ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್ ನಲ್ಲಿ ಕೆಜಿಎಫ್ 3 ಸಿನಿಮಾ ಬರಲಿದೆಯಾ ಎನ್ನುವ ಚರ್ಚೆ ಹಲವು ತಿಂಗಳಿಂದ ನಡೆಯುತ್ತಲೇ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಆಂಗ್ಲ ವಾಹಿನಿಯೊಂದು ವರದಿ ಮಾಡಿದಂತೆ ಕೆಜಿಎಫ್ 3 ಸಿನಿಮಾ ಮಾಡಲು ಪ್ರಶಾಂತ್ ನೀಲ್ ಈಗಾಗಲೇ ತಯಾರಿ ಕೂಡ ಮಾಡಿಕೊಂಡಿದ್ದಾರೆ. ಸ್ಕ್ರಿಪ್ಟ್ ಕೂಡ ರೆಡಿ ಎಂದು ಹೇಳಿರುವ ಕುರಿತು ವರದಿ ಮಾಡಿದೆ.
ಸಲಾರ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯ ಜೊತೆಗೆ ಮತ್ತೊಂದು ಮಹತ್ವದ ಸುದ್ದಿಯನ್ನೂ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ (Hombale Films) ಈ ಹಿಂದೆ ನೀಡಿತ್ತು. ಮುಂದಿನ ದಿನಗಳಲ್ಲಿ ಕೆಜಿಎಫ್ 3 (KGF 3) ಸಿನಿಮಾವನ್ನೂ ನಿರ್ಮಾಣ ಮಾಡುವುದಾಗಿ ಅದು ತಿಳಿಸಿತ್ತು. ಸಲಾರ್ ಸಿನಿಮಾದ ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯವನ್ನು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಬರೆದುಕೊಂಡಿತ್ತು.
ಪ್ರಶಾಂತ್ ನೀಲ್ (Prashant Neel) ಮತ್ತು ಯಶ್ (Yash) ಕಾಂಬಿನೇಷನ್ ನ ಕೆಜಿಎಫ್ ಸಿನಿಮಾ ವಿಶ್ವಮಟ್ಟದಲ್ಲಿ ಸದ್ದು ಮಾಡಿತು. ಕನ್ನಡ ಸಿನಿಮಾವೊಂದು ಆ ಪ್ರಮಾಣದಲ್ಲಿ ದುಡ್ಡು ಮಾಡಲು ಸಾಧ್ಯವಾ ಎನ್ನುವ ಅಚ್ಚರಿಯನ್ನೂ ಮೂಡಿತ್ತು. ಕೆಜಿಎಫ್ 1 ಮತ್ತು 2 ಎರಡೂ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಬಿರುಗಾಳಿ ಎಬ್ಬಿಸಿದ್ದವು. ಹಾಗಾಗಿ ಮುಂದಿನ ದಿನಗಳಲ್ಲಿ ಈ ಸರಣಿ ಮುಂದುವರೆಯಲಿದೆ ಎನ್ನುವ ಸುಳಿವೂ ಕೂಡ ಇತ್ತು.
ಇದೀಗ ಪ್ರಶಾಂತ್ ನೀಲ್ ಸಲಾರ್ ಮುಗಿಸಿಕೊಂಡು, ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಯಶ್ ಹೊಸ ಸಿನಿಮಾದ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಹಾಗಾಗಿ ಕೆಜಿಎಫ್ 3 ಸಿನಿಮಾ ಯಾವಾಗ ಸೆಟ್ಟೇರಲಿದೆ ಎನ್ನುವ ಕುತೂಹಲ ಎಲ್ಲರಿಗೂ ಮೂಡಿದೆ. ಮುಂದಿನ ದಿನಗಳಲ್ಲಿ ಚಿತ್ರತಂಡವೇ ಹೆಚ್ಚಿನ ಮಾಹಿತಿ ನೀಡಬಹುದು.