ವಿಶ್ವದಾದ್ಯಂತ ಯಶ್ ನಟನೆಯ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿದೆ. ಬಹುತೇಕ ಕಡೆ ಮಧ್ಯೆರಾತ್ರಿಯಿಂದಲೇ ಸಿನಿಮಾ ಪ್ರದರ್ಶನವಾಗಿದೆ. ಯಶ್ ಅಭಿಮಾನಿಗಳೇನೋ ಮಧ್ಯೆರಾತ್ರಿಯಿಂದಲೇ ಸಿನಿಮಾ ವೀಕ್ಷಿಸುತ್ತಿದ್ದಾರೆ. ಅವರ ಜತೆ ಕನ್ನಡದ ಅನೇಕ ಸೆಲೆಬ್ರಿಟಿಗಳು ಚಿತ್ರ ವೀಕ್ಷಣೆಗೆ ಬಂದಿರುವುದು ವಿಶೇಷ.
ಡಾ.ರಾಜ್ ಮೊಮ್ಮಕ್ಕಳಾದ ಯುವ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ನಿರ್ದೇಶಕರಾದ ಸುನಿ, ಪವನ್ ಒಡೆಯರ್, ನಟಿ ಆಶಾ ಭಟ್, ಕೆಜಿಎಫ್ ಚಿತ್ರದಲ್ಲಿ ನಟಿಸಿರುವ ಶ್ರೀನಿಧಿ ಶೆಟ್ಟಿ, ಹರೀಶ್ ರೈ, ಅರ್ಚನಾ, ಅಯ್ಯಪ್ಪ, ಅವಿನಾಶ್, ಗರುಡ ಹೀಗೆ ಸಾಕಷ್ಟು ಕಲಾವಿದರು ಊರ್ವಶಿ ಚಿತ್ರಮಂದಿರಕ್ಕೆ ಬಂದು ಮೊದಲ ಶೋ ವೀಕ್ಷಿಸಿದ್ದಾರೆ.
ಅಲ್ಲದೇ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ 72 ವರ್ಷದ ಕೃಷ್ಣಾಜಿರಾವ್ ಕೂಡ ತಮ್ಮ ಕುಟುಂಬ ಸಮೇತ ಸಿನಿಮಾ ವೀಕ್ಷಿಸಲು ತ್ರಿವೇಣಿ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಮೊದಲ ಭಾಗದಲ್ಲಿ ಇವರು ರಾಕಿ ರಕ್ಷಣೆಯಲ್ಲಿ ಗರುಡನ ಆಳುಗಳಿಂದ ಬಚಾವ್ ಆಗಿ ಬರುವ ಪಾತ್ರದಲ್ಲಿ ಅಭಿನಯಿಸಿದ್ದರು. ಅದು ಗಣಿಯಲ್ಲಿ ಕೆಲಸ ಮಾಡುವ ವೃದ್ಧನ ಪಾತ್ರವಾಗಿತ್ತು.
ಈಗಾಗಲೇ ಎಲ್ಲ ಕಡೆಗಳಲ್ಲೂ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹತ್ತು ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್ ಗಳಲ್ಲಿ ಚಿತ್ರ ಬಿಡುಗಡೆ ಆಗಿದೆ. 70 ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಆಗಿ ದಾಖಲೆ ಬರೆದಿದೆ. ಯಶ್ ನಟನೆಯನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಇಂಥದ್ದೊಂದು ಕನ್ನಡ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ್ದಕ್ಕೆ ಕನ್ನಡ ಸಿನಿಮಾ ರಂಗದ ಬಗ್ಗೆ ಮತ್ತಷ್ಟು ಅಭಿಮಾನ ಮೂಡಿದೆ.