ರಣಧೀರ ಸಿನಿಮಾ ಅಂದಾಕ್ಷಣ ಥಟ್ಟನೆ ನೆನಪಾಗುವ ಹೆಸರು ರವಿಚಂದ್ರನ್ (Ravichandran) ಮತ್ತು ಖುಷ್ಭೂ (Khushbhu) ಅವರದ್ದು. ಈ ಸಿನಿಮಾದ ನಂತರ ಇದೇ ಜೋಡಿ ಅನೇಕ ಸಿನಿಮಾಗಳನ್ನೂ ಮಾಡಿದೆ. ನಂತರದ ದಿನಗಳಲ್ಲಿ ಮತ್ತೆ ಕಾಣಿಸಿಕೊಂಡಿಲ್ಲ. ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ ಮತ್ತೆ ರವಿಚಂದ್ರನ್ ಹಾಗೂ ಖುಷ್ಭೂ ಒಟ್ಟಾಗಿ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನಿರ್ದೇಶಕ ಗುರುರಾಜ್ ಕುಲಕರ್ಣಿ (Gururaj Kulkarni) ಎನ್ನುವವರು ರವಿಚಂದ್ರನ್ ಗಾಗಿ ಸಿನಿಮಾವೊಂದನ್ನು ಮಾಡುತ್ತಿದ್ದು, ಈ ಸಿನಿಮಾದ ನಾಯಕಿಯನ್ನಾಗಿ ಖುಷ್ಬೂ ಅವರನ್ನೇ ಆಯ್ಕೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದಾರೆ. ಒಂದು ಸುತ್ತಿನ ಮಾತುಕತೆ ಕೂಡ ಆಗಿದೆ ಎನ್ನುವ ಸುದ್ದಿಯಿದೆ. ಸದ್ಯ ಖುಷ್ಭೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಪಾತ್ರ ಒಪ್ಪಬಹುದು ಎನ್ನಲಾಗುತ್ತಿದೆ.
ಇದೊಂದು ಥ್ರಿಲ್ಲರ್ ಮಾದರಿಯ ಚಿತ್ರವಾಗಿದ್ದು, ರವಿಚಂದ್ರನ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಖುಷ್ಭೂ ಅವರನ್ನು ಮತ್ತೆ ತೆರೆಯ ಮೇಲೆ ತೋರಿಸಬೇಕು ಎನ್ನುವ ಆಸೆ ನಿರ್ದೇಶಕರದ್ದು. ಇದೇ ತಿಂಗಳು 21ರಂದು ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಆಗಲಿದೆಯಂತೆ. ಅಂದುಕೊಂಡಂತೆ ಆದರೆ, ಆ ದಿನದೊಳಗೆ ಖುಷ್ಭೂ ಅವರನ್ನು ಮಾತನಾಡಿಸುವ ಪ್ರಯತ್ನ ಕೂಡ ಮಾಡಲಿದ್ದಾರಂತೆ. ಇದನ್ನೂ ಓದಿ: ಮದುವೆ ಆಗುವ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಶರ್ಮಿಳಾ ಮಾಂಡ್ರೆ
ರವಿಚಂದ್ರನ್ ಅವರೇ ಸಿನಿಮಾದ ಹೀರೋ ಆಗಿರುವಾಗ ಖುಷ್ಭೂ ಬರಬಹುದು ಎನ್ನುವ ಅಂದಾಜಿದೆ. ಅದರ ಜೊತೆಗೆ ರಾಜಕಾರಣದಲ್ಲೂ ಅವರು ಬ್ಯುಸಿಯಾಗಿರುವುದರಿಂದ ಮತ್ತೆ ಸಿನಿಮಾ ಒಪ್ಪಿಕೊಳ್ಳುತ್ತಾರಾ ಎನ್ನುವ ಅನುಮಾನವೂ ಇದೆ. ಸದ್ಯಕ್ಕೆ ಖುಷ್ಭೂ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡವೇ ಕೊಡಬಹುದು.