ಪಬ್ಲಿಕ್ ರೇಟಿಂಗ್: 4.5/5
– ಮಹೇಶ್ ದೇವಶೆಟ್ಟಿ
ಕೊನೆಗೂ ಕನ್ನಡಿಗರು ಸಮಾಧಾನದ ಉಸಿರು ಬಿಟ್ಟಿದ್ದಾರೆ. ಕಳೆದ ಎರಡು ವರ್ಷದಿಂದ ಕಾಯುತ್ತಿದ್ದ ಅಮೃತ ಘಳಿಗೆಗೆ ಕೇಕೆ ಹೊಡೆದಿದ್ದಾರೆ. ಕೆಜಿಎಫ್ ಎನ್ನುವ ಸಿನಿಮಾ ದೇಶ ವಿದೇಶದಲ್ಲಿ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎಲ್ಲರ ಬಾಯಲ್ಲಿ ಒಂದೇ ಮಾತು, ಸಲಾಂ ರಾಕಿ ಭಾಯ್. ಅದು ಜನರ ಒನ್ ಲೈನ್ ವಿಮರ್ಶೆ. ಆದರೆ ಅದನ್ನು ಮೀರಿದ, ಕನ್ನಡ ಚಿತ್ರರಂಗ ಹಿಂದೆಂದೂ ಕಾಣದ, ಭಾರತೀಯ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದ ಅನೇಕ ಕಾಣಿಕೆಯನ್ನು ಕೆಜಿಎಫ್ ಕೊಟ್ಟಿದೆ. ಒಂದರ್ಥದಲ್ಲಿ ಕೆಜಿಎಫ್ ಕನ್ನಡ ಚಿತ್ರರಂಗಕ್ಕೆ ಮಹಾ ಕಿರೀಟ. ಹೇಗಿದೆ ರಾಕಿಂಗ್ ಸ್ಟಾರ್ ಅಬ್ಬರ? ಏನಿದರ ಕತೆ? ಯಾರ್ಯಾರು ಏನೇನು ಕಮಾಲ್ ಮಾಡಿದ್ದಾರೆ? ಅದರ ಇಂಚಿಂಚು ಮಾಹಿತಿಯೂ ಈ ಕೆಜಿಎಫ್ ಖಡಕ್ ರಿಪೋರ್ಟ್ ನಲ್ಲಿದೆ.
ಕನ್ನಡ ಚಿತ್ರರಂಗದ ಅಬ್ಬರಕ್ಕೆ ಬೆಚ್ಚಿಬಿದ್ದಿದ್ಯಾರು?
ಕೆಜಿಎಫ್ ಅಶ್ವಮೇಧ ಕುದುರೆ ಕಟ್ಟುವವರ್ಯಾರು?
Advertisement
ಬರೋಬ್ಬರಿ ಒಂದು ತಿಂಗಳಿಂದ ಎಲ್ಲಿ ನೋಡಿದರಲ್ಲಿ ಕೆಜಿಎಫ್ ಜಾತ್ರೆ. ಟ್ರೈಲರು, ಹಾಡು… ಒಂದೊಂದೇ ಜನರ ಕಣ್ಣ ಮುಂದೆ ಹೊಳೆಯುತ್ತಿದ್ದಂತೆಯೇ ಕೆಜಿಎಫ್ ಜ್ವರ ಜನರ ನೆತ್ತಿಗೇರಿತು. ದೇವ ದೇವಾ…ಕಾಲ್‍ಸೂಪೇ ಇಷ್ಟೊಂದು ಖಡಕ್ ಆಗಿರುವಾಗ ಇನ್ನು ಬಾಡೂಟದ ಪಾಡೇನು ಎಂದಿದ್ದರು. ನೀವು ಊಟ ಮಾಡುವುದು ಹೆಚ್ಚಾ, ನಾವು ಅಡುಗೆ ಮಾಡಿ ತಿನ್ನಿಸುವುದು ಹೆಚ್ಚಾ? ಎಂದು ಇಡೀ ಚಿತ್ರತಂಡ ಒಂದೇ ಸಲ ಎದ್ದು ನಿಂತಿದೆ. ಅದರ ಫಲಿತಾಂಶ ಸ್ಪಷ್ಟ: ಕನ್ನಡ ಚಿತ್ರರಂಗದ ಕಿರೀಟಕ್ಕೆ ಕೆಜಿಎಫ್ ವಜ್ರದ ಹರಳನ್ನು ಪೋಣಿಸಿ ನಗುತ್ತಿದೆ.
Advertisement
Advertisement
ಕೆಜಿಎಫ್ ಕನ್ನಡ ಚಿತ್ರರಂಗವನ್ನು ಮಾತ್ರ ಅಲ್ಲ, ಇಡೀ ಭಾರತೀಯ ಚಿತ್ರ ಜಗತ್ತನ್ನು ಬೆಚ್ಚಿಬೀಳಿಸಿದೆ. ಕನ್ನಡದ ಚಿತ್ರವೊಂದು ಹಾಲಿವುಡ್ ಮಟ್ಟದ ತೂಕವನ್ನು ಉಳಿಸಿಕೊಂಡು ನಿರ್ಮಾಣವಾಗಿದೆಯಲ್ಲ ಎಂದು ಅಚ್ಚರಿ ಮೂಡಿಸುತ್ತಿದೆ. ಅಕ್ಷರಶಃ ಸ್ಯಾಂಡಲ್‍ವುಡ್ ಎದೆ ಉಬ್ಬಿಸಿ ಬೀಗುವಂತೆ ಮಾಡಿದೆ. ಅದಕ್ಕೆ ಮೊಟ್ಟ ಮೊದಲು ಕಾರಣವಾಗಿದ್ದು ನಿರ್ದೇಶಕ ಪ್ರಶಾಂತ್ ನೀಲ್. ಉಗ್ರಂ ನಂತರ ಇವರು ಮಾಡಿದ ಸಿನಿಮಾ ಕೆಜಿಎಫ್. ಉಗ್ರಂನಲ್ಲೇ ಪ್ರಶಾಂತ್ ತಾವೆಂಥ ತಂತ್ರಜ್ಞ ಎಂದು ಸಾಬೀತು ಪಡಿಸಿದ್ದರು. ಅದರ ಮುಂದುವರೆದ ಭಾಗವೇ ಕೆಜಿಎಫ್. ಪ್ರತಿ ಫ್ರೇಮ್, ಪ್ರತಿ ದೃಶ್ಯದಲ್ಲಿ ಪ್ರಶಾಂತ್ ಟಚ್ ಕಾಣುತ್ತದೆ. ಆ ವ್ಯಕ್ತಿಯ ಸಿನಿಮಾ ನಿಯತ್ತು, ಭಕ್ತಿ ಮತ್ತು ಪ್ರೀತಿಗೆ ಸಾಕ್ಷಿ ನೀಡುತ್ತದೆ.
Advertisement
ಕೆಜಿಎಫ್ ಹೆಸರು ಕೇಳಿದಾಕ್ಷಣ ಎಲ್ಲರ ತಲೆಯಲ್ಲಿ ಮೊದಲು ಏಳುವ ಪ್ರಶ್ನೆಯೇ ಏನಿದರ ಕತೆ? ಅಂಥ ಹೊಸದೇನಿದೆ? ಯಾಕೆ ಇಷ್ಟೊಂದು ಮೆಚ್ಚುಗೆಗೆ ಪಾತ್ರವಾಗಿದೆ? ಇದಕ್ಕೆಲ್ಲ ಒಂದೇ ಸಾಲಿನಲ್ಲಿ ಒಂದೇ ಗುಕ್ಕಿನಲ್ಲಿ ಉತ್ತರ ಹೇಳುವುದು ಇಂಪಾಸಿಬಲ್. ಯಾಕೆಂದರೆ ಇದು ಅದನ್ನೆಲ್ಲಾ ಮೀರಿ ನಿಂತ ಸಿನಿಮಾ, ಕನ್ನಡಕ್ಕೆ ಹೊಸತನವನ್ನು ಕೊಟ್ಟ ಸಿನಿಮಾ, ಹೀಗೂ ಮೇಕಿಂಗ್ ಮಾಡಬಹುದು ಎಂದು ತೋರಿಸಿದ ಸಿನಿಮಾ, ಲಾಸ್ಟ್ ಬಟ್ ನಾಟ್ ಲೀಸ್ಟ್. ಇಂಡಿಯನ್ ಫಿಲ್ಮ್ ಇಂಡಸ್ಟ್ರಿಗೆ `ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲೂ ತಾಕತ್ತಿದೆ ಕಣ್ರೋ…’ ಎಂದು ತೊಡೆ ತಟ್ಟುವಂತೆ ಮಾಡಿದ ಸಿನಿಮಾ…
ನಿರ್ದೇಶಕನ ಸಿನಿಮಾ ಭಕ್ತಿಗೆ ಉಘೇ ಉಘೇ! – ಶರಣೆನ್ನುತ್ತೀರಿ ಪ್ರಶಾಂತ್ ನೀಲ್ ದಿಕ್ಕೆಡಿಸುವ ತಾಕತ್ತಿಗೆ!: ನಿಮಗೆ ಹೆಚ್ಚು ಕಾಯಿಸುವುದಿಲ್ಲ. ಕತೆಯನ್ನು ಖುಲ್ಲಂಖುಲ್ಲ ಬಿಚ್ಚಿಡುತ್ತೇವೆ. ಆದರೆ ಎಲ್ಲವನ್ನೂ ಇಲ್ಲೇ ಹೇಳಿಬಿಟ್ಟರೆ ಥೇಟರ್ ಗೆ ಹೋಗಿ ಪಾಪ್ ಕಾರ್ನ್ ತಿಂತಾ ಕೂಡ್ಬೇಕಾಗುತ್ತದೆ. ಸೋ…ಮುತ್ತು ಕೊಟ್ಟ ಹಾಗೆ ಇರಬೇಕು, ಆದರೆ ಕೊಡಲೂ ಬಾರದು. ಅಷ್ಟು ಮತ್ತು ಅಷ್ಟನ್ನೇ ಇಲ್ಲಿ ಹರವಿಡುತ್ತೇವೆ. ಮುಂಬೈನ ಡಾನ್ ಕೋಲಾರದ ಗಣಿಗೆ ಎಂಟ್ರಿ ಕೊಡುತ್ತಾನೆ, ಆತನ ಉದ್ದೇಶ ಬೇರೇನೋ ಆಗಿರುತ್ತದೆ. ಆದರೆ ಆ ಚಿನ್ನದ ಗಣಿಯಲ್ಲಿ ನಡೆಯುತ್ತಿರುವ ಅಮಾನುಷ ಕೃತ್ಯಗಳನ್ನು ನೋಡಿ ಹೈರಾಣಾಗುತ್ತಾನೆ. ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ನರಕ ಅನುಭವಿಸುತ್ತಿರುವುದಕ್ಕೆ ಕಣ್ಣೀರಾಗುತ್ತಾನೆ. ಮುಂದೇನಾಗುತ್ತದೆ ಅನ್ನೋದನ್ನ ಬಡಾ ಪರದೆ ಮೇಲೆ ವಾಚ್ ಇಟ್., ಬಾಯಿಗೆ ಮಾತ್ರ ಅಲ್ಲ, ಕಣ್ಣು ಮತ್ತು ಮನಸಿಗೂ ಒಬ್ಬಟ್ಟು.
ಅಪರೂಪದಲ್ಲೊಂದು ಅಪರೂಪಕ್ಕೆ ಇಂಥ ಸಿನಿಮಾ ಬರುತ್ತದೆ. ಎಲ್ಲರೂ ಹೀರೋ, ಹೀರೋಯಿಸಂಗೆ ಹೆಚ್ಚು ಸ್ಕೋಪ್ ಕೊಡುತ್ತಿರುವಾಗ, ನಡುವೆ ಸದ್ದಿಲ್ಲದೆ ಎದ್ದು ನಿಲ್ಲುತ್ತಾನೆ ನಿರ್ದೇಶಕ. ಪುಟ್ಟಣ್ಣ ಕಣಗಾಲ್ ಅಂಥ ಮಾದರಿ ಸಿನಿಮಾ ಮಾಡುತ್ತಿದ್ದರು. ಹಿಂದಿಯಲ್ಲಿ ಅಮೀರ್ ಖಾನ್ ಅಭಿನಯದ ಲಗಾನ್ ಬಂದಾಗಲೂ ಇದೇ ಮಾತು ಹೆಚ್ಚು ಸೌಂಡ್ ಮಾಡಿತ್ತು. ಅದರ ನಿರ್ದೇಶಕ ಅಶುತೋಷ್ ಗೌರೀಕರ್ ಸಡನ್ಲಿ ಸ್ಟಾರ್ ಆಗಿದ್ದರು. ಒನ್ಸ್ ಅಗೇನ್ ಆಂಡ್ ಆಫ್ಟರ್ ಲಾಂಗ್ ಈಯರ್ಸ್ ಕನ್ನಡದಲ್ಲಿ ನಿರ್ದೇಶಕನ ಸಿನಿಮಾವೊಂದು ಧಗಧಗಿಸುತ್ತಿದೆ. ಡೈರೆಕ್ಟರ್ ಅನ್ನೋದು ಕೇವಲ ನಾಲ್ಕು ಅಕ್ಷರದ ಪದವಲ್ಲ ಎಂದು ತೋರಿಸಿದೆ. ಒಬ್ಬ ನಿರ್ದೇಶಕ ಸರಿಯಾಗಿ ನಿಂತರೆ, ಅದೆಂಥಾ ಹುಚ್ಚೆದ್ದು ಕುಣಿಸುವ ದೃಶ್ಯ ಕಾವ್ಯ ಅರಳಿಸುತ್ತಾನೆ ಅನ್ನೋದಕ್ಕೆ ಇದು ಸ್ಯಾಂಪಲ್. ಹೀಗೊಂದು ಗರ್ವಕ್ಕೆ, ಹೆಮ್ಮೆಗೆ ಮತ್ತು ಅಗತ್ಯಕ್ಕಿಂತ ಹೆಚ್ಚಲ್ಲದ ಅಹಂಕಾರಕ್ಕೆ ಸಾಕ್ಷಿಯಾಗಿದ್ದಾರೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್.
ಏನಿದು ಮೂವತ್ತರ ಆಸುಪಾಸಿನ ಈ ಹುಡುಗನ ತಾಕತ್ತು? ಅದೆಲ್ಲಿ ಇಷ್ಟು ದಿನ ಹೂತಿಟ್ಟಿದ್ದರು? ಎಲ್ಲರೂ ಒಂದೊಂದೇ ಅಸ್ತ್ರವನ್ನು ಬಳಸುತ್ತಿರುವಾಗ ಈ ವ್ಯಕ್ತಿ ಒಂದೇ ಹೊಡೆತಕ್ಕೆ ಹೇಗೆ ಪಾಶು ಪತಾಸ್ತ್ರವನ್ನೇ ಹೆಗಲೇರಿಸಿಕೊಂಡರು? ಎಲ್ಲಿಂದ ಮೊಗೆಮೊಗೆದು ತಂದರು ಚಿನ್ನದ ಗಣಿಯ ಲೋಕವನ್ನು? ಅದೆಷ್ಟು ನಡುರಾತ್ರಿ ನಿದ್ದೆ ಇಲ್ಲದೆ ಸಿನಿಮಾಕ್ಕಾಗಿ ಒದ್ದಾಡಿದರು? ಸಾವಿರಾರು ಜನರನ್ನು ಒಗ್ಗೂಡಿಸಿ ಕೇಕೆ ಹಾಕಿದರು? ಎಲ್ಲವೂ ಪ್ರಶ್ನೆಗಳೇ ಮತ್ತು ಆ ಪ್ರಶ್ನೆಯಲ್ಲೇ ಉತ್ತರವೂ ಇದೆ. ಇದೆಲ್ಲವನ್ನೂ ನಿಭಾಯಿಸುವ, ನಿರ್ವಹಿಸುವ ಮೆದುಳನ್ನು ಆ ದೇವರು ಪ್ರಶಾಂತ್ ತಲೆಯಲ್ಲಿ ತುಂಬಿ ಕಳಿಸಿದ್ದಾನೆ. ಅಫ್‍ಕೋರ್ಸ್ ಕನ್ನಡ ಚಿತ್ರರಂಗಕ್ಕೆ ಧಾರೆ ಎರೆದಿದ್ದಾನೆ.
ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಅಮರ – ಯಾರೂ ಅಳಿಸಲು ಸಾಧ್ಯವಿಲ್ಲ ಡೈರೆಕ್ಟರ್ ಹೆಸರ!: ಪ್ರಶಾಂತ್ ನೀಲ್… ಇದೊಂದು ಹೆಸರು ಇನ್ನು ಮುಂದೆ ಭಾರತೀಯ ಚಿತ್ರರಂಗದ ಇತಿಹಾಸಕ್ಕೆ ಹೊಸ ಭಾಷ್ಯ ಬರೆದಿದೆ. ಸಂಜಯ್ ಲೀಲಾ ಬನ್ಸಾಲಿ, ರಾಮ್ ಗೋಪಾಲ್ ವರ್ಮಾ, ರಾಜ್ ಕುಮಾರ್ ಹಿರಾನಿ, ಪುಟ್ಟಣ್ಣ ಕಣಗಾಲ್, ಅಶುತೋಷ್ ಗೌರೀಕರ್, ತಮಿಳಿನ ಬಾಲಾ ಇಂಥ ದಿ ಗ್ರೇಟ್ ಡೈರೆಕ್ಟರ್ ಪಟ್ಟಿಯಲ್ಲಿ ಮೆರೆಯುತ್ತಿದೆ. ಅದಕ್ಕೆ ಸಿಂಗಲ್ ಅಂಡ್ ಸಿನಿಮ್ಯಾಟಿಕ್ ಕಾರಣ ‘ಕೆಜಿಎಫ್’.
ಕತೆ, ಚಿತ್ರಕತೆ, ಸಂಭಾಷಣೆ, ಹಾಡು, ಕ್ಯಾಮೆರಾ, ಸಂಗೀತ, ಕಲಾ ನಿರ್ದೇಶನ, ಸಾಹಸ, ಅಭಿನಯ, ಪಾತ್ರವರ್ಗ, ಕಾಸ್ಟ್ಯೂಮ್…ಒಂದೊಂದು ವಿಭಾಗ ಒಂದೊಂದು ರಣರಂಗ. ಇದರಲ್ಲಿ ಒಂದೇ ಒಂದು ಎಡವಟ್ಟಾದರೂ ಹೂರಣ ಹದಗೆಡುತ್ತದೆ, ಒಗ್ಗರಣೆ ಸಪ್ಪೆಯಾಗುತ್ತದೆ, ಊಟ ರುಚಿಗೆಡುತ್ತದೆ. ಹಾಗಾಗದಂತೆ ಮೈ ತುಂಬಾ ಕಣ್ಣಾಗಿ ಕೆಲಸ ಮಾಡಿದ್ದಾರೆ ಪ್ರಶಾಂತ್. ಒಂದಗುಳು ಹೆಚ್ಚಿಲ್ಲ ಒಂದಗುಳೂ ಕಮ್ಮಿ ಇಲ್ಲ. ಎಲ್ಲವೂ ಆಗ ತಾನೇ ಸ್ನಾನ ಮಾಡಿಬಂದ ಹುಡುಗಿಯ ಹೊಕ್ಕಳಿಂದ ಜಾರುವ ಬಿಸಿ ನೀರು.. ನಿದ್ದೆಯಿಂದ ಎದ್ದು ಆಕಳಿಸುವ ಮಗುವಿನ ಅಬೋಧ ನಗು… ಅಂಥದ್ದೊಂದು ನಿಯತ್ತು ಇದ್ದಿದ್ದಕ್ಕೆ ಇಂದು ಕೆಜಿಎಫ್ ಜನರಿಂದ ಶಿಳ್ಳೆ ಚಪ್ಪಾಳೆ ಹೊಡೆಸಿಕೊಳ್ಳುತ್ತಿದೆ. ಕನ್ನಡದ ಮಣ್ಣಿನ ಘಮಲನ್ನು ದೇಶದ ತುಂಬಾ ಚೆಲ್ಲುತ್ತಿದೆ.
ಪ್ರಶಾಂತ್ ಪ್ರತಿಭೆಗೆ ಚಿನ್ನದ ಗಣಿ ಲೋಕವೊಂದೇ ಸಾಕು. ವಿರಾಮದ ನಂತರ ಬಿಚ್ಚಿಕೊಳ್ಳುವ ಕರಾಳ ಜಗತ್ತನ್ನು ಅವರು ಕ್ಯಾಮೆರಾದ ಮೂಲಕವೇ ಕವಿತೆಯಂತೆ ಕೆತ್ತಿದ್ದಾರೆ. ಒಂದೊಂದು ಫ್ರೇಮಿಗೂ ಉಸಿರು ಇಟ್ಟಿದ್ದಾರೆ. ಕಪ್ಪು ಕಪ್ಪು ಮಣ್ಣು, ನಿತ್ರಾಣದ ದೇಹಗಳ ಆಕ್ರಂದನ, ಕ್ರೂರಿಗಳ ಅಟ್ಟಹಾಸ, ಎಂಬತ್ತರ ದಶಕದ ವಾಸನೆ. ಎಲ್ಲ ಅಂದರೆ ಎಲ್ಲವೂ ನಿಮ್ಮನ್ನು ಹಿಡಿದು ಹೆಡಮುರಿಗಿ ಕಟ್ಟುತ್ತದೆ. ನಾವೇ ನಿಜಕ್ಕೂ ಆ ಭಯಾನಕ ಪ್ರಪಂಚದಲ್ಲಿ ವಾಸಿಸುತ್ತಿದ್ದೇವೆ ಎನ್ನುವ ಭ್ರಮೆ ಮೂಡಿಸುತ್ತದೆ.
ಬಾಲಿವುಡ್ ಗೆ ಬಾಲಿವುಡ್ಡೇ ಧಡಬಡಿಸಿ ಎದ್ದು ನಿಂತಿದೆ. ಎಲ್ಲಿದ್ದ ಈ ಕೆಂಡ ಉಗುಳುವ ಕಣ್ಣಿನ ಹುಡುಗ ಎನ್ನುತ್ತಾ ಮುಖ ಅರಳಿಸಿದೆ. ಹೀಗೊಂದು ಅದ್ಭುತಕ್ಕೆ ಕಾರಣವಾಗಿದ್ದು ರಾಕಿಂಗ್‍ಸ್ಟಾರ್ ಯಶ್. ಎರಡೂವರೆ ವರ್ಷದಿಂದ ಈ ಹುಡುಗ ಸುರಿಸಿದ ಬೆವರಿನಲ್ಲಿ ಎಷ್ಟೆಷ್ಟು ನೋವು, ಖುಷಿ, ಕಷ್ಟ, ಶ್ರದ್ಧೆ ಇದೆ ಎನ್ನುವುದನ್ನು ಇದೊಂದು ಸಿನಿಮಾ ತೋರಿಸಿದೆ.
ಬೆಚ್ಚಿಬೀಳಿಸುತ್ತದೆ ರಾಕಿಂಗ್ ಸ್ಟಾರ್ ರೋರಿಂಗ್ ಅಭಿನಯ! – ಯಶ್ ಅಬ್ಬರಕ್ಕೆ ಆಣೆಕಟ್ಟು ಕಟ್ಟಲು ಆಗದಯ್ಯ!: `ಇಡೀ ಇಂಡಿಯಾನೇ ನಮ್ ಕನ್ನಡ ಇಂಡಸ್ಟ್ರಿ ಕಡೆ ತಿರುಗಿ ನೋಡ್ಬೇಕು…ಅದು ನನ್ನ ದೊಡ್ಡ ಆಸೆ…’ ಅದ್ಯಾವ ದಿವ್ಯ ಗಳಿಗೆಯಲ್ಲಿ ಯಶ್ ಈ ಮಾತನ್ನು ಹೇಳಿದರೋ ಏನೋ, ದೇವರು ದೂಸರಾ ಕೆಮ್ಮದೇ ಅದಕ್ಕೆ ತಥಾಸ್ತು ಎಂದಿದ್ದಾನೆ. ಅದರ ಪರಿಣಾಮ ಕೆಜಿಎಫ್ ಅಖಾಡದಲ್ಲಿ ಯಶ್ ಧಗಧಗಿಸುತ್ತಿದ್ದಾರೆ. ಒಬ್ಬ ನಟನಿಗೆ ಎಲ್ಲಾ ಸಮಯದಲ್ಲೂ ಇಂಥ ಅವಕಾಶ ಸಿಗುವುದಿಲ್ಲ. ಸಿಕ್ಕರೂ ಕೆಲವರು ಅದನ್ನು ಬಳಸಿಕೊಳ್ಳಲ್ಲ. ಆದರೆ ಪಡುವಾರಹಳ್ಳಿಯ ಈ ಹೈದ ಕೈಗೆ ಬಂದ ತುತ್ತಿನ ಹಣೆಗೆ ಮುತ್ತಿಟ್ಟು ನಾಲಿಗೆ ಮೇಲೆ ಇಟ್ಟುಕೊಂಡಿದ್ದಾರೆ. ಆ ತುತ್ತಿನ ಪ್ರತಿ ಅಗುಳನ್ನು ಅಗೆದು ಜಗಿದಾಗಲೆಲ್ಲಾ ಹೊಸ ಹೊಸ ಯಶ್ ಜನ್ಮ ತಾಳುತ್ತಾರೆ. ಅದು ಅಸಲಿ ಕಲಾವಿದನ ಲಕ್ಷಣ.
