ದಿಸ್ಪುರ್: ಅಲ್ ಖೈದಾ (Al Qaeda) ಉಗ್ರರ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನನ್ನು ಅಸ್ಸಾಂ ವಿಶೇಷ ಕಾರ್ಯಾಚರಣೆ ಪಡೆ ಅಸ್ಸಾಂನ (Assam) ಕೊಕ್ರಜಾರ್ ಜಿಲ್ಲೆಯಲ್ಲಿ ಬಂಧಿಸಿದೆ.
ಬಂಧಿತನನ್ನು ಗಾಜಿ ರೆಹಮಾನ್ (35) ಎಂದು ಗುರುತಿಸಲಾಗಿದೆ. ಆರೋಪಿ ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆ ಅನ್ಸರುಲ್ಲಾ ಬಾಂಗ್ಲಾ ತಂಡದ (ಎಬಿಟಿ) ಪ್ರಮುಖ ಸದಸ್ಯ ಎಂದು ತಿಳಿದು ಬಂದಿದೆ. ಆತ ಅಲ್ ಖೈದಾ ಉಗ್ರರ ಸಂಪರ್ಕದಲ್ಲಿದ್ದ. ಅಸ್ಸಾಂನ ವಿಶೇಷ ಕಾರ್ಯಪಡೆ ಆಪರೇಷನ್ ಪರ್ಘಾಟ್ ಅಡಿಯಲ್ಲಿ ಭಯೋತ್ಪಾದಕರನ್ನು ಬಂಧಿಸಲು ಕಾರ್ಯಾಚರಣೆ ನಡೆಸುತ್ತಿದೆ. ಅದರ ಭಾಗವಾಗಿ ರೆಹಮಾನ್ ಬಂಧನವಾಗಿದೆ.
Advertisement
Advertisement
ಭಯೋತ್ಪಾದನಾ ಘಟಕದ ಕನಿಷ್ಠ 12 ಸಹಚರರನ್ನು ಇದುವರೆಗೆ ಬಂಧಿಸಲಾಗಿದೆ. ಈ ತಿಂಗಳ ಆರಂಭದಲ್ಲಿ, ಅಸ್ಸಾಂ ಪೊಲೀಸರು ‘ಸ್ಲೀಪರ್ ಸೆಲ್’ ನೆಟ್‌ವರ್ಕ್ ಮೇಲೆ ದಾಳಿ ನಡೆಸಿದ್ದರು. ಅಲ್ಲಿ ಭಯೋತ್ಪಾದನಾ ಘಟಕದ ಸದಸ್ಯರು ಭಾರತದ ವಿವಿಧ ಭಾಗಗಳಲ್ಲಿ ‘ಸ್ಲೀಪರ್ ಸೆಲ್’ಗಳನ್ನು ರಚಿಸಿ ಹಿಂದೂ ಸಮುದಾಯಕ್ಕೆ ಸೇರಿದ ನಾಯಕರನ್ನು ಹತ್ಯೆ ಮಾಡಲು ಯೋಜಿಸಿದ್ದರು ಎಂದು ಪೊಲೀಸರು (Police) ತಿಳಿಸಿದ್ದಾರೆ.
Advertisement
Advertisement
ಡಿ.17 ಮತ್ತು 18ರ ಮಧ್ಯರಾತ್ರಿ, ಭಯೋತ್ಪಾದನಾ ಘಟಕದ 8 ಸದಸ್ಯರನ್ನು ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಬಂಧಿಸಲಾಗಿತ್ತು. ಅವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ನಿರ್ವಾಹಕರಾಗಿದ್ದರು ಎಂದು ವರದಿಯಾಗಿದೆ. ಡಿ.24 ರಂದು ಇತರ ಇಬ್ಬರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಮೂರು ದಿನಗಳ ನಂತರ ಮತ್ತೋರ್ವನನ್ನು ಬಂಧಿಸಲಾಗಿತ್ತು. ಅಲ್ಲದೇ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಸೇರಿದಂತೆ ಇತರೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.