ರಂಗಭೂಮಿಯಿಂದ ಬಂದ ಪ್ರತಿಭೆಗಳಿಗೆ ಕನ್ನಡ ಚಿತ್ರರಂಗದಲ್ಲೊಂದು ವಿಶೇಷವಾದ ಸ್ಥಾನಮಾನವಿದೆ. ಹಾಗೆ ಬಂದ ಪ್ರತಿಭಾನ್ವಿತರು ತಮ್ಮ ನಟನೆಯ ಕಸುವಿನಿಂದಲೇ ನೆಲೆ ಕಂಡುಕೊಂಡು, ಪ್ರಸಿದ್ಧಿ ಪಡೆದದ್ದಿದೆ. ಸದ್ಯದ ಮಟ್ಟಿಗೆ ಈ ವಾರ ಬಿಡುಗಡೆಗೊಳ್ಳುತ್ತಿರುವ `ಕೆರೆಬೇಟೆ’ (Kerebete) ಚಿತ್ರದ ಮೂಲಕ ಆ ಸಾಲಿಗೆ ಸೇರ್ಪಡೆಗೊಳ್ಳುವ ತವಕದಲ್ಲಿರುವವರು ರಘು ರಾಜಾನಂದ (Raghu Rajananda). ಇದುವರೆಗೂ ರಂಗಭೂಮಿ ನಟನಾಗಿದ್ದುಕೊಂಡು, ದೇಶಾದ್ಯಂತ ನಾಟಕ ಪ್ರದರ್ಶನ ನೀಡಿದ್ದ ರಘು ಪಾಲಿಗೆ ರಾಜಗುರು ಬಿ ನಿರ್ದೇಶನದ, ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿರುವ ಕೆರೆಬೇಟೆ ಚಿತ್ರದಲ್ಲಿ ಚೆಂದದ್ದೊಂದು ಪಾತ್ರ ಸಿಕ್ಕಿದೆ. ಇದರೊಂದಿಗೆ ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ರಂಗಭೂಮಿ ಪ್ರತಿಭೆಯ ಆಗಮನವಾದಂತಿದೆ.
Advertisement
ನಿರ್ದೇಶಕರು ಈ ಸಿನಿಮಾದ ಸಬ್ ಇನ್ಸ್‍ಪೆಕ್ಟರ್ ಪಾತ್ರಕ್ಕೆ ಕಟ್ಟುಮಸ್ತಾದ ಕಲಾವಿದನ ಹುಡುಕಾಟದಲ್ಲಿದ್ದಾಗ, ಅವರ ಕಣ್ಣಿಗೆ ಬಿದ್ದವರು ರಘು ರಾಜಾನಂದ. ನಟನೆಯ ಛಾತಿ ಮಾತ್ರವಲ್ಲದೇ ದೈಹಿಕವಾಗಿಯೂ ಆ ಪಾತ್ರಕ್ಕೆ ಸರಿಹೊಂದುವಂತಿದ್ದ ರಘು ರಾಜಾನಂದರಿಗೆ ಆ ಪಾತ್ರ ಮರುಮಾತಿಲ್ಲದಂತೆ ನಿಕ್ಕಿಯಾಗಿತ್ತು. ಅದು ಖಡಕ್ ಪೊಲೀಸ್ ಅಧಿಕಾರಿಯ ಪಾತ್ರ. ಕೇಸೊಂದನ್ನು ಅಮೂಲಾಗ್ರವಾಗಿ ತನಿಖೆ ನಡೆಸುವ, ಒಟ್ಟಾರೆ ಸಿನಿಮಾದಲ್ಲಿ ಅನೇಕ ರೋಚಕ ತಿರುವುಗಳಿಗೆ ಕಾರಣವಾಗುವ ಆ ಪಾತ್ರ ಸಿಕ್ಕ ಖುಷಿ ರಘು ಅವರಲ್ಲಿದೆ.
Advertisement
Advertisement
ಅತ್ಯಂತ ಅಚ್ಚುಕಟ್ಟಾಗಿ, ಶಿಸ್ತಿನಿಂದ ನಡೆಯುತ್ತಿದ್ದ ಚಿತ್ರೀಕರಣದ ಚಟುವಟಿಕೆಗಳು ರಘು ರಾಜಾನಂದರ ಸಿನಿಮಾ ಯಾನಕ್ಕೆ ಮತ್ತಷ್ಟು ಅನುಭವ ಕಟ್ಟಿಕೊಟ್ಟಿದೆ. ಮೊದಲ ಕೇಳಿದ ಕಥೆ, ತನ್ನ ಕಲ್ಪನೆ ಮೀರಿ ದೃಶ್ಯರೂಪ ಧರಿಸಿದ ಪರಿ ಕಂಡು ಒಂದು ಪಾತ್ರವಾಗಿ ರಘು ಸಂಭ್ರಮಿಸಿದ್ದಾರೆ. ಇದೊಂದು ಹಿಟ್ ಚಿತ್ರವಾಗಿ ದಾಖಲಾಗುತ್ತದೆಂಬ ನಂಬಿಕೆ, ಈ ಪಾತ್ರದ ಮೂಲಕವೇ ಸಿನಿಮಾ ರಂಗದಲ್ಲಿ ತನ್ನ ಮುಂದೊಂದು ನಿಖರ ದಾರಿ ತೆರೆದುಕೊಂಡಿತೆಂಬ ನಿರೀಕ್ಷೆ ರಘು ಅವರಲ್ಲಿದೆ. ಈಗಾಗಲೇ ಹೊಸಕೋಟೆಯ ರಂಗವಿಜಯ ನಾಟಕ ತಂಡದ ಭಾಗವಾಗಿದ್ದುಕೊಂಡು ಹಲವಾರು ಪಾತ್ರಗಳನ್ನು ರಘು ನಿರ್ವಹಿಸಿದ್ದಾರೆ. ಆ ಅನುಭವವನ್ನು ಒಟ್ಟುಗೂಡಿಸಿ ಕೆರೆಬೇಟೆಯಲ್ಲಿನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ ತೃಪ್ತ ಭಾವವೂ ಅವರಲ್ಲಿದೆ.
Advertisement
ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಜೈಶಂಕರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.