ಬಾಗಲಕೋಟೆ: ಕೆರೂರ ಗುಂಪು ಘರ್ಷಣೆಯ ವೇಳೆ ಗಾಯಗೊಂಡ ಹಿಂದೂ ಸಂಘಟನೆಯ ಗಾಯಾಳುಗಳು ಸಿದ್ದರಾಮಯ್ಯ ಭೇಟಿಯನ್ನು ನಿರಾಕರಿಸಿದ್ದಾರೆ.
ಘರ್ಷಣೆಯಲ್ಲಿ ಗಾಯಗೊಂಡ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಲು ಬಾದಾಮಿ ಕ್ಷೇತ್ರದ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಲು ಮುಂದಾಗಿದ್ದರು.
ಸಿದ್ದರಾಮಯ್ಯ ನಮ್ಮ ಭೇಟಿಗೆ ಬರುತ್ತಿದ್ದಾರೆ ಎಂಬ ವಿಚಾರ ತಿಳಿದ ಹಿಂದೂ ಸಂಘಟನೆಯ ಗಾಯಾಳುಗಳು ನಮ್ಮನ್ನು ನೋಡಲು ಸಿದ್ದರಾಮಯ್ಯ ಬರುವುದು ಬೇಡ ಎಂದು ಬಾಗಲಕೋಟೆ ಎಸ್‌ಪಿಗೆ ಫೋನ್ ಮಾಡಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಭೇಟಿಯನ್ನು ಸಿದ್ದರಾಮಯ್ಯ ರದ್ದು ಮಾಡಿದ್ದರು. ಇದನ್ನೂ ಓದಿ: ನಮ್ಗೆ ನ್ಯಾಯ ಬೇಕು, ದುಡ್ಡು ಬೇಡ – ಸಿದ್ದು ಕೊಟ್ಟ 2 ಲಕ್ಷ ರೂ. ಎಸೆದ ಮುಸ್ಲಿಂ ಮಹಿಳೆ
ಜುಲೈ 6 ರಂದು ಕೆರೂರ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ, ಚಾಕು ಇರಿತ ನಡೆದಿತ್ತು. ಚಾಕು ಇರಿತದಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ, ಯಮನೂರ ಗಾಯಗೊಂಡಿದ್ದರು. ಘರ್ಷಣೆ ಬಳಿಕ ಮನೆಯ ಮೇಲೆ ದಾಳಿ ಹಾಗೂ ಜುಲೈ 8 ರಂದು ಡಾಬಾ ಮೇಲೆ ದಾಳಿ ನಡೆದು ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ಘಟನೆಯಲ್ಲಿ ಐವರು ಮುಸ್ಲಿಮರು ಗಾಯಗೊಂಡಿದ್ದರು. ಇಂದು ಎರಡು ಗುಂಪಿನ ಗಾಯಾಳುಗಳ ಭೇಟಿಗೆ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಮುಂದಾಗಿದ್ದರು.
ಆಶೀರ್ವಾದ ಆಸ್ಪತ್ರೆಯಲ್ಲಿದ್ದ ಮುಸ್ಲಿಂ ಗಾಯಾಳುಗಳ ಭೇಟಿ ಮಾಡಿ ನಾಲ್ವರಿಗೆ ಎರಡು ಲಕ್ಷ ರೂ. ಹಣವನ್ನು ಸಿದ್ದರಾಮಯ್ಯ ನೀಡಿದ್ದಾರೆ. ಕುಟುಂಬಸ್ಥರು ಹಣ ನಿರಾಕರಿಸಿದ್ದರೂ ಒತ್ತಾಯವಾಗಿ ಸಿದ್ದರಾಮಯ್ಯ ಹಣ ನೀಡಿದ್ದರು.
ಆದರೆ ಮುಸ್ಲಿಂ ಮಹಿಳೆಯರು, ನಮಗೆ ನಿಮ್ಮ ಹಣ ಬೇಡ ನಮಗೆ ಶಾಂತಿ ಬೇಕು. ಹಿಂದೂ ಮುಸ್ಲಿಂ ಇಬ್ಬರೂ ನೆಮ್ಮದಿಯಿಂದ ಬದುಕುವ ವಾತಾವರಣ ಬೇಕು ಎಂದು ಅಳುತ್ತಲೇ ಸಿದ್ದು ವಾಹನಕ್ಕೆ ದುಡ್ಡು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.