ಕಣ್ಣು, ಕೈ, ಕಾಲು, ಬಾಯಿ, ದೇಹ, ಮಾತು. ಎಲ್ಲಾ ನಟರಿಗೂ ಇರುತ್ತವೆ. ಅಫ್‍ಕೋರ್ಸ್ ಸಾಮಾನ್ಯ ಮನುಷ್ಯರಿಗೂ. ಆದರೆ ಅದನ್ನು ಒಬ್ಬ ಕಲಾವಿದ ಯಾವ ರೀತಿ ತಿದ್ದಿ ತೀಡುತ್ತಾನೆ, ದೇಹವನ್ನೇ ಆಯುಧ ಮಾಡಿಕೊಳ್ಳುತ್ತಾನೆ, ಅದರಿಂದಲೇ ಹೇಗೆ ಜನರನ್ನು ಆವರಿಸಿಕೊಳ್ಳುತ್ತಾನೆ, ಯಾವ ರೀತಿ ತನ್ನನ್ನು ತಾನು ಬಿಚ್ಚಿಡುತ್ತಾನೆ, ಬೆರಗುಗೊಳಿಸುತ್ತಾನೆ. ಫೈನಲೀ ಬೆಚ್ಚಿಬೀಳಿಸುತ್ತಾನೆ? ಆ ನಿಗರ್ವ ಕಾಯಕವನ್ನು ಯಶ್ ಈ ಸಿನಿಮಾದಲ್ಲಿ ಮಾಡಿ ನಕ್ಕಿದ್ದಾರೆ. ನಿಮಗೊಂದು ಮಾತು ನೆನಪಿರಲಿ, ಒಬ್ಬ ಅಪ್ಪಟ ಕಲಾವಿದ ಬೇರೇನೂ ಮಾಡದಿದ್ದರೂ ನಡೆಯುತ್ತದೆ. ಆದರೆ ಬೆಚ್ಚಿ ಬೀಳಿಸಿದಾಗ ಮಾತ್ರ ಇಡೀ ಲೋಕ ಧಡಕ್ಕನೇ ತಿರುಗಿ ನೋಡುತ್ತದೆ. ಯಶ್ ಆ ಹಾದಿಯಲ್ಲಿದ್ದಾರೆ.
ಭೂಗತ ಲೋಕದ ದೊರೆಯಾಗಿ ರಾಕಿಂಗ್ ಸ್ಟಾರ್ ಮೆರವಣಿಗೆ ಹೊರಟಿದ್ದಾರೆ. ಒರಟು ಒರಟು, ಹಸಿ ಹಸಿ, ಡೋಂಟ್ ಕೇರ್ ನೇಚರ್, ಐ ಆಮ್ ರಾಕಿ ಭಾಯ್ ಆಟಿಟ್ಯೂಡ್. ಇದರ ನಡುವೆ ಲೈಟಾದ ರೊಮ್ಯಾಂಟಿಕ್ ಎಳೆಯ ಚುಮುಚುಮು. ಆರಂಭದಿಂದ ಹಿಡಿದು ಕೊನೇ ದೃಶ್ಯದವರೆಗೆ ಯಶ್ ಎಲ್ಲೂ ಕಣ್ಣನ್ನು ಆಚೀಚೆ ಮಾಡದಂತೆ ಕುರ್ಚಿ ತುದಿಗೆ ಕೂಡಿಸುತ್ತಾರೆ. ಬಾಡಿ ಲ್ಯಾಂಗ್ವೇಜ್ ಅನ್ನೋದನ್ನು ಹೀಗೇ ಯೂಸ್ ಮಾಡಿಕೊಳ್ಳಬೇಕೆಂದು ಪಾಠ ಮಾಡಿದ್ದಾರೆ. ಒಂದಳತಿ ರಾಕಿ ಭಾಯ್ ಪಾತ್ರವನ್ನು ಇಂಚಿಂಚು ಬದುಕಿದ್ದಾರೆ. ಅದೇ ಕಾರಣಕ್ಕೆ ನಿಮಗೆ ಹೊಸ ಲೋಕವನ್ನು ತೋರಿಸಿದ್ದಾರೆ.
ಕೇವಲ ತಮ್ಮ ಅಭಿಮಾನಿಗಳಿಗೆ ಮಾತ್ರ ಯಶ್ ಖುಷಿ ಕೊಡುವುದಿಲ್ಲ. ಎಲ್ಲ ವರ್ಗದ ಮನಸುಗಳನ್ನು ಕದ್ದು ಎದ್ದು ಹೋಗುತ್ತಾರೆ. ಅದರಲ್ಲೂ ಕ್ಲ್ಯೆಮ್ಯಾಕ್ಸ್‍ನಲ್ಲಿ ಕೆಂಡ ಕೆಂಡ ಉಗುಳುವ ಕಣ್ಣು, ಮುಖ ಮುಚ್ಚುವ ಜೊಂಪೆ ಜೊಂಪೆ ಬೆವರಿನ ಕೂದಲು, ಎದುರಿದ್ದವರನ್ನು ನುಂಗಿ ಹಾಕುವಂಥ ಲುಕ್ಕು. ಒಂದೊಂದು ಮುಖಭಾವದಲ್ಲಿ ಒಂದೊಂದು ಕಿಕ್ ಕೊಡುತ್ತಾ, ಇನ್ನೆಷ್ಟು ಬೇಕು ಎನ್ನುತ್ತಾ, ಸೋಲುತ್ತಾ, ದಣಿಯುತ್ತಾ ಗೆದ್ದು ಮೀಸೆ ತಿರುವುತ್ತಾರೆ. ಅಲ್ಲಿಗೆ ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಇಟ್ಟುಕೊಂಡಿದ್ದ ದಿಗ್ಭ್ರಮೆ ಹುಟ್ಟಿಸುವ ಕಲೆಯ ಹೊಕ್ಕಳ ಹುರಿಯನ್ನು ಕತ್ತರಿಸಿದ್ದಾರೆ. ಆ ಮಗು ಎಂಬ ಯಶ್ ನಿಮ್ಮ ಮಡಿಲಲ್ಲಿ ಕೇಕೆ ಹಾಕುತ್ತಿದೆ.
