ಸಿನಿಮಾವೊಂದು ದೊಡ್ಡ ಮಟ್ಟದಲ್ಲಿ ಹಿಟ್ ಆದರೆ ಆ ಮೂಲಕ ಇಡೀ ಚಿತ್ರತಂಡದ ಬದುಕೇ ಮಹತ್ತರ ತಿರುವು ಪಡೆದುಕೊಳ್ಳುತ್ತದೆ. ಹಾಗಿದ್ದ ಮೇಲೆ ದೇಶಾದ್ಯಂತ ಸಂಚಲನ ಮೂಡಿಸಿದ್ದ ಕೆಜಿಎಫ್‍ಗಾಗಿ ದುಡಿದವರ ಬದುಕು ಬಂಗಾರವಾಗದಿರುತ್ತಾ? ಕೆಜಿಎಫ್ ಚಿತ್ರಕ್ಕಾಗಿ ವರ್ಷಾಂತರಗಳ ಕಾಲ ದುಡಿದ ತಂತ್ರಜ್ಞರು, ನಿರ್ದೇಶನ ವಿಭಾಗದವರು, ನಟ ನಟಿಯರು ಸೇರಿದಂತೆ ಎಲ್ಲರೂ ಅಭೂತಪೂರ್ವ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಈ ಚಿತ್ರಕ್ಕೆ ಪಂಚಿಂಗ್ ಡೈಲಾಗ್‍ಗಳನ್ನು ಪೋಣಿಸುತ್ತಲೇ ಹಲವಾರು ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ದುಡಿದಿದ್ದ ಚಂದ್ರಮೌಳಿ ಇದೀಗ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
Advertisement
ಹಲವಾರು ವರ್ಷಗಳ ಕಾಲ ವಿವಿಧ ಚಿತ್ರಗಳ ನಿರ್ದೇಶನ ವಿಭಾಗದಲ್ಲಿ ದುಡಿದಿದ್ದವರು ಚಂದ್ರಮೌಳಿ. ಆದರೆ ಕೆಜಿಎಫ್ ಮೂಲಕ ಅವರು ಒಂದಷ್ಟು ಹೆಸರು ಮಾಡಿಕೊಂಡಿದ್ದರು. ಇದೀಗ ಚಂದ್ರಮೌಳಿ ಚಿತ್ರವೊಂದನ್ನು ನಿರ್ದೇಶನ ಮಾಡಲು ತಯಾರಾಗಿದ್ದಾರೆ. ಹೀಗೆಂದಾಕ್ಷಣ ಹೀರೋ ಯಾರೆಂಬ ಕುತೂಹಲ ಹುಟ್ಟುತ್ತೆ. ಚಂದ್ರಮೌಳಿ ಹೊಸ ಹುಡುಗನನ್ನು ಹೀರೋ ಆಗಿ ಲಾಂಚ್ ಮಾಡುವ ಮೂಲಕವೇ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ.
Advertisement
Advertisement
ಹೊಸ ಹುಡುಗ ರಾಮ್ ಎಂಬಾತ ಈ ಸಿನಿಮಾ ಮೂಲಕವೇ ನಾಯಕನಾಗಿ ಲಾಂಚ್ ಆಗುತ್ತಿದ್ದಾರೆ. ಪರಭಾಷಾ ಹುಡುಗಿ ನಾಯಕಿಯಾಗಿ ಬರಲಿರೋದು ಪಕ್ಕಾ ಆಗಿದೆ. ಸಾಯಿಕುಮಾರ್ ಸೇರಿದಂತೆ ಅನೇಕ ನಟರು ಈ ಸಿನಿಮಾ ಭಾಗವಾಗಲಿದ್ದಾರೆ. ಕಾಮಿಡಿ ಕಲಾವಿದರ ದಂಡೇ ಇರಲಿದೆ. ತಾಂತ್ರಿಕ ವರ್ಗವೂ ಕೂಡಾ ಈ ಸಿನಿಮಾವನ್ನು ಶ್ರೀಮಂತಗೊಳಿಸಲಿದೆಯಂತೆ. ತೆಲುಗಿನ ಅರ್ಜುನ್ ರೆಡ್ಡಿ ಖ್ಯಾತಿಯ ಸಂಗೀತಯ ನಿರ್ದೇಶಕ ರಾಧನ್ ಈ ಸಿನಿಮಾಕ್ಕೂ ಸಂಗೀತ ಸಾರಥ್ಯ ವಹಿಸಿಕೊಂಡಿದ್ದಾರೆ. ಇನ್ನುಳಿದಂತೆ ಕೆಜಿಎಫ್‍ಗೆ ದುಡಿದ ತಾಂತ್ರಿಕ ವರ್ಗವೂ ಸಾಥ್ ಕೊಡಲಿದೆ. ಇದೇ ಹದಿನೆಂಟರಂದು ಮುಹೂರ್ತ ಮುಗಿಸಿಕೊಂಡು ಇಷ್ಟರಲ್ಲಿಯೇ ಈ ಚಿತ್ರದ ಚಿತ್ರೀಕರಣವೂ ಶುರುವಾಗಲಿದೆ.