LatestMain PostNational

ಹಿಮಾಚಲ ಅಸೆಂಬ್ಲಿ ಗೇಟ್‌ನಲ್ಲಿ ಖಲಿಸ್ತಾನ್ ಧ್ವಜ – ಸಿಎಂ ಜೈರಾಮ್ ಠಾಕೂರ್ ಕಿಡಿ

ಶಿಮ್ಲಾ: ಭಾನುವಾರ ಬೆಳಗ್ಗೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ವಿಧಾನಸಭೆಯ ಮುಖ್ಯ ಗೇಟ್ ಹಾಗೂ ಗೋಡೆಯ ಮೇಲೆ ಖಲಿಸ್ತಾನ್ ಧ್ವಜಗಳನ್ನು ಕಟ್ಟಿರುವುದು ಕಂಡುಬಂದಿದೆ.

ಭಾನುವಾರ ಮುಂಜಾನೆ ಗೇಟ್‌ಗಳ ಮೇಲೆ ಖಲಿಸ್ತಾನ್ ಧ್ವಜಗಳನ್ನು ಕಟ್ಟಿರುವ ಬಗ್ಗೆ ಕಾಂಗ್ರಾ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಅಸೆಂಬ್ಲಿ ಗೋಡೆಗಳ ಹೊರವಲಯದಲ್ಲಿ ಖಲಿಸ್ತಾನ್ ಪರ ಘೋಷಣೆಗಳೂ ಕಂಡುಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಡಾ. ನಿಪುನ್ ಜಿಂದಾಲ್ ಘಟನೆಯನ್ನು ಖಚಿತಪಡಿಸಿಕೊಂಡು, ಆರೋಪಿಗಳ ಪತ್ತೆಗೆ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹುತಾತ್ಮ ಯೋಧ ಹರ್ದೀಪ್ ಸಿಂಗ್ ಕುಟುಂಬಕ್ಕೆ 1 ಕೋಟಿ ಪರಿಹಾರ ಘೋಷಿಸಿದ ಭಗವಂತ್ ಮಾನ್

ಕೆಲವು ದುಷ್ಕರ್ಮಿಗಳು ತಾಪಿವನ್‌ನಲ್ಲಿರುವ ರಾಜ್ಯ ವಿಧಾನಸಭೆಯ ಗೇಟ್‌ನ ಹೊರಭಾಗದಲ್ಲಿ ಐದಾರು ಖಲಿಸ್ತಾನ್ ಧ್ವಜಗಳನ್ನು ಹಾಕಿದ್ದು, ಗೋಡೆಯ ಮೇಲೆ ಖಲಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನೂ ಬರೆದಿದ್ದಾರೆ. ಇದೀಗ ಧ್ವಜಗಳನ್ನು ಹಾಗೂ ಬರಹಗಳನ್ನು ತೆರವುಗೊಳಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಡುರಸ್ತೆಯಲ್ಲಿ ಗೂಂಡಾಗಳಿಂದ 15 ಬಾರಿ ಫೈರಿಂಗ್ – ಇಬ್ಬರಿಗೆ ಗಾಯ

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಕೃತ್ಯವನ್ನು ಖಂಡಿಸಿ, ನಿಮಗೆ ಧೈರ್ಯವಿದ್ದರೆ ರಾತ್ರಿ ಹೊತ್ತಲ್ಲ, ಹಗಲಿನಲ್ಲಿ ಈ ಕೆಲಸ ಮಾಡಬೇಕಿತ್ತು ಎಂದು ಕಿಡಿಕಾರಿದ್ದಾರೆ. ಇದು ಪಂಜಾಬ್‌ನ ಕೆಲವು ಪ್ರವಾಸಿಗರ ಕೃತ್ಯದಂತೆ ಮೇಲ್ನೋಟಕ್ಕೆ ತೋರುತ್ತಿದೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published.

Back to top button