– ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್ ಕಾರ್ಡ್ ಇವೆ
– 5 ಮಾನದಂಡಗಳನ್ನ ಕಟ್ಟುನಿಟ್ಟಾಗಿ ಪಾಲಿಸಲು ಬದ್ಧ
ಬೆಂಗಳೂರು: ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಬಿಪಿಎಲ್ ಕಾರ್ಡ್ (BPL Card) ಇರೋದು ಕರ್ನಾಟಕದಲ್ಲೇ, 1.28 ಕೋಟಿ ಬಿಪಿಎಲ್ ಕಾರ್ಡ್‌ಗಳಿದ್ದು 4 ಕೋಟಿ ಜನ ಇದ್ದಾರೆ. ಎಪಿಎಲ್ ಅರ್ಹತೆ ಹೊಂದಿರೋರು ಬಿಪಿಎಲ್ ಕಾರ್ಡ್ ಹೊಂದಿರುವುದೇ ಇದಕ್ಕೆ ಕಾರಣ. ಇದನ್ನ ಮತ್ತೆ ಪರಿಷ್ಕರಣೆ ಮಾಡ್ತೀವಿ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ (KH Muniyappa) ತಿಳಿಸಿದರು.
ಮಳೆಗಾಲದ ಅಧಿವೇಶನ (Monsoon Session) ಇಂದಿನಿಂದ ಆರಂಭವಾಗಿದ್ದು, ಮೊದಲಿಗೆ ನಿಧನರಾದ ಗಣ್ಯರಿಗೆ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟ 11 ಮಂದಿ ಆರ್‌ಸಿಬಿ ಅಭಿಮಾನಿಗಳಿಗೆ ಸಂತಾಪ ಸೂಚಿಸಲಾಯಿತು. ಬಳಿಕ ಪ್ರಶೋತ್ತರ ಅವಧಿಯಲ್ಲಿ ಮಾತನಾಡಿದ, ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ನಾಗರಾಜ್ ಯಾದವ್, ಪಡಿತರ ಕೊಡುವ ತಂತ್ರಾಂಶದಲ್ಲಿ ಲೋಪ ಇದೆ. e-PoS ತಂತ್ರಾಂಶದಲ್ಲಿ ದೊಡ್ಡ ಲೋಪ ಆಗಿದೆ. ಇದರಿಂದ 1.5 ಕೋಟಿ ಪಡಿತರ ಚೀಟಿ ಹೊಂದಿರೋರಿಗೆ ಸಮಸ್ಯೆ ಆಗ್ತಿದೆ. ಪಡಿತರ ಕೊಡೋದ್ರಲ್ಲಿ ಅಕ್ರಮವಾಗ್ತಿದೆ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ರು.
ಕಾಳಸಂತೆಯಲ್ಲಿ ಮಾರಾಟ ಆಗ್ತಿರೋದು ಸತ್ಯ
ಇದಕ್ಕೆ ಉತ್ತರಿಸಿದ ಸಚಿವ ಕೆ.ಹೆಚ್ ಮುನಿಯಪ್ಪ, ಮೊದಲು ತಂತ್ರಾಂಶದಲ್ಲಿ ಲೋಪ ಇತ್ತು, ಈಗ ಆ ಸಮಸ್ಯೆ ಇಲ್ಲ. ಅಲ್ಲದೇ ಪಡಿತರ ರೇಷನ್ ಕಾಳ ಸಂತೆಯಲ್ಲಿ ಮಾರಾಟ ಆಗ್ತಿರೋದು ಸತ್ಯ. ಇದನ್ನ ಕಡಿವಾಣ ಹಾಕಲು ಕ್ರಮ ತೆಗೆದುಕೊಳ್ಳಲಾಗಿದೆ. ಅನೇಕ ಕೇಸ್ ಹಾಕಲಾಗಿದೆ. ದಂಡ ವಸೂಲಿ ಮಾಡಲಾಗಿದೆ ಎಂದು ವಿವರಿಸಿದರು.
ಮುಂದುವರಿದು.. ಎಪಿಎಲ್ ಕಾರ್ಡ್ ಅರ್ಹತೆ ಇರೋರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಬಿಪಿಎಲ್ ಕಾರ್ಡ್ ಇರೋದು ಕರ್ನಾಟಕದಲ್ಲಿ. ಕರ್ನಾಟಕದಲ್ಲೇ 75%. ಬಿಪಿಎಲ್ ಕಾರ್ಡ್ ಇವೆ. 1.28 ಕೋಟಿ ಬಿಪಿಎಲ್ ಕಾರ್ಡ್‌ಗಳಿದ್ದು, 4 ಕೋಟಿ ಜನ ಇದ್ದಾರೆ. ಈ ಹಿಂದೆ ಎಪಿಎಲ್ ಅರ್ಹತೆ ಇರೋರು ಬಿಪಿಎಲ್‌ನಲ್ಲಿ ಇದ್ದರು. ಅದನ್ನ ಸರಿ ಮಾಡೋಕೆ ಮುಂದಾಗಿದ್ದೆವು, ಆಗ ಗಲಾಟೆ ಆಯ್ತು. ಈಗ ಮತ್ತೆ ಅದನ್ನ ಪರಿಷ್ಕರಣೆ ಮಾಡ್ತೀವಿ. ಇದಕ್ಕೆ ಎಲ್ಲಾ ಸದಸ್ಯರ ಸಹಕಾರ ಬೇಕು ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ 5 ಮಾನದಂಡ ಇಟ್ಟುಕೊಂಡು ಬಿಪಿಎಲ್ ಕಾರ್ಡ್ ಕೊಡುತ್ತಿದ್ದೇವೆ. ಅರ್ಹತೆ ಇಲ್ಲದೇ ಬಿಪಿಎಲ್ ಕಾರ್ಡ್ ಪಡೆದಿದ್ದರೆ ಇರೋರಿಗೆ ಕಾರ್ಡ್ ರದ್ದು ಮಾಡೊಲ್ಲ. ಅವರಿಗೆ ಎಪಿಎಲ್ ಕೊಡ್ತೀವಿ. ಮಾನದಂಡಗಳನ್ನು ಸರಿಯಾಗಿ ಅನುಷ್ಠಾನ ಮಾಡೋ ಕೆಲಸ ಮಾಡ್ತೀವಿ ಎಂದು ಸಭೆಗೆ ತಿಳಿಸಿದರು.