಹಿಸಿಕೊಂಡ ಗುರುದತ್ ಗೀಗ ಅದನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ಇದೆಯಂತೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *