ಧನಂಜಯ ನಿರ್ಮಾಣ ಮಾಡಿರುವ ‘ವಿದ್ಯಾಪತಿ’ ಚಿತ್ರ ಇಂದು (ಏ.10) ಬಿಡುಗಡೆಯಾಗಿದೆ. ಸಾಕಷ್ಟು ಪಾತ್ರಗಳಲ್ಲಿ ಅಭಿನಯಿಸುತ್ತಾ, ಇತ್ತೀಚಿನ ದಿನಗಳಲ್ಲಿ ನಾಯಕ ನಟನಾಗಿ ಚಾಲ್ತಿಯಲ್ಲಿರುವ ನಾಗಭೂಷಣ್ (Nagabhushan) ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ನಾಗಭೂಷಣ್ ಈ ಸಿನಿಮಾ ನಾಯಕ ಎಂಬ ಸುದ್ದಿ ಹೊರ ಬಿದ್ದಾಕ್ಷಣವೇ ಬಹುತೇಕರ ಕಲ್ಪನೆ ಹಾಸ್ಯದ ಚೌಕಟ್ಟಿನಲ್ಲಿಯೇ ಗಿರಕಿ ಹೊಡೆದಿತ್ತು. ಆದರೆ ಟ್ರೈಲರ್ ಬಿಡುಗಡೆಗೊಳ್ಳುತ್ತಲೇ ಒಂದಿಡೀ ಚಿತ್ರಣವೇ ಬದಲಾಗಿ ಹೋಗಿತ್ತು. ಯಾಕೆಂದರೆ, ಅಲ್ಲಿ ಸುಳಿದಿದ್ದು ಭಿನ್ನ ಕಥನ, ಅದಕ್ಕೆ ತಕ್ಕುದಾದ ಪಾತ್ರಗಳ ಸುಳಿವು. ಹಾಸ್ಯವೆಂಬುದು ಈ ಸಿನಿಮಾದ ಕಥೆಯ ಆತ್ಮವೆಂಬುದು ನಿಜ. ಆದರೆ, ಅದರಾಚೆಗೂ ಹಬ್ಬಿಕೊಂಡಿರುವ ಬೆರಗಿನ ದೃಶ್ಯಗಳನ್ನು ಕಂಡು ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.
ಇಶಾಂ ಹಾಗೂ ಹಸೀಮ್ ಸಿದ್ಧಪಡಿಸಿದ್ದ ಕಥೆ ಕೇಳಿಯೇ ಡಾಲಿ ಧನಂಜಯ ಈ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದರು. ತನ್ನ ಗೆಳೆಯ ನಾಗಭೂಷಣ್ ನಾಯಕನಾಗಿ ನಟಿಸುತ್ತಿರೋದರಿಂದ ನಿರ್ಮಾಣದಾಚೆಗಿನ ಕಾಳಜಿಯೂ ಡಾಲಿಗಿತ್ತು. ಕಡೆಗೂ ನಿರ್ದೇಶಕರು ನಿರೀಕ್ಷೆಗೂ ಮೀರಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದರ ಬಗೆಗಿನ ಹೆಮ್ಮೆಯ ಭಾವ ಧನಂಜಯ ಮಾತುಗಳಲ್ಲಿ ಧ್ವನಿಸುತ್ತಿತ್ತು. ಅಂಥಾದ್ದೊಂದು ಮೆಚ್ಚುಗೆಯೀಗ ಸಿನಿಮಾ ನೋಡಿದವರೆಲ್ಲರಲ್ಲೂ ಮೂಡಿಕೊಂಡಿದೆ. ಅದುವೇ ‘ವಿದ್ಯಾಪತಿ’ಯ ಯಶಸ್ಸಿನ ಮುನ್ಸೂಚನೆಯಂತೆಯೂ ಕಾಣಿಸುತ್ತಿದೆ. ಇದನ್ನೂ ಓದಿ:ಹೆಂಡತಿ ಕಾಸಲ್ಲಿ ಶೋಕಿ ಮಾಡ್ತಾರಾ ನಟ ನಾಗಭೂಷಣ್?