ಇನ್ನು ನಾಯಕಿ ಶ್ರೀನಿಧಿ ಮೊದಲ ಚಿತ್ರದಲ್ಲೇ `ನಾನು ಹೀಗೆ ಬಂದು ಹಾಗೆ ಹೋಗುವ ಹುಡುಗಿಯಲ್ಲ’ ಎಂದು ಪ್ರೂವ್ ಮಾಡಿದ್ದಾರೆ. ಉಳಿದಂತೆ ಶ್ರೀನಿವಾಸಮೂರ್ತಿ, ನೀನಾಸಂ ಅಶ್ವತ್ಥ, ವಸಿಷ್ಟ, ಅಚ್ಯುತ್ ಕುಮಾರ್, ಹೊಸ ಪ್ರತಿಭೆ ರಾಮ್, ಜಗದೀಶ್ ಮಂಗಳೂರ್ ಸೇರಿದಂತೆ ಎಲ್ಲರೂ ನಾನಾ ನೀನಾ ಎನ್ನುವಂತೆ ಅಭಿನಯಿಸಿದ್ದಾರೆ. ಬಾಲಕ ಯಶ್ ಪಾತ್ರದಲ್ಲಿ ಅನ್ಮೋಲ್ ಗೆದ್ದು ಬೀಗುತ್ತಾನೆ. ಅಮ್ಮನಾಗಿ ಅರ್ಚನಾ ಜೋಯಿಸ್ ಕಣ್ಣೀರು ಹಾಕಿಸುತ್ತಾರೆ. ಅಂದ ಹಾಗೆ ಇದರಲ್ಲಿ ಬಹುತೇಕ ಹೊಸಬರೇ ಹಬ್ಬ ಮಾಡಿದ್ದಾರೆ. ಅದರೆ ಯಾರೂ ಹೊಸಬರೆನಿಸಲ್ಲ. ಅದಕ್ಕೆ ನಿರ್ದೇಶಕರು ಇವರಿಂದ ತೆಗೆಸಿರುವ ಕೆಲಸ ಸಾಕ್ಷಿ. ಕೆಜಿಎಫ್ ತಾರಾಗಣದ ವೈಭವ ಹೀಗಿದೆ ನೋಡಿ.
ಒಂದು ಸಿನಿಮಾಕ್ಕೆ ತಂತ್ರಜ್ಞರು ಎಷ್ಟು ಮುಖ್ಯ ಅನ್ನೋದು ತುಂಬಾ ಜನಕ್ಕೆ ಗೊತ್ತಿಲ್ಲ. ಅಸಲಿಗೆ ಇವರನ್ನು ಉದ್ಯಮ ಕೂಡ ಅಷ್ಟೊಂದು ಗಂಭೀರವಾಗಿ ಪರಿಗಣಿಸಲ್ಲ. ಇದರಲ್ಲಿ ಕೆಲವರು ಅಪವಾದ ಇರಬಹುದು. ಬಹುತೇಕ ನಿರ್ಲಕ್ಷ್ಯಕ್ಕೇ ಇವರು ಗುರಿಯಾಗುತ್ತಾರೆ. ಆದರೆ ಕೆಜಿಎಫ್ ರಣರಂಗದಲ್ಲಿ ಯುದ್ಧವನ್ನು ಮಾಡಿ ಗೆದ್ದವರು ಇದೇ ತಂತ್ರಜ್ಞರು. ಪ್ರತಿಯೊಂದು ವಿಭಾಗದಲ್ಲಿ ಇವರು ಮಿಂಚಿದ್ದಾರೆ. ಅಷ್ಟೇ ಅಲ್ಲ, ಒಂದು ಚಿತ್ರಕ್ಕೆ ಇವರು ಹೇಗೆ ಎದೆ ಕೊಟ್ಟು ನಿಲ್ಲಬಲ್ಲರು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.
ಸಂಗೀತ-ಸಂಭಾಷಣೆ-ಛಾಯಾಗ್ರಹಣ ಹಬ್ಬವೋ ಹಬ್ಬ! – ತಂತ್ರಜ್ಞರ ಅಮೋಘ ಕಾಯಕಕ್ಕೆ ಕನ್ನಡಿಗರು ಅಬ್ಬಬ್ಬಾ!: ಛಾಯಾಗ್ರಾಹಕ ಇಡೀ ಚಿತ್ರಕ್ಕೆ ದೊಡ್ಡ ಕಣ್ಣು. ನಟ ನಟಿಯರು ಯಾರನ್ನಾದರೂ ಎದುರು ಹಾಕಿಕೊಂಡಾರು. ಆದರೆ ಕ್ಯಾಮೆರಾಮೆನ್‍ಗಳನ್ನು ಮಾತ್ರ ಮುದ್ದುಮುದ್ದು ಮಾಡುತ್ತಿರುತ್ತಾರೆ. ಯಾಕೆಂದರೆ ಆತ ಯಾವಾಗ ಹೇಗೆ ಬೇಕಾದರೂ ಇವರನ್ನು ತೆರೆ ಮೇಲೆ ತೋರಿಸಬಲ್ಲ. ಅದರರ್ಥ ಇದೇ ಕ್ಯಾಮೆರಾಮೆನ್ ಕೆಲಸ ಎಂದು ತಿಳಿಯಬೇಡಿ. ಅದನ್ನೆಲ್ಲ ಮೀರಿದ ಭುವನ್ ಗೌಡರಂಥ ಸಿನಿಮಾ ಪ್ರೀತಿಯ ಛಾಯಾಗ್ರಾಹಕರೂ ಇರುತ್ತಾರೆ. ಅದು ಏನು ಅನ್ನೋದನ್ನು ಭುವನ್ ಇದೊಂದು ಚಿತ್ರದಲ್ಲಿ ಕೆತ್ತಿ ಕೆತ್ತಿ ತೋರಿಸಿದ್ದಾರೆ.
