ಜಿ9 ಕಮ್ಯುನಿಕೇಶನ್ ಅ್ಯಂಡ್ ಮೀಡಿಯಾ ಹಾಗೂ ನಿರಂತರ ಪ್ರೊಡಕ್ಷನ್ಸ್ ಸಂಸ್ಥೆಯ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ, ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದ ನೂತನ ಚಿತ್ರದ ಶೀರ್ಷಿಕೆ ಅನಾವರಣ ಮತ್ತು ಟೈಟಲ್ ಟೀಸರ್ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿತು. ನಟರಾದ ಸೂರಜ್ ಗೌಡ, ಶರಣ್ಯಾ ಶೆಟ್ಟಿ ಹಾಗೂ ಪ್ರವೀಣ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಈ ಹೊಸಚಿತ್ರಕ್ಕೆ ‘ಡಿಯರ್ ಹಸ್ಬೆಂಡ್’ ಎಂದು ಹೆಸರಿಡಲಾಗಿದ್ದು, ಸಸ್ಪೆನ್ಸ್ ಕಂ ಥ್ರಿಲ್ಲರ್ ಶೈಲಿಯಲ್ಲಿ ಈ ಚಿತ್ರ ಮೂಡಿಬರುತ್ತಿದೆ.
ನಟ ಕಿಚ್ಚ ಸುದೀಪ್, ‘ಡಿಯರ್ ಹಸ್ಬೆಂಡ್’ (Dear Husband) ಚಿತ್ರದ ಶೀರ್ಷಿಕೆ ಮತ್ತು ಟೈಟಲ್ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ನಟರಾದ ಕುಮಾರ್ ಬಂಗಾರಪ್ಪ, ಪ್ರವೀಣ್ ತೇಜ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ನಿರ್ದೇಶಕರಾದ ಶಶಾಂಕ್, ಎ.ಪಿ.ಅರ್ಜುನ್, ಕ್ರಿಕೆಟಿಗರಾದ ವೈಶಾಕ್ ವಿಜಯಕುಮಾರ್, ರಿತೇಶ್ ಸೇರಿದಂತೆ ಅನೇಕ ಗಣ್ಯರು ‘ಡಿಯರ್ ಹಸ್ಬೆಂಡ್’ ಟೈಟಲ್ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು.ಇದನ್ನೂ ಓದಿ:ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ʻರಣ ಹದ್ದುʼ ತಂದ ಸಂಕಷ್ಟ – ಅರಣ್ಯಾಧಿಕಾರಿಗೆ ದೂರು
ಇನ್ನು ‘ಡಿಯರ್ ಹಸ್ಬೆಂಡ್’ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ನಟ ಕಿಚ್ಚ ಸುದೀಪ್, ‘ನಾವು ಹೊಸಬರಾಗಿ ಬಂದಾಗ, ಅನೇಕ ಹಿರಿಯರು ನಮಗೆ ಪ್ರೋತ್ಸಾಹಿಸಿ, ಬೆನ್ನು ತಟ್ಟಿದ್ದರು. ಅದೇ ಕೆಲಸವನ್ನು ನಾವು ಈಗ ಹೊಸಬರಿಗೆ ಮಾಡುತ್ತಿದ್ದೇವೆ. ಅಂತಿಮವಾಗಿ ಕನ್ನಡ ಚಿತ್ರರಂಗ ಬೆಳೆಯಬೇಕು. ಇಡೀ ಚಿತ್ರತಂಡಕ್ಕೆ ಶುಭವಾಗಲಿ. ಹೊಸಬರ ತಂಡದ ಮೂಲಕ ಖಂಡಿತವಾಗಿಯೂ ಹೊಸಥರದ ಸಿನಿಮಾ ಬರಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸದ್ಯ ‘ಡಿಯರ್ ಹಸ್ಬೆಂಡ್’ ಚಿತ್ರದ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಇದೇ ತಿಂಗಳಾಂತ್ಯದಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಗೋವಾ ಮತ್ತಿತರ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸುವ ಯೋಜನೆಯಲ್ಲಿದೆ ಚಿತ್ರತಂಡ. ‘ಡಿಯರ್ ಹಸ್ಬೆಂಡ್’ ಚಿತ್ರದ ಟೈಟಲ್ ಟೀಸರ್ ಗೆ ಸಚಿನ್ ಬಸ್ರೂರು ಹಿನ್ನೆಲೆ ಸಂಗೀತವಿದ್ದು, ಚಿತ್ರದ ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪ್ರಮೋದ ಮರವಂತೆ ಸಾಹಿತ್ಯ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಹರ್ಷ ಕುಮಾರ್ ಗೌಡ ಛಾಯಾಗ್ರಹಣ, ಬಿ. ಎಸ್. ಕೆಂಪರಾಜ್ ಚಿತ್ರಕ್ಕೆ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಟೈಟಲ್ ಟೀಸರ್ ಬಿಡುಗಡೆ ಮೂಲಕ ಭರದಿಂದ ಚಿತ್ರದ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ವರ್ಷಾಂತ್ಯಕ್ಕೆ ‘ಡಿಯರ್ ಹಸ್ಬೆಂಡ್’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ.ಇದನ್ನೂ ಓದಿ: Bigg Boss ಸೀಸನ್ 12ರ ಕೊನೆಯ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಅಶ್ವಿನಿ, ಧ್ರುವಂತ್


