ತಿರುವನಂತಪುರಂ: ಕೇರಳದ ಅತಿದೊಡ್ಡ ಶಿಕ್ಷಣ ಸಂಸ್ಥೆಯಾದ ಕ್ಯಾಲಿಕಟ್‍ನ ಹೆಸರಾಂತ ಮುಸ್ಲಿಂ ಶಿಕ್ಷಣ ಸಂಸ್ಥೆ (ಎಂಇಎಸ್) ತನ್ನ ಕಾಲೇಜ್ ಕ್ಯಾಂಪಸ್‍ನಲ್ಲಿ ಬುರ್ಕಾ ವನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಪಿ.ಎ.ಫಜಲ್ ಗಫೂರ್ ಅವರು, ಕೇರಳದಲ್ಲಿ ಇಸ್ಲಾಮ್ ಧರ್ಮವನ್ನು ಪಾಲಿಸೋಣ. ಆದರೆ ಮಧ್ಯಪ್ರಾಚ್ಯದ ಇಸ್ಲಾಂನಲ್ಲ ಎಂದು ತಿಳಿಸಿದ್ದಾರೆ.
ಸಂಪ್ರದಾಯವಾದಿ ಮುಸ್ಲಿಂ ಗುಂಪುಗಳು ಕಳೆದ ಐದು ವರ್ಷಗಳಿಂದ ಕೇರಳ ಸಂಸ್ಥೆಗಳಲ್ಲಿ ಇದೇ ರೀತಿಯ ಉಡುಪನ್ನು ಧರಿಸಬೇಕು ಎಂದು ಒತ್ತಾಯಿಸುತ್ತಿವೆ. ಇವರ ಒತ್ತಾಯಕ್ಕೆ ಮಣಿಯದೇ ನಾವು ನಮ್ಮ ಸಂಸ್ಥೆಯಲ್ಲಿ ಸಲ್ವಾರ್ ಕಮೀಝ್ ಡ್ರೆಸ್ ಕೋಡ್ ಜಾರಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಗಫೂರ್ ಅವರು ಮಹಿಳೆಯರು ಬುರ್ಕಾ ಧರಿಸುತ್ತಿರುವುದಕ್ಕೆ ಹಿಂದಿನಿಂದಲೇ ವಿರೋಧ ವ್ಯಕ್ತಪಡಿಸಿಕೊಂಡು ಬಂದಿದ್ದಾರೆ. 2014 ರಲ್ಲಿ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬುರ್ಕಾ ಧರಿಸುವುದು ಇಸ್ಲಾಮಿನ ಭಾಗವಲ್ಲ. ಮುಖದ ಮೇಲೆ ಸೂರ್ಯನ ಕಿರಣಗಳು ಬೀಳುವುದನ್ನು ತಡೆಯುದರಿಂದ ಮುಸ್ಲಿಂ ಮಹಿಳೆಯರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದರು.
ನಾವು ತಾಲಿಬಾನ್ ಆಡಳಿತದಲ್ಲಿ ಇಲ್ಲ. ಭಾರತದಲ್ಲಿ ಮಾತನಾಡಲು ಸ್ವಾತಂತ್ರ್ಯವಿದೆ. ಹೀಗಾಗಿ ನಾವು ಧರ್ಮದ ಪದ್ದತಿ ವಿರುದ್ಧ ಮಾತನಾಡುತ್ತೇವೆ. ಮುಖ ಮುಚ್ಚಿಕೊಳ್ಳುವುದೇ ಇಸ್ಲಾಮಿನ ಭಾಗವಲ್ಲ ಎಂದು ಗಫೂರ್ ಹೇಳಿದ್ದಾರೆ.
ಎಂಇಎಸ್ ಎಪ್ರಿಲ್ 17 ರಂದು ಸುತ್ತೋಲೆಯನ್ನು ಹೊರಡಿಸಿದ್ದು, ಇದಕ್ಕೆ ಕೆಲ ಮುಸ್ಲಿಂ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸಿವೆ. ಇದು ಸಮುದಾಯದ ಧಾರ್ಮಿಕ ತತ್ವಗಳು ಮತ್ತು ಭಾವನೆಗಳನ್ನು ವಿರೋಧಿಸುತ್ತಿದೆ. ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ಶೈಕ್ಷಣಿಕ ಸಂಸ್ಥೆಯು ವಿವಿಧ ಸಂಘಟನೆಗಳ ಜೊತೆಗೆ ಚರ್ಚೆ ಮಾಡಬೇಕಿತ್ತು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
10 ವೃತ್ತಿಪರ ಕಾಲೇಜು ಸೇರಿದಂತೆ 150 ಶಿಕ್ಷಣ ಕೇಂದ್ರಗಳನ್ನು ಎಂಇಎಸ್ ಹೊಂದಿದೆ. ಅಷ್ಟೇ ಅಲ್ಲದೇ ಇಲ್ಲಿ ವ್ಯಾಸಂಗ ಮಾಡುವವರಲ್ಲಿ ಶೇ.80 ರಷ್ಟು ಮುಸ್ಲಿಮ್ ವಿದ್ಯಾರ್ಥಿನಿಯರಿದ್ದಾರೆ.
ಶ್ರೀಲಂಕಾದಲ್ಲಿ ನಿಷೇಧಗೊಂಡಂತೆ ಭಾರತದಲ್ಲೂ ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕ ಸ್ಥಳದಲ್ಲಿ ಬುರ್ಕಾವನ್ನು ನಿಷೇಧಿಸಬೇಕೆಂದು ಮಹಾರಾಷ್ಟ್ರದಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾದ ಶಿವಸೇನೆ ಆಗ್ರಹಿಸಿತ್ತು.
ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದ ಸಂಪಾದಕೀಯದಲ್ಲಿ, ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರು ತಮ್ಮ ದೇಶದಲ್ಲಿ ಬುರ್ಕಾವನ್ನು ನಿಷೇಧ ಮಾಡಿದ್ದಾರೆ. ಅದೇ ರೀತಿಯಲ್ಲಿ ಭಾರತದಲ್ಲೂ ಬುರ್ಕಾವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದೆ.
ಬುರ್ಕಾ ಧರಿಸುವುದರಿಂದ ಉಗ್ರರು ತಮ್ಮ ಮುಖ ಮುಚ್ಚಿಕೊಂಡು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಈ ರೀತಿಯ ಸಂಪೂರ್ಣ ಮುಖ ಮುಚ್ಚಿಕೊಳ್ಳುವ ಉಡುಪುಗಳನ್ನು ಧರಿಸುವುದರಿಂದ ರಾಷ್ಟ್ರೀಯ ಭದ್ರತೆಗೆ ಹಿನ್ನಡೆಯಾಗುತ್ತಿದೆ. ಭಾರತದ ಮೇಲೂ ಉಗ್ರರು ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಭದ್ರತೆಯ ದೃಷ್ಟಿಯಿಂದ ನಮ್ಮ ದೇಶದಲ್ಲೂ ಬುರ್ಕಾವನ್ನು ನಿಷೇಧಿಸುವಂತೆ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಹೇಳಿತ್ತು.