ಇಡೀ ಸಿನಿಮಾದಲ್ಲಿ ನಿಮಗೆ ಎಲ್ಲೂ ಲೈಟಿಂಗ್ ಕಾಣಿಸುವುದಿಲ್ಲ. ಎಲ್ಲವೂ ನ್ಯಾಚುರಲ್ ಅಥವಾ ಸಹಜ ಬೆಳಕಿನಲ್ಲಿ ಚಿತ್ರಿಸಿದ್ದಾರೆ. ಅದು ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ಮಸುಕು ಮಸುಕು ನೀಲಿ, ಮಬ್ಬು ಮಬ್ಬು ಕತ್ತಲು, ಹಳದಿ ಹಳದಿ ಬೆಂಕಿ, ಕಪ್ಪು ಕಪ್ಪು ರಾತ್ರಿ… ಯಾವುದನ್ನು ಹೇಳುವುದು ಯಾವುದನ್ನು ಬಿಡುವುದು. ಪ್ರತಿಯೊಂದು ಫ್ರೇಮ್‍ನಲ್ಲಿ ಗೌಡರ ಒಳಗಣ್ಣು ಎಚ್ಚರವಾಗಿದೆ. ನಿಚ್ಚಳವಾಗಿದೆ. ನೋಡುಗರನ್ನು ಅಚ್ಚರಿ ಮೇಲೆ ಅಚ್ಚರಿ ಹುಟ್ಟಿಸುತ್ತದೆ. ಕೆಲವೊಮ್ಮೆ ಹಿಂದೆಂದೂ ತೇಲದ ಲೋಕದಲ್ಲಿ ಮನೆ ಮಾಡಿಸುತ್ತದೆ. ಅದು ಭುವನ್ ಗೌಡರ ಅಸಲಿ ಹಕೀಕತ್ತು. ಉಳಿದಿದ್ದು ಅವರ ಸಿನಿಮಾ ನಿಗಿ ನಿಗಿ ನಿಯತ್ತು.
ಚಿನ್ನದ ಗಣಿ… ಇಂದಿನ ಜನಾಂಗಕ್ಕೆ ಅಂಥದ್ದೊಂದು ಜಗತ್ತು ಹೇಗಿದೆ ಎಂದೇ ಗೊತ್ತಿಲ್ಲ. ಗಣಿ ಜೀವಂತ ಇದ್ದಾಗಲೂ ಅದನ್ನು ಬಹುತೇಕರು ಇಷ್ಟೊಂದು ಹತ್ತಿರದಿಂದ ನೋಡಿರಲಿಕ್ಕಿಲ್ಲ. ಸೈನೈಡ್ ಬೆಟ್ಟ, ಕಡುಗಪ್ಪು ಗುಡ್ಡ, ಅದರ ಮೇಲೆ ಜೋಪಡಿಗಳು, ಗಣಿಗಾರಿಕೆಯ ಗುಂಗು ಹಿಡಿಸುವ ಧೂಳು, ವಾಟರ್ ಟ್ಯಾಂಕು, ಅದಿರನ್ನು ಸಾಗಿಸುವ ಆ ಕಾಲದ ವಾಹನಗಳು, ಆಗ ಬಳಸುತ್ತಿದ್ದ ಬೃಹತ್ ಸುತ್ತಿಗೆ, ಸಲಾಕೆ, ಹಾರೆ, ಕಬ್ಬಿಣದ ಬುಟ್ಟಿ, ಗುದ್ದಲಿ, ತಗಡಿನ ಶೀಟು… ಪ್ರತಿಯೊಂದನ್ನು ಎಲ್ಲೆಲ್ಲಿಂದಲೋ ತಂದು ನಿಮ್ಮ ಅಂಗೈಯಲ್ಲಿ ನಯಾ ದುನಿಯಾ ತೋರಿಸುತ್ತಾರೆ. ಆ ದಿಕ್ಕೆಡಿಸುವ ಲೋಕವನ್ನು ಜತನದಿಂದ ಕಟ್ಟಿದ್ದು ಕಲಾ ನಿರ್ದೇಶಕ ಶಿವು.
ಸತತ 9 ತಿಂಗಳು ನಿತ್ಯ ಎರಡು ನೂರಕ್ಕೂ ಹೆಚ್ಚು ಜನರು ಕೆಜಿಎಫ್ ಸೆಟ್ ನಿರ್ಮಿಸಲು ಬೆವರು ಸುರಿಸಿದ್ದಾರೆ. ಮಳೆ, ಗಾಳಿಗೆ ಅದು ಮಗುಚಿ ಬಿದ್ದಾಗಲೆಲ್ಲಾ ಮತ್ತೆ ಮತ್ತೆ ಅಷ್ಟೇ ಭಕ್ತಿಯಿಂದ ನಿರ್ಮಿಸಿದ್ದಾರೆ. ಕಲಾ ನಿರ್ದೇಶಕ ಜನ ಸಾಮಾನ್ಯರ ಕಣ್ಣಲ್ಲಿ ನಾಯಕನಂತೆ ಮೆರೆಯುವುದು ಹೀಗೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಆರ್ಟ್ ಡೈರೆಕ್ಷನ್ ವಿಭಾಗಕ್ಕೆ ಶಿವು ಅಂಡ್ ಟೀಮ್ ಹೊಸ ಭರವಸೆ ಕೊಟ್ಟಿದೆ. ಅದೇ ರೀತಿ ಎಪ್ಪತ್ತು, ಎಂಬತ್ತರ ದಶಕದ ಕಾಸ್ಟ್ಯೂಮ್ ಗಳಿಗೆ ಜೀವ ತುಂಬಿದ್ದು ಡಿಸೈನರ್ ಯೋಗಿ. ನಾಯಕ ನಾಯಕಿಯಿಂದ ಹಿಡಿದು ವಿಲನ್, ಸಹ ಕಲಾವಿದರೆಲ್ಲರಿಗೂ ಅಂದಿನ ಕಾಲದ ಉಡುಪನ್ನು ಜೋಡಿಸಿದ್ದಾರೆ. ಅದಕ್ಕೆ ಅಧಿಕೃತತೆ ನೀಡಿದ್ದಾರೆ.
ಸಂಗೀತ ನಿರ್ದೇಶಕ ರವಿ ಬಸ್ರೂರ್ ನಿಮ್ಮನ್ನು ಥೇಟರ್ ನಿಂದ ಹೊರಗೆ ಬಂದ ಮೇಲೂ ಬೆನ್ನು ಹತ್ತುತ್ತಾರೆ. ಅದೆಲ್ಲಿಂದ ಹುಡುಕಾಡಿ ತಂದರು? ಅದ್ಯಾವ ಗಂಧರ್ವ ಲೋಕದಿಂದ ಎತ್ತಿಕೊಂಡು ಬಂದರು? ಒಂದೊಂದು ಮಾತಿಗೂ, ಒಂದೊಂದು ದೃಶ್ಯಕ್ಕೂ, ಒಂದೊಂದು ಮಜಲಿಗೂ, ಒಬ್ಬೊಬ್ಬ ಕಲಾವಿದನಿಗೂ ಅದು ಹೇಗೆ ಅಷ್ಟೊಂದು ಭಿನ್ನ ವಿಭಿನ್ನ ರಾಗಕ್ಕೆ ಕೈಯಾದರು? ಈ ಎಲ್ಲ ಅನುಮಾನಕ್ಕೆ ಸನ್ಮಾನದ ಮೂಲಕ ಎದುರು ನಿಲ್ಲುತ್ತಾರೆ ರವಿ ಬಸ್ರೂರ್. ಹಾಡಿಗಿಂತ ಹಿನ್ನೆಲೆ ಸಂಗೀತದಲ್ಲಿ ಈ ದೈತ್ಯ ಕೊಟ್ಟ ನಾದ ಇದೆಯಲ್ಲ, ಅದು ಅಜರಾಮರ.
`ಕೆಜಿಎಫ್’ಗೆ ಚಿನ್ನದ ಚೌಕಟ್ಟು ಹಾಕಿದ್ಯಾರು! – ಅವರ ಹೆಸರೇ ವಿಜಯ್ ಕಿರಗಂದೂರು!: ಕೆಜಿಎಫ್ ನ ಮಹಾ ಪ್ರಾಣ ಇನ್ನೊಂದಿದೆ. ಅದೇ ಸಂಭಾಷಣೆ. ಕೆಲವು ಮಾತುಗಳನ್ನು ಯಶ್ ಬಾಯಿಂದ ಕೇಳಿದಾಗಲೇ ತೂಕ ಹೆಚ್ಚಾಗುತ್ತದೆ. ಬಿಲ್ಡಪ್ ಅಂಡ್ ಸೆಂಟಿಮೆಂಟ್ ಡೈಲಾಗ್ ಗಳು ಪ್ರೇಕ್ಷಕರಲ್ಲಿ ಕಿಚ್ಚು ಹೊತ್ತಿಸುತ್ತವೆ. ಅದರ ಕೆಲವು ಸ್ಯಾಂಪಲ್ ಇಲ್ಲಿವೆ ನೋಡಿ.
1. ಗಾಯಗೊಂಡ ಸಿಂಹದ ಘರ್ಜನೆಗಿಂತ ಅದರ ಉಸಿರೇ ಭಯಾನಕ.!!
2. ಯಾರು ಮೊದಲು ಹೊಡೆದರು ಅನ್ನೋದು ಮುಖ್ಯ ಆಗಲ್ಲ, ಯಾರು ಮೊದಲು ಕೆಳಗೆ ಬಿದ್ರು ಅನ್ನೋದೇ ಮುಖ್ಯ
3. ಮುಂಬೈ ನಿಮ್ಮಪ್ಪಂದೆ ಕಣೋ… ಆದ್ರೆ ನಿಮ್ಮಪ್ಪ ನಾನು…
4. ಎದೆಯಲ್ಲಿ ಕಲ್ ಇಟ್ಕೊಂಡೋರ್ಗೇ ಯಾವ್ ರಕ್ತಾನೂ ಅಂಟೋದಿಲ್ಲ…
5. ಕ್ಯಾ ಚಾಹಿಯೆರೇ ತೇರೇಕೋ… ದುನಿಯಾ.!!
6. ಇವನು ಹೀರೋ ಅಲ್ಲಾ.. ವಿಲನ್..!!
ಕೆಜಿಎಫ್ ನ ಇನ್ನೊಂದು ಜೀವಾಳ ಸ್ಟಂಟ್ಸ್. ಯಶ್ ಅದಕ್ಕೆ ಇಡಿ ಇಡಿಯಾಗಿ ಜೀವ ತುಂಬಿದ್ದಾರೆ. ಸಿನಿಮಾದ ಉದ್ದಕ್ಕೂ ವೆರೈಟಿ ವೆರೈಟಿ ಫೈಟಿಂಗ್ ದೃಶ್ಯಗಳು ಜೋಶ್ ತುಂಬುತ್ತವೆ. ಹೀಗೆ ಪ್ರಶಾಂತ್ ನೀಲ್ ಪ್ರತಿಯೊಂದು ವಿಭಾಗದಿಂದಲೂ ಕೆಲಸ ತೆಗೆದಿದ್ದಾರೆ. ಕೆಜಿಎಫ್ ದೇಶ ವಿದೇಶದಲ್ಲಿ ಮೆರೆಯುವಂತೆ ಮಾಡಿದ್ದಾರೆ. ಆದರೆ ಇದಕ್ಕೆಲ್ಲ ಒಂದು ಚಿನ್ನದ ಚೌಕಟ್ಟನ್ನು ಹಾಕಿದ ಏಕೈಕ ವ್ಯಕ್ತಿ ಅಂದರೆ ಅದು ನಿರ್ಮಾಪಕ ವಿಜಯ್ ಕಿರಗಂದೂರ್. ಒಂದೊಂದು ಫ್ರೇಮು, ಒಂದೊಂದು ಶಾಟ್, ಒಂದೊಂದು ಸೆಟ್ಟಿಗೆ ಅದೆಷ್ಟು ಲಕ್ಷ ಲಕ್ಷ, ಕೋಟಿ ಕೋಟಿಗಳನ್ನು ಸುರಿದಿದ್ದಾರೋ ಆ ದೇವರಿಗೇ ಗೊತ್ತು. ಬಹುಶಃ ಆ ದೇವರಿಗೆ ಮಾತ್ರ ಸತ್ಯ ಗೊತ್ತಿದ್ದಿದ್ದಕ್ಕೇ ಇಂದು ಕೆಜಿಎಫ್ ಚಿತ್ರವನ್ನು ಜಗತ್ತಿನಾದ್ಯಂತ ಜಾತ್ರೆ ಮಾಡಿಸುತ್ತಿದ್ದಾನೆ ಆ ದೇವ. ಕನ್ನಡ ಚಿತ್ರರಂಗಕ್ಕೆ ಒಬ್ಬ ವಿಜಯ್ ಕಿರಗಂದೂರ್ ಇದ್ದರೆ, ನೂರು ಮುತ್ತಿನಂಥ ಚಿತ್ರಗಳು ತೇರನ್ನೇರಿ ಹೊರಡುತ್ತವೆ. ಹ್ಯಾಟ್ಸಾಫ್ ಟು ಯು ಪೀಪಲ್… ಚಿಯರ್ಸ್…!
ಕೆಜಿಎಫ್ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯವನ್ನೂ ಕಮೆಂಟ್ ಮಾಡಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv