ಕಿರುತೆರೆಯ ಜನಪ್ರಿಯ ‘ಪುನರ್ ವಿವಾಹ’, ‘ಪತ್ತೇದಾರಿ ಪ್ರತಿಭಾ’ ಸೀರಿಯಲ್‌ಗಳಲ್ಲಿ ಬಣ್ಣ ಹಚ್ಚಿದ್ದ ಅಥರ್ವ್ ಈಗ ಸ್ಯಾಂಡಲ್‌ವುಡ್‌ಗೆ (Sandalwood) ಪದಾರ್ಪಣೆ ಮಾಡುತ್ತಿದ್ದಾರೆ. ‘ಟೇಲ್ಸ್ ಆಫ್ ಮಹಾನಗರ’ ಸಿನಿಮಾದಲ್ಲಿ ಅಥರ್ವ್ ನಟಿಸಿದ್ದು, ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ರಾಜೀವ್ ಕಿರಣ್ ವೆನಿಯಲ್ ಈ ಸಿನಿಮಾಗೆ ನಿರ್ದೇಶನ ಮಾಡಿದ್ದು, ಹೊಸ ಪ್ರತಿಭೆ ಅಥರ್ವ್‌ಗೆ ಸುದೀಪ್ ಸಾಥ್ ನೀಡಿದ್ದಾರೆ.
ಇದೀಗ ಬಿಡುಗಡೆಯಾಗಿರುವ ಟೀಸರ್‌ಗೆ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಕಿಚ್ಚ ಹೊಸ ಪ್ರತಿಭೆಗಳಿಗೆ ಬೆಂಬಲ ನೀಡುವ ವಿಚಾರ ಇದೇನು ಮೊದಲಲ್ಲ. ಹೊಸಬರ ಪ್ರಯತ್ನಕ್ಕೆ ಸಾಥ್ ನೀಡುತ್ತಲೇ ಬಂದಿದ್ದಾರೆ. ಈ ಬಾರಿ ‘ಟೇಲ್ಸ್ ಆಫ್ ಮಹಾನಗರ’ ಚಿತ್ರತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಅಂದಹಾಗೆ, ಈ ಸಿನಿಮಾವು ಸದ್ಯದಲ್ಲೇ ತೆರೆಗೆ ಬರಲಿದೆ. ‘ಟೇಲ್ಸ್ ಆಫ್ ಮಹಾನಗರ’ ಚಿತ್ರಕ್ಕೆ ಅಥರ್ವ್ ಅವರೇ ಕಥೆ ಬರೆದಿದ್ದು, ನಿರ್ದೇಶಕರ ಜೊತೆಗೂಡಿ ಚಿತ್ರಕಥೆಗೆ ಸಾಥ್ ನೀಡಿದ್ದಾರೆ. ರಿಲೀಸ್ ಆಗಿರುವ ಟೀಸರ್‌ಗೆ ಜನರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಗೆಜ್ಜೆನಾದ, ನಂದ ಲವ್ಸ್ ನಂದಿತಾ, ಕನ್ನಡದ ಕಂದ, ಆಟ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದ ವಿಜಯ್ ಕುಮಾರ್ ಅವರ ಪುತ್ರ ಅಥರ್ವ್. ಇದೀಗ ‘ಟೇಲ್ಸ್ ಆಫ್ ಮಹಾನಗರ’ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ತಮ್ಮ ಪುತ್ರ ಮೊದಲ ಸಿನಿಮಾವನ್ನು ವಿಜಯ್ ಕುಮಾರ್ ಅವರು ಧರ್ಮೇಂದ್ರ ಎಂ ರಾವ್ ಎಂಬುವವರ ಜೊತೆಗೆ ಸೇರಿ ನಿರ್ಮಾಣವನ್ನು ಮಾಡಿದ್ದಾರೆ. ಇದನ್ನೂ ಓದಿ:Kiccha 46: ಸುದೀಪ್ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡ್
ಮಹಾನಗರವೊಂದರಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಒಳಗೊಂಡಿದ್ದು, ಹೆಣ್ಣು, ಅಧಿಕಾರ- ಧರ್ಮಕ್ಕೆ ಸಂಬಂಧಿಸಿದ ಹಾಗೆ ಮೂರು ವಿಭಿನ್ನ ಕಥೆಗಳು ಸಿನಿಮಾದಲ್ಲಿ ಇವೆ. ಕನ್ನಡತಿ ಧಾರಾವಾಹಿ ವಿಲನ್ ಸಾನಿಯಾ ಪಾತ್ರದ ಮೂಲಕ ಖ್ಯಾತಿ ಪಡೆದ ರಮೋಲಾ ಅವರು ಈ ಸಿನಿಮಾಗೆ ನಾಯಕಿಯಾಗಿ ನಟಿಸಿದ್ದಾರೆ.