ಕೇವಲ ಸಿನಿಮಾ ರೂಪಿಸುವ ವಿಚಾರದಲ್ಲಿ ಮಾತ್ರವಲ್ಲ; ಆ ಸಿನಿಮಾವನ್ನು ಪ್ರೇಕ್ಷಕರನ್ನು ತಲುಪಿಸುವಲ್ಲಿಯೂ ಹೊಸತನದ ಹಾದಿ ಹಿಡಿಯೋ ನಡೆಯೊಂದು ಇತ್ತೀಚೆಗೆ ಶುರುವಾಗಿದೆ. ಈ ನಿಟ್ಟಿನಲ್ಲಿ ನೋಡೋದಾದರೆ, ಕೆರೆಬೇಟೆ (Kerebete) ಚಿತ್ರದ ಟ್ರೈಲರ್ (Trailer) ಬಿಡುಗಡೆ ಕಾರ್ಯಕ್ರಮವನ್ನು ಚಿತ್ರತಂಡ ಅತ್ಯಂತ ವಿಶೇಷವಾಗಿ ನೆರವೇರಿಸಿದೆ. ಈ ಈವೆಂಟಿನ ರೂಪುರೇಷೆ, ಅದು ನಡೆದ ರೀತಿಗಳೆಲ್ಲವೂ ಭಿನ್ನವಾಗಿವೆ. ಈ ಮೂಲಕ ಹಲವು ಸಂಸ್ಕೃತಿಗಳ ಸಂಗಮದಂಥಾ ಬೆಂಗಳೂರಿನ ಒಡಲಲ್ಲಿ ಅಪ್ಪಟ ಮಲೆನಾಡಿನ ಸಂಸ್ಕೃತಿಯೊಂದು ಮಿಂಚಿದೆ.
ಆರಂಭದಲ್ಲಿ ಕಿಚ್ಚ ಸುದೀಪ್ ಅವರ ಕಡೆಯಿಂದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಿಕ್ಕಿಯಾಗಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಹಾಗಂತ ಕೆರೆಬೇಟೆಗೆ ಕಿಚ್ಚನ ಸಾಥ್ ಇದ್ದೇ ಇದೆ. ಬಿಡುಗಡೆಗೂ ಮುನ್ನವೇ ಸುದೀಪ್ ಸಮ್ಮುಖದಲ್ಲಿ ಅರ್ಥಪೂರ್ಣವಾದೊಂದು ಈವೆಂಟು ನಡೆಸಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಇದೇ ಹೊತ್ತಿನಲ್ಲಿ ಟ್ರೈಲರ್ ಲಾಂಚ್ ಗೆ ಭಿನ್ನ ಹಾದಿಯಲ್ಲಿ ಹೆಜ್ಜೆಯೂರಿರುವ ಚಿತ್ರತಂಡ, ಒಟ್ಟಾರೆ ಸಿನಿಮಾದ ಆಂತರ್ಯಕ್ಕನುಗುಣವಾಗಿ ಜ್ಯೋತಿ ಬೆಳಗಿಸಿಕೊಂಡು ಮನೆ ಮನೆಗೆ ತೆರಳಿ, ಎಣ್ಣೆ ಎರೆಸಿಕೊಂಡು ಆಶೀರ್ವಾದ ಪಡೆದು ನಂತರ ಪುಟ್ಟ ಮಗುವಿನ ಕೈಯಲ್ಲಿ ಟ್ರೈಲರ್ ಬಿಡುಗಡೆ ಮಾಡಿಸಲಾಗಿದೆ.
ಅಂದಹಾಗೆ, ಈ ಜ್ಯೋತಿ ಬೆಳಗಿಸಿಕೊಂಡು ಮನೆ ಮನೆಗೆ ತೆರಳೋ ಕ್ರಮಕ್ಕೆ ಮಲೆನಾಡು ಭಾಗದಲ್ಲಿ ಅಂಟಿಗೆಪಿಂಟಿಗೆ ಅನ್ನೋ ಹೆಸರಿದೆ. ಅದು ದೀಪಾವಳಿಯ ಸಂದರ್ಭದಲ್ಲಿ ಕಳೆಗಟ್ಟಿಕೊಳ್ಳುವ ಜನಪದೀಯ ಆಚರಣೆ. ಅದಕ್ಕೆ ಹೊಸೆದುಕೊಂಡಂಥಾ ಜನಪದ ಶೈಲಿಯ ಚೆಂದದ ಹಾಡುಗಳಿವೆ. ಮಲೆನಾಡಲ್ಲಿಯೇ ಮರೆಗೆ ಸರಿಯುತ್ತಿರುವ ಈ ಸಂಪ್ರದಾಯವನ್ನು ಬೆಂಗಳೂರಿಗೆ ಪರಿಚಯಿಸಿದ ಖುಷಿ ಚಿತ್ರತಂಡಕ್ಕಿದೆ. ಇಂಥಾ ಆಚರಣೆಯ ತರುವಾಯ, ನಾಯಕ ನಟ ಗೌರಿಶಂಕರ್ ಅವರ ಪುಟ್ಟ ಮಗಳು ಈಶ್ವರಿ ತನು ಮೂಲಕ ಕೆರೆಬೇಟೆ ಟ್ರೈಲರ್ ಅನಾವರಣಗೊಂಡಿದೆ.
ಕೆರೆಬೇಟೆ ಎಂಬುದು ಮಲೆನಾಡು ಭಾಗದ ಒಂದು ಸಂಪ್ರದಾಯ. ಅದರ ಸುತ್ತ ಚಲಿಸುತ್ತಲೇ ಮಲೆನಾಡಿನ ಕಟ್ಟುಪಾಡುಗಳು, ಆಚರಣೆ, ರೀತಿ ರಿವಾಜುಗಳ ಸುತ್ತ ಪಕ್ಕಾ ರಗಡ್ ಶೈಲಿಯ ಕಥಾನಕವನ್ನೊಳಗೊಂಡಿರುವ ಚಿತ್ರ ಕೆರೆಬೇಟೆ. ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದಲ್ಲಿ ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿದ್ದಾರೆ. ಈ ಹಿಂದೆ ಜೀಕಾಲಿ ಮತ್ತು ರಾಜಹಂಸ ಚಿತ್ರದಲ್ಲಿಯೂ ಇವರು ನಾಯಕನಾಗಿ ನಟಿಸಿದ್ದರು. ಗೌರಿಶಂಕರ್ ಸಹೋದರ ಜೈಶಂಕರ್ ಪಟೇಲ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಈಗಾಗಲೇ ಪವನ್ ಒಡೆಯರ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ಕಾರ್ಯನಿರ್ವಹಿಸಿದ್ದ ರಾಜಗುರು ಬಿ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈಗಾಗಲೇ ಒಂದಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಬಿಂದು ಶಿವರಾಮ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಇನ್ನುಳಿದಂತೆ, ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಕೆರೆಬೇಟೆ ಇದೇ ಮಾರ್ಚ್ 15ರಂದು ಬಿಡುಗಡೆ ಗೊಳ್ಳಲಿದೆ.