ಬೆಳಗಾವಿ: ಅನ್ನಭಾಗ್ಯ (Anna Bhagya) ಅಕ್ಕಿ ಅಕ್ರಮ ಸಾಗಾಟ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ 5 ಕೆಜಿ ಅಕ್ಕಿಗೆ ಬದಲಾಗಿ ಜನವರಿಯಿಂದ ʻಇಂದಿರಾ ಕಿಟ್ʼ ಕೊಡೋದಾಗಿ ಆಹಾರ ಸಚಿವ ಮುನಿಯಪ್ಪ (KH Muniyappa) ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸಿ.ಟಿ ರವಿ ಪ್ರಶ್ನೆ ಕೇಳಿದ್ರು. ಬಿಪಿಎಲ್ (BPL) ಕಾರ್ಡ್‌ದಾರರಿಗೆ ಕೊಡುವ ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಸಂಗ್ರಹ ಮಾಡಲಾಗ್ತಿದೆ. ಈ ಅಕ್ಕಿ ಹೊರ ದೇಶಕ್ಕೆ, ರಾಜ್ಯಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗ್ತಿದೆ. ರಾಜ್ಯ ವ್ಯಾಪಿ ಈ ಅಕ್ರಮ ಆಗ್ತಿದೆ. ಸಿಂಗಾಪುರದಲ್ಲಿ, ದುಬೈನಲ್ಲಿ (Dubai) ಇದೇ ಅಕ್ಕಿ ಪಾಲಿಶ್ ಮಾಡಿ ಮಾರಾಟ ಮಾಡ್ತಿದ್ದಾರೆ. ಬಡವರ ಅಕ್ಕಿ ಬಡವರಿಗೆ ಸೇರುತ್ತಿಲ್ಲ. ಇದರಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಅಕ್ರಮ ಆಗಿದೆ. ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಅಕ್ರಮ ಅಕ್ಕಿ ಸಾಗಾಟ ಪ್ರಕರಣ SIT ರಚನೆ ಮಾಡಬೇಕು ಅಂತ ಒತ್ತಾಯ ಮಾಡಿದ್ರು.
ಈ ವರ್ಷ 485 ಕೇಸ್ ದಾಖಲು
ಇದಕ್ಕೆ ಸಚಿವ ಮುನಿಯಪ್ಪ ಉತ್ತರ ನೀಡಿ, ಅನ್ನಭಾಗ್ಯ ಅಕ್ಕಿ ಹೊರ ದೇಶ, ರಾಜ್ಯಕ್ಕೆ ಸಾಗಾಟ ಮಾಡ್ತಿರೋದು ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಸಿದಂತೆ ಪ್ರಕರಣ ದಾಖಲಾಗಿದೆ. 2025 ರಲ್ಲಿ ಸುಮಾರು 485 ಕೇಸ್ ದಾಖಲು ಮಾಡಲಾಗಿದೆ. 29,603 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಕೊಪ್ಪಳ ಕೇಸ್ ಸಿಐಡಿಗೆ ವಹಿಸಲಾಗಿದೆ. ಬಾಗಲಕೋಟೆ ಕೇಸ್ ತನಿಖೆ ಮಾಡಲಾಗ್ತಿದೆ. ಪತ್ರಕರ್ತನ ಕೊಲೆ ಆಗಿದೆ. ಕಾಳಸಂತೆಯಲ್ಲಿ ಅಕ್ಕಿ ಮಾರಾಟಕ್ಕೆ ಕಡಿವಾಣ ಹಾಕಲು ಕ್ರಮವಹಿಸಲಾಗಿದೆ ಎಂದರು.
ನಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ 10 ಕೆಜಿ ಅಕ್ಕಿ ಕೊಡ್ತಾ ಇದ್ದೇವೆ. ಈಗ ಇಂದಿರಾ ಕಿಟ್ ಕೊಡುವ ನಿರ್ಧಾರ ಮಾಡಲಾಗಿದೆ. ಜನವರಿಯಲ್ಲಿ ಇಂದಿರಾ ಕಿಟ್ ವಿತರಣೆ ಮಾಡ್ತೀವಿ. ಇಂದಿರಾ ಕಿಟ್ ಕೊಟ್ಟಾಗ ಅಕ್ರಮ ಅಕ್ಕಿ ಸಾಗಾಟ ತಡೆಗಟ್ಟಬಹುದು. ಪೌಷ್ಟಿಕ ಆಹಾರ ಜನರಿಗೆ ಸಿಗೋ ವ್ಯವಸ್ಥೆ ಮಾಡ್ತೀವಿ. ಎಸ್‌ಐಟಿ ರಚನೆ ಅವಶ್ಯತೆ ಇಲ್ಲ. ಇರೋ ಕಾನೂನಿನಲ್ಲಿ ಅಕ್ರಮ ತಡೆಗೆ ಕ್ರಮವಹಿಸುತ್ತೇವೆ. ಅಕ್ರಮದ ಬಗ್ಗೆ ಸಿರಿಯಸ್ ಆಕ್ಷನ್ ಆಗ್ತಿದೆ. ಸರ್ಕಾರ ಸರಿಯಾಗಿ ಕೆಲಸ ಮಾಡ್ತಿದೆ ಅಂತ ತಿಳಿಸಿದರು.
ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಯಾದಗಿರಿ ಅಕ್ರಮದ ಕೇಸ್ ಸಿಐಡಿಗೆ ಕೊಡಲಾಗಿದೆ. ಅದರಲ್ಲಿ ಎ1, ಎ2 ಯಾರು ಅಂತ ನೋಡಲಿ ಎಂದ ಸಿಟಿ ರವಿಗೆ ಟಾಂಗ್ ಕೊಟ್ಟರು. ಪ್ರಿಯಾಂಕ್ ಖರ್ಗೆ ಮಾತಾಡಿದ್ದಕ್ಕೆ ಭೋಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ಸಚಿವರು ಉತ್ತರ ಕೊಡೋಕೆ ಇದ್ದಾಗ ಬೇರೆಯವರು ಯಾಕೆ ಮಾತಾಡಬೇಕು ಅಂತ ಆಕ್ರೋಶ ಹೊರ ಹಾಕಿದ್ರು. ಮತ್ತೆ ಮಾತಾಡಿದ ಪ್ರಿಯಾಂಕ್ ಖರ್ಗೆ, ಯಾದಗಿರಿಯಲ್ಲಿ ಎ1, ಎ2, ಎ3 ಬಿಜೆಪಿ ಅವರೇ. ಬಿಜೆಪಿ ಪದಾಧಿಕಾರಿಗಳು ಮಾಡಿರೋದು. ಬಿಜೆಪಿ ಮೆಂಬರ್ ಮಾಡಿರೋದು ಅಂತ ಆರೋಪ ಮಾಡಿದ್ರು. ಪ್ರಿಯಾಂಕ್ ಖರ್ಗೆ ಮಾತಿಗೆ ಬಿಜೆಪಿ ಸದಸ್ಯ ವಿರೋಧ ಮಾಡಿದ್ರು. ಸದನದಲ್ಲಿ ಗದ್ದಲ ಗಲಾಟೆ ಆಯ್ತು.


