ತಿರುವನಂತನಪುರಂ: ಇತ್ತೀಚೆಗೆ ಕೇರಳದಲ್ಲಿ ರೈಲಿಗೆ ಬೆಂಕಿ ಹಚ್ಚಿ ಮಗು ಸೇರಿ ಮೂರು ಜನರ ಸಾವಿಗೆ ಕಾರಣನಾದ ಆರೋಪಿ ಶಾರುಖ್ ಸೈಫಿ ತೀವ್ರ ಮತೀಯವಾದ (Radicalised) ಬೆಳೆಸಿಕೊಂಡಿದ್ದ ಎಂದು ಎಸ್‍ಐಟಿ (SIT) ಮುಖ್ಯಸ್ಥ ಎಡಿಜಿಪಿ (ADGP) ಎಂ.ಆರ್ ಅಜಿತ್ ಕುಮಾರ್ ಸೋಮವಾರ ತಿಳಿಸಿದ್ದಾರೆ.
ಆರೋಪಿ ವಿವಾದಾತ್ಮಕ ಇಸ್ಲಾಮಿಕ್ ಬೋಧಕ ಝಾಕೀರ್ ನಾಯ್ಕ್ (Zakeer Naik) ವೀಡಿಯೊಗಳನ್ನು ವೀಕ್ಷಿಸುತ್ತಿದ್ದ. ಕೃತ್ಯ ಎಸಗಲು ಸಂಚು ರೂಪಿಸಿ ರಾಜ್ಯಕ್ಕೆ ಬಂದಿದ್ದ. ಆರೋಪಿ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟುವ ಕಾಯ್ದೆಯಡಿ ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಆತನ ವಿರುದ್ಧ ಯುಎಪಿಎಯ (UAPA) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸೇನಾ ನೆಲೆಯಲ್ಲಿ ಸೈನಿಕರಿಗೆ ಗುಂಡಿಕ್ಕಿ ಹತ್ಯೆ – ಓರ್ವ ಯೋಧನ ಬಂಧನ
ತನಿಖಾ ತಂಡ ವಿವಿಧ ರಾಜ್ಯಗಳಿಗೆ ತೆರಳಿ ವೈಜ್ಞಾನಿಕ ಪುರಾವೆಗಳು, ಸಾಕ್ಷ್ಯಚಿತ್ರ ಮತ್ತು ಮೌಖಿಕ ಮಾಹಿತಿಯನ್ನು ಸಂಗ್ರಹಿಸಿದೆ. ಪ್ರಕರಣದ ಸಮಗ್ರ ತನಿಖೆ ನಡೆಸಿದ್ದೇವೆ. ಆತನಿಗೆ ಬೇರೆಯವರಿಂದ ಏನಾದರೂ ಸಹಾಯ ಸಿಕ್ಕಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಆರೋಪಿಗೆ 27 ವರ್ಷ ವಯಸ್ಸಾಗಿದ್ದು, ನ್ಯಾಷನಲ್ ಓಪನ್ ಸ್ಕೂಲ್‍ನಲ್ಲಿ ಶಿಕ್ಷಣ ಪೂರೈಸಿದ್ದಾನೆ. ತನಿಖೆ ವೇಳೆ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏ.2ರ ರಾತ್ರಿ ಅಲಪ್ಪುಳ-ಕಣ್ಣೂರು ಎಕ್ಸ್‍ಪ್ರೆಸ್ ರೈಲಿನಲ್ಲಿ (Alappuzha-Kannur Executive Express train) ಪ್ರಯಾಣಿಸುವಾಗ ಕೋಝಿಕ್ಕೋಡ್‍ನ ಎಲತ್ತೂರ್ ಬಳಿಯ ಕೊರಾಪುಝ ಸೇತುವೆಯ (Korapuzha Bridge) ಬಳಿ ಸೈಫಿ ತನ್ನ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿದ್ದ. ಘಟನೆಯಲ್ಲಿ ಎರಡು ವರ್ಷದ ಮಗು ಸೇರಿದಂತೆ ಮೂವರು ಸಾವಿಗೀಡಾಗಿದ್ದರು. ಒಂಬತ್ತು ಜನರಿಗೆ ಸುಟ್ಟ ಗಾಯಗಳಾಗಿತ್ತು. ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ತಲೆಗೆ 1, ದೇಹಕ್ಕೆ 8 ಗುಂಡೇಟು