ಬೆಂಗಳೂರು: ವಿಧಾನಸಭಾ ವಿರೋಧ ಪಕ್ಷದ ನಾಯಕ ಆಯ್ಕೆ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದ್ದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ಸದ್ಯ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ವಾರ್ನಿಂಗ್ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಬದಲಾವಣೆ ಮಾಡಬೇಕು ಎಂದು ಕೆ.ಎಚ್.ಮುನಿಯಪ್ಪ ಬೆಂಬಲಿಗರು ಸಭೆ ನಡೆಸಿ ಆಗ್ರಹಿಸಿದ್ದರು. ಈ ಸಭೆ ಪಕ್ಷದ ಶಿಸ್ತು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಕೆಪಿಸಿಸಿ ಅವರ ಅವಮಾನತಿಗೆ ಮುಂದಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಮುನಿಯಪ್ಪ ಅವರು ದಿನೇಶ್ ಗುಂಡೂರಾವ್ ರೊಂದಿಗೆ ಜಟಾಪಟಿ ನಡೆಸಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ಮುನಿಯಪ್ಪ ಅವರು ಕಚೇರಿಯಲ್ಲಿಯೇ ದಿನೇಶ್ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದು, ತಮ್ಮ ಆಪ್ತರನ್ನ ಅಮಾನತು ಮಾಡದಂತೆ ಹೇಳಿದ್ದರು. ಅಲ್ಲದೇ ತಮ್ಮ ಬೆಂಬಲಿಗರು ಹೇಳಿಕೆ ನೀಡಿದ್ದಾರೆ ಎಂದ ಮಾತ್ರಕ್ಕೆ ಅಮಾನತು ಮಾಡುವುದಾದರೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ಮೇಲೆ ನಾನೇ ದೂರು ನೀಡಿದ್ದು, ಈ ದೂರಿನ ಅನ್ವಯ ಮೊದಲು ಪಕ್ಷ ವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪರೋಕ್ಷವಾಗಿ ಮಾಜಿ ಸ್ಪೀಕರ್ ರಮೇಶ್ ಕುಮಾರ್‍ರತ್ತ ಮುನಿಯಪ್ಪ ಬೊಟ್ಟು ಮಾಡಿದ್ದರು ಎಂಬ ಮಾಹಿತಿ ಲಭಿಸಿದೆ.
ಇತ್ತ ಮುನಿಯಪ್ಪ ಅವರಿಗೆ ಮಾತಿಗೆ ಯಾವುದೇ ಬೆಲೆ ನೀಡಿದ ದಿನೇಶ್ ಗುಂಡೂರಾವ್ ಅವರು, ಮುನಿಯಪ್ಪ ಬೆಂಬಲಿತ ಕೋಲಾರದ ಜಿಲ್ಲಾ ಕಾಂಗ್ರೆಸ್‍ನ 7 ಸದಸ್ಯರನ್ನು ಅಮಾನತು ಮಾಡಿದ್ದಾರೆ. ಕೆಪಿಸಿಸಿಯಿಂದ ಆದೇಶ ಅನ್ವಯ ಪ್ರಸಾದ್ ಬಾಬು, ಕುಮಾರ್, ಅತವುಲ್ಲಾ, ಇಕ್ಬಾಲ್ ಅಹಮದ್, ಜಯದೇವ್, ನಾಗರಾಜ್, ಎಲ್ ಕಟೀಲ್ ಅಮಾನತು ಗೊಂಡ ಕಾಂಗ್ರೆಸ್ ಸದಸ್ಯರಾಗಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎಚ್.ಮುನಿಯಪ್ಪ ಅವರು, ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಅಮಾನತು ಮಾಡದೆ ಸಮಿತಿ ರಚಿಸಿ ಅಭಿಪ್ರಾಯ ಸಂಗ್ರಹಿಸಿ ಕ್ರಮಕೈಗೊಳ್ಳಲು ಮನವಿ ಮಾಡಿದ್ದೇನೆ. ಅಂತಿಮವಾಗಿ ವರದಿ ಬಂದ ಬಳಿಕ ಪಕ್ಷದ ಅಧ್ಯಕ್ಷರು ಏನು ಕ್ರಮಕೈಗೊಳ್ಳುತ್ತಾರೆ ಅದಕ್ಕೆ ಎಲ್ಲರೂ ಬದ್ಧರಾಗಿರಬೇಕಾಗುತ್ತದೆ ಎಂದು ಹೇಳಿದರು.