ಈ ಸಿನಿಮಾದಲ್ಲಿ ಹಲವಾರು ಆಕರ್ಷಣೆಗಳಿದ್ದಾವೆ. ಅದರಲ್ಲಿ ಪ್ರಧಾನವಾಗಿ ಹಾಸ್ಯದೊಂದಿಗೆ ಮಾಸ್ ಸನ್ನಿವೇಶಗಳೂ ಕೂಡ ಸ್ಥಾನ ಪಡೆದುಕೊಳ್ಳುತ್ತವೆ. ಅದರಲ್ಲಿಯೂ ವಿಶೇಷವಾಗಿ ಕೆಜಿಎಫ್ ಚಿತ್ರದ ಗರುಡ ಪಾತ್ರಧಾರಿಯಾಗಿ ಪ್ರಸಿದ್ಧಿ ಪಡೆದುಕೊಂಡಿರುವ ಗರುಡ ರಾಮ್ (Garuda Ram) ಈ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಆ ಪಾತ್ರದ ಮೂಲಕವೇ ವಿದ್ಯಾಪತಿಯ ಕಥನ ಮತ್ತೊಂದು ಆಯಾಮದತ್ತ ಹೊರಳಿಕೊಳ್ಳುತ್ತದೆ. ಅದನ್ನು ಪ್ರೇಕ್ಷಕರೆಲ್ಲ ಸಂಭ್ರಮಿಸಿದ್ದಾರೆ. ಈ ಪಾತ್ರದ ಬಗ್ಗೆ, ಅದರ ಇರುವಿಕೆಯ ದೃಶ್ಯಾವಳಿಗಳನ್ನು ಸಿನಿಮಾ ಮಂದಿರಗಳಲ್ಲಿಯೇ ಹೋಗಿ ನೋಡಿದರೆ ನೈಜ ಅನುಭೂತಿ ದಕ್ಕಲು ಸಾಧ್ಯ. ಇದನ್ನೂ ಓದಿ: ಹಿಟ್ಲರ್ ಸಖಿ ಮಲೈಖಾ ಈಗ ಸೂಪರ್ ಸ್ಟಾರ್ ವಿದ್ಯಾ!
View this post on Instagram
ಇಶಾಂ ಹಾಗೂ ಹಸೀಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಂಕಲನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಮತ್ತು ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗಭೂಷಣ್, ಮಲೈಕಾ ವಸುಪಾಲ್ (Malaika Vasupal), ರಂಗಾಯಣ ರಘು, ಕಾರ್ತಿಕ್ ರಾವ್ ತಾರಾಗಣವಿದೆ. ಸಿನಿಮಾ ಬಗ್ಗೆ ಓರ್ವ ನಟನಾಗಿ ಅತೀವ ಪ್ರೀತಿ ಹೊಂದಿರುವ ಡಾಲಿ ಧನಂಜಯ, ಹೊಸಾ ಪ್ರತಿಭೆಗಳು ಮತ್ತು ತನ್ನ ವಲಯದವರನ್ನು ಬೆಳೆಸುವ ಗುಣ ಹೊಂದಿದ್ದಾರೆ. ಹಾಗಾಗಿ ಅವರು ‘ವಿದ್ಯಾಪತಿ’ (Vidyapati) ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಮೊದಲ ದಿನವೇ ಪ್ರೇಕ್ಷಕರ ಕಡೆಯಿಂದ ಸಿಗುತ್ತಿರುವ ಭರಪೂರ ಮೆಚ್ಚುಗೆ ಕಂಡು ಚಿತ್ರತಂಡ ಖುಷಿಗೊಂಡಿದೆ. ಬೇಸಿಗೆ ರಜೆಯ ಮಜಕ್ಕೆ ಮತ್ತಷ್ಟು ಮೆರುಗು ತುಂಬಬಲ್ಲ ಈ ಸಿನಿಮಾ ಕುಟುಂಬ ಸಮೇತರಾಗಿ ನೋಡಿಸಿಕೊಳ್ಳುವ ಗುಣಗಳೊಂದಿಗೆ ಗಮನ ಸೆಳೆಯುತ್ತಿದೆ.