ಬೆಂಗಳೂರು: ಎಸ್. ನಲಿಗೆ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಶ್ರೀನಿವಾಸ ರಾವ್ ನಿರ್ಮಾಣ ಮಾಡಿರುವ ಖನನ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಆರ್ಯವರ್ಧನ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ರಾಧಾ. ರಾಯಚೂರು ಮೂಲದ ಅಪ್ಪಟ ಕನ್ನಡಿಗರಾದರೂ ತೆಲುಗು ಚಿತ್ರರಂಗದಲ್ಲಿ ಛಾಪು ಮೂಡಿಸಿರೋ ರಾಧಾ ಕೂಡಾ ಈ ಚಿತ್ರದ ಮೂಲಕವೇ ನಿರ್ದೇಶಕರಾಗಿ ಕನ್ನಡಕ್ಕೆ ಪರಿಚಯವಾಗುತ್ತಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ರಾಧಾ ಎಂದೇ ಜನಪ್ರಿಯರಾಗಿರೋ ಇವರ ಪೂರ್ತಿ ಹೆಸರು ರಾಧಾ ಕೃಷ್ಣ. ಆದರೆ ರಾಧಾ ಎಂಬ ನಾಮಧೇಯದೊಂದಿಗೇ ಕನ್ನಡಕ್ಕೂ ಆಗಮಿಸಿರೋ ಅವರು ತಮ್ಮ ಜನರಿಗೆ ಒಂದೊಳ್ಳೆ ಕಂಟೆಂಟಿನ ಚಿತ್ರವನ್ನು ಕೊಡುವ ಕಾತರದಲ್ಲಿದ್ದಾರೆ. ರಾಧಾ ಮೂಲತಃ ರಾಯಚೂರಿನ ಸಿಂಧಗಿ ತಾಲೂಕಿನ ಪುಟ್ಟ ಹಳ್ಳಿಯವರು. ಅಪ್ಪಟ ರೈತಾಪಿ ವರ್ಗದಲ್ಲಿಯೇ ಹುಟ್ಟಿ ಬೆಳೆದ ಅವರು ಹೈಸ್ಕೂಲುವರೆಗಿನ ವ್ಯಾಸಂಗವನ್ನು ಮುದನೂರು ಮುಂತಾದೆಡೆಗಳಲ್ಲಿ ಪೂರೈಸಿಕೊಂಡು ಡಿಗ್ರಿ ಮಗಿಸಿಕೊಂಡಿದ್ದು ಮೈಸೂರಿನ ಜೆಎಸ್ ಎಸ್ ಕಾಲೇಜಿನಲ್ಲಿ. ಅವರೊಳಗಿನ ನೈಜ ಆಸಕ್ತಿಗೆ ವೇದಿಕೆ ಮತ್ತು ಪ್ರೋತ್ಸಾಹ ಸಿಕ್ಕಿದ್ದೂ ಕೂಡಾ ಇಲ್ಲಿಯೇ.
Advertisement
Advertisement
ರಾಧಾ ಅವರಿಗೆ ಅಕ್ಷರಗಳ ಪರಿಚಯವಾದ ಘಳಿಗೆಯಿಂದಲೇ ಸಾಹಿತ್ಯದತ್ತ ಕಣ್ಣಾಡಿಸುವ, ತಮ್ಮ ಸುತ್ತಲಿನ ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಕಥೆ ಬರೆಯುವ ಹವ್ಯಾಸ ಬೆಳೆದು ಬಂದಿತ್ತು. ಇವರ ತಾಯಿಯ ತಂದೆಯವರಾದ ವೆಂಕಟರಾವ್ ಅವರೂ ಕೂಡಾ ಕಥೆಗಾರರೇ. ಬ್ರಿಟಿಷರ ವಿರುದ್ಧ ಕಥೆ ಬರೆದು ಆಕ್ರೋಶ ಹೊರ ಹಾಕೋ ಕ್ರಾಂತಿಕಾರಿ ಮನಸ್ಥಿತಿ ಹೊಂದಿದ್ದ ವೆಂಕಟರಾಯರು ಬರೆದ ಅದೆಷ್ಟೋ ಕಥೆಗಳನ್ನು ಬ್ರಿಟಿಷ್ ಅಧಿಕಾರಿಗಳ ದರ್ಪಕ್ಕೆ ಬೆದರಿ ಮನೆ ಮಂದಿ ಸುಟ್ಟು ಹಾಕುತ್ತಿದ್ದರಂತೆ. ಆ ತಾತನ ಕಥೆ ಬರೆಯೋ ಪ್ರತಿಭೆಯೇ ಮೊಮ್ಮಗ ರಾಧಾಗೂ ಬಂದಿದೆ ಅಂತ ಆಗಾಗ ಅಪ್ಪ ಅಮ್ಮ ಹೇಳುತ್ತಿದ್ದರಂತೆ. ಶಾಲೆಯಲ್ಲಿ ರಾಧಾರ ಈ ಪ್ರತಿಭೆಗೆ ಮೇಸ್ಟರಾಗಿದ್ದ ವೆಂಕೋಬ ಪಾಟೀಲರೂ ಕೂಡಾ ಪ್ರೋತ್ಸಾಹ ಕೊಡುತ್ತಾ ಬಂದಿದ್ದರಿಂದಲೇ ಕಾಲೇಜು ತಲುಪೋ ಹೊತ್ತಿಗೆಲ್ಲ ಅವರೊಳಗೊಬ್ಬ ಕಥೆಗಾರ ಜೀವ ಪಡೆದು ಬಿಟ್ಟಿದ್ದ.
Advertisement
Advertisement
ಶಾಲಾ ದಿನಗಳಲ್ಲಿಯೇ ರಾಧಾ ಯಾವ ಪರಿಯಾಗಿ ಬರವಣಿಗೆಯ ಗುಂಗಿಗೆ ಬಿದ್ದಿದ್ದರೆಂದರೆ ಪ್ರತೀ ದಿನವೂ ಏನಾದರೊಂದು ಬರೆಯದಿದ್ದರೆ ನಿದ್ದೆ ಹತ್ತದಂತಾಗುತ್ತಿದ್ದರು, ಕಡೆಯ ಪಕ್ಷ ಡೈರಿಯಾದರೂ ಗೀಚಿದರೇನೇ ಸಮಾಧಾನ. ಮಗ ಚೆಂದಗೆ ಓದಿ ದೊಡ್ಡ ಕೆಲಸ ಹಿಡಿಯ ಬೇಕೆಂಬ ಆಸೆ ಹೊಂದಿದ್ದ ತಂದೆ ಇದರಿಂದ ಗಾಬರಿಗೀಡಾಗುತ್ತಿದ್ದದ್ದೂ ಇದೆ. ಆದರೂ ಬರವಣಿಗೆಯನ್ನೇ ನೆಚ್ಚಿಕೊಂಡಿದ್ದ ಅವರು ಶಾಲಾ ಕಾಲೇಜು ದಿನಗಳಲ್ಲಿ ಲೇಖನಗಳ ಮೂಲಕ ಸುತ್ತಲಿನವರಿಗೆ ವಿಶೇಷ ವ್ಯಕ್ತಿಯಾಗಿ ಕಾಣಿಸಲಾರಂಭಿಸಿದ್ದರು. ಹೀಗೆ ಬರೆಯೋ ಹವ್ಯಾಸ ಬೆಳೆಸಿಕೊಳ್ಳುತ್ತಲೇ ತಾನು ಸಿನಿಮಾ ರಂಗದಲ್ಲಿ ಏನಾದರೊಂದು ಸಾಧಿಸಲೇ ಬೇಕೆಂಬ ಕನಸು ಅವರೊಳಗೆ ಚಿಗುರಿಕೊಂಡಿತ್ತು. ಅದುವೇ ಅವರನ್ನು ಅನಾಯಾಸವಾಗಿ ಚಿತ್ರರಂಗದ ಸಂಪರ್ಕಕ್ಕೂ ಪಕ್ಕಾಗಿಸಿತ್ತು.
ರಾಯಚೂರು ಸೀಮೆಯಲ್ಲಿ ತೆಲುಗು ಚಿತ್ರರಂಗದ ನಂಟು ಹೊಂದಿರೋ ಅನೇಕರಿದ್ದಾರೆ. ಬಾಹುಬಲಿ ಖ್ಯಾತಿಯ ರಾಜಮೌಳಿಯವರೂ ಕೂಡಾ ರಾಧಾರ ದೂರದ ಸಂಬಂಧಿಕರೇ. ಈ ನಂಟಿನೊಂದಿಗೇ ರಾಧಾ ತೆಲುಗು ಚಿತ್ರರಂಗಕ್ಕೆ ರೈಟರ್ ಆಗಿ ಪಾದಾರ್ಪಣೆ ಮಾಡಿದ್ದರು. 2006ರಲ್ಲಿ ಹೀಗೆ ಪಾದಾರ್ಪಣೆ ಮಾಡಿದ್ದ ಅವರು ಈವರೆಗೆ ಎಂಬತ್ತಕ್ಕೂ ಹೆಚ್ಚು ತೆಲುಗು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಅಲ್ಲಿ ಹೀಗೆ ಯಶಸ್ವಿಯಾದರೂ ಕನ್ನಡ ಚಿತ್ರವೊಂದನ್ನು ಮಾಡಬೇಕೆಂಬ ಆಸೆ ಅವರಿಗೆ ಇದ್ದೇ ಇತ್ತು. ಅದಕ್ಕೆ ಸರಿಯಾದ ಮುಹೂರ್ತ ಕೂಡಿ ಬಂದಿದ್ದು ಖನನ ಚಿತ್ರದ ಮೂಲಕ.
ಶ್ರೀನಿವಾಸ್ ರಾವ್ ಅವರು ತಮ್ಮ ಮಗನ ಎಂಟ್ರಿಗೆ ವಿಶೇಷವಾದೊಂದು ಕಥೆಗಾಗಿ ಕಾದು ಕೂತಿದ್ದರಲ್ಲಾ? ಅದು ಹೇಗೋ ಅವರ ಸಂಪರ್ಕವಾಗಿ, ಅವರಿಗೆ ರಾಧಾ ಹೇಳಿದ ಕಥೆ ಇಷ್ಟವಾಗಿ ಹೋಗಿತ್ತು. ತೀರಾ ಮೂವತ್ತು ನಲವತ್ತು ಕೋಟಿ ಬಜೆಟ್ಟಿನ ಚಿತ್ರಗಳಿಗೆ ಕೆಲಸ ಮಾಡಿದ್ದ ರಾಧಾ ಸಣ್ಣ ಮೊತ್ತದ ಚಿತ್ರ ಮಾಡೋದು ಹೇಗೆಂದು ಆರಂಭದಲ್ಲಿ ಚಿಂತೆಗೆ ಬಿದ್ದಿದ್ದರಂತೆ. ಆದರೆ ಕಥೆ ಚೆನ್ನಾಗಿದ್ದುದರಿಂದಾಗಿ ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ ಖನನವನ್ನು ನಿರ್ಮಾಣ ಮಾಡಲೂ ನಿರ್ಮಾಪಕರು ಮುಂದಾಗಿದ್ದರು. ಯಾವ ಕೊರತೆಯೂ ಆಗದಂತೆ ನೋಡಿಕೊಂಡಿದ್ದರಂತೆ. ಈ ಕಾರಣದಿಂದಲೇ ಈಗ ಖನನ ಬಿಡುಗಡೆಗೆ ತಯಾರಾಗಿ ನಿಂತಿದೆ.
ತೆಲುಗಿನಲ್ಲಿ ಎಂಬತ್ತಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದರೂ ರಾಧಾ ಖನನ ಮೂಲಕವೇ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಯಾವ ಭಾಷೆಗೇ ಆದರೂ ಹೊಸತಾಗುವಂಥಾ ಖನನ ಎಲ್ಲ ವರ್ಗದವರಿಗೂ ಇಷ್ಟವಾಗುವ, ಬದುಕಿನ ವಾಸ್ತವವನ್ನು ತೆರೆದಿಡುವ ಭಿನ್ನ ಮಾದರಿಯಲ್ಲಿ ಮೂಡಿ ಬಂದಿದೆಯಂತೆ. ಹೇಳಿಕೇಳಿ ರಾಧಾ ತೆಲುಗು ಚಿತ್ರರಂಗದಲ್ಲಿ ಪಳಗಿಕೊಂಡಿರುವವರು. ಆದ್ದರಿಂದ ವಿಶಿಷ್ಟವಾದ ಈ ಕಥೆಯನ್ನು ಅವರು ಪಕ್ಕಾ ಕಮರ್ಶಿಯಲ್ ಶೈಲಿಯಲ್ಲಿಯೇ ನಿರ್ದೇಶನ ಮಾಡಿದ್ದಾರಂತೆ. ಈ ಚಿತ್ರದ ಅಸಲೀ ಮಜಾ ಏನೆಂಬುದು ಮುಂದಿನ ತಿಂಗಳ ಹೊತ್ತಿಗೆಲ್ಲ ತಿಳಿಯಲಿದೆ.