ಕೇರಳ ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲು ಪ್ಲ್ಯಾನ್ – ವ್ಯಾಪಕ ವಿರೋಧವೇಕೆ?

Public TV
4 Min Read
KAADU 01

‌ಇಡೀ ವಿಶ್ವದಲ್ಲೇ ಅತಿಹೆಚ್ಚು ಜೀವವೈವಿದ್ಯ ಹೊಂದಿರುವ ದೇಶಗಳ ಪೈಕಿ ಭಾರತವೂ ಒಂದಾಗಿದೆ. ವರದಿಗಳ ಪ್ರಕಾರ ಶೇ.8 ರಷ್ಟು ಜೀವ ವೈವಿದ್ಯ ಸಂಪತ್ತು ನಮ್ಮಲ್ಲಿದೆ. ಆದ್ರೆ ಇತ್ತೀಚೆಗೆ ಉಂಟಾಗುತ್ತಿರುವ ಹವಾಮಾನ ವೈರಪರಿತ್ಯಕ್ಕೆ ಕಾರಣಗಳನ್ನ ನೋಡಿದಾಗ ಅವುಗಳಲ್ಲಿ ಅರಣ್ಯ ನಾಶ ಸಹ ಪ್ರಮುಖವಾಗಿ ಕಂಡುಬಂದಿದೆ.

modi bandipura safari 1

ದೇಶದ ಭೌಗೋಳಿಕ ಪ್ರದೇಶದಲ್ಲಿ ಕನಿಷ್ಠ ಶೇ.33 ರಷ್ಟು ಅರಣ್ಯ ಇರಬೇಕು, ಗುಡ್ಡಗಾಡು ಪ್ರದೇಶ ಶೇ.66 ರಷ್ಟು ಇರಬೇಕು ಎಂದು ರಾಷ್ಟ್ರೀಯ ಅರಣ್ಯ ನೀತಿ 1988 ಹೇಳುತ್ತದೆ. ಆದ್ರೆ ವಾಸ್ತವಾಂಶದಲ್ಲಿ ಅದು ಶೇ.21ಕ್ಕೆ ಇಳಿದಿದೆ ಎನ್ನಲಾಗಿದೆ. ವನ್ಯಜೀವಿಗಳಿಗೂ ಬದುಕುವ ಹಕ್ಕಿದೆ, ವನ್ಯ ಜೀವಗಳಿದ್ದರೆ ಕಾಡು, ಕಾಡಿದ್ದರೆ ನಾಡುವ ಎನ್ನುವ ಉದ್ದೇಶದೊಂದಿಗೆ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ 5 ದಶಕಗಳ ಹಿಂದೆಯೇ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿತು. ಆದ್ರೆ ಇತ್ತೀಚೆಗೆ ಕೇರಳದ ನೂತನ ಸಂಸದೆಯಾಗಿ ಆಯ್ಕೆಯಾಗಿದ್ದ ಪ್ರಿಯಾಂಕಾ ಗಾಂಧಿ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರ್ನಾಟಕ-ಕೇರಳ ನಡುವೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಈಗಿರುವ ರಾತ್ರಿ ಸಂಚಾರ ನಿರ್ಬಂಧ ತೆರವುಗೊಳಿಸುವುದಾಗಿ ಹೇಳಿ ಟೀಕೆಗೆ ಗುರಿಯಾಗಿದ್ದರು. ಇದೀಗ ಕೇರಳ ಸರ್ಕಾರ ವನ್ಯ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಹೊಸ ಮಸೂದೆಯನ್ನು ಜಾರಿಗೊಳಿಸಲು ಮುಂದಾಗಿದೆ.

Kerala Forest

ಕೇರಳ ಸರ್ಕಾರವು ಕೇರಳ ಅರಣ್ಯ ಕಾಯ್ದೆ-1981ಕ್ಕೆ ತಿದ್ದುಪಡಿ ತರಲು ಮಸೂದೆಯೊಂದನ್ನು ಸಿದ್ಧಪಡಿಸಿದೆ. ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದ್ರೆ ಕೇರಳದಲ್ಲಿರುವ 941 ಗ್ರಾಮ ಪಂಚಾಯಿಗಳ ಪೈಕಿ 430 ಬೆಸ ಗ್ರಾಮ ಪಂಚಾಯಿತಿಗಳಲ್ಲಿ ವಾಸಿಸುವ ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹಾಗಾದ್ರೆ ಕೇರಳ ಸರ್ಕಾರ ಸಿದ್ಧಪಡಿಸಿರುವ ತಿದ್ದುಪಡಿ ಮಸೂದೆಯಲ್ಲಿ ಏನಿದೆ? ಇದರ ಉದ್ದೇಶವೇನು ಎಂಬುದನ್ನು ನೋಡೋಣ

ಮಸೂದೆ ಉದ್ದೇಶವೇನು?

ಪ್ರಸ್ತುತ ಕೇರಳ ಅರಣ್ಯ (ತಿದ್ದುಪಡಿ) ಮಸೂದೆ 2024, ಅರಣ್ಯ ಸರಂಕ್ಷಣೆಗೆ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸುತ್ತದೆ. ಅರಣ್ಯ ಪ್ರದೇಶವನ್ನು ತ್ಯಾಜ್ಯ ವಿಲೇವಾರಿ ಮಾಡುವ ಸ್ಥಳವಾಗಿ ಬಳಸುತ್ತಿರುವುದನ್ನು ತಡೆಯುವುದು, ಅರಣ್ಯದೊಳಗಿನ ನದಿ ಅಥವಾ ಅರಣ್ಯ ಪ್ರದೇಶಗಳಲ್ಲಿ ಹರಿಯುವ ಜಲಮೂಲಗಳಲ್ಲಿ ತ್ಯಾಜ್ಯ ಎಸೆಯುವುದರ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಣಯವನ್ನು ಸೂಚಿಸುತ್ತದೆ. ಕಾಡಿನ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ಒದಗಿಸುವ ಜೊತೆಗೆ ವಿವಿಧ ಅಪರಾಧಗಳಿಗೆ ವಿಧಿಸುವ ದಂಡ ಹಾಗೂ ಶಿಕ್ಷೆಯ ಪ್ರಮಾಣವನ್ನೂ ದುಪ್ಪಟ್ಟು ಮಾಡುವುದು ಇದರ ಉದ್ದೇಶವಾಗಿದೆ.

Bandipur Road 2

ವಿವಾದಾತ್ಮಕ ಅಂಶಗಳೇನು?

ಕೇರಳ ಸರ್ಕಾರವು ವನ್ಯ ಸಂಪತ್ತನ್ನು ರಕ್ಷಿಸುವ ಉದ್ದೇಶಕ್ಕಾಗಿ ಮಸೂದೆ ತಿದ್ದುಪಡಿಜಾರಿಗೊಳಿಸುತ್ತಿದೆ. ಆದ್ರೆ ಇದರಲ್ಲಿ ಕೆಲವು ವಿವಾದಾತ್ಮಕ ಅಂಶಗಳು ಕಂಡುಬಂದಿರುವುದು ಜನರ ನಿದ್ದೆಗೆಡಿಸಿವೆ.

ವಾರಂಟ್ ಇಲ್ಲದೇ ಬಂಧಿಸುವ ಅಧಿಕಾರ:
ಸದ್ಯ ಕರಡಿನಲ್ಲಿ ಪರಿಶೀಲಿಸಲಾದ ಅಂಶಗಳ ಪ್ರಕಾರ ಹೊಸ ಮಸೂದೆಯು ಅರಣ್ಯಾಧಿಕಾರಿಗಳು ಅಪರಾಧಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿ ಮೇಲೆ ಸಂಶಯ ಬಂದರೂ ವಾರಂಟ್‌ ಇಲ್ಲದೇ ಆತನನ್ನ ಬಂಧಿಸುವ ಅಧಿಕಾರ ನೀಡುತ್ತದೆ. ಈಗಾಗಲೇ ಅರಣ್ಯಾಧಿಕಾರಿಗಳು ಕೆಲವೊಂದು ಅಪರಾಧಗಳಲ್ಲಿ ಅಮಾಯಕರನ್ನು ಬಂಧಿಸಿ ಶಿಕ್ಷೆಗೆ ಗುರಿ ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಈ ಮಸೂದೆ ಜಾರಿಯಾದರೆ ಕಾನೂನು ದುರ್ಬಳಕೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಅನ್ನೋದು ವನ್ಯಜೀವಿ ತಜ್ಞರ ಕಳವಳ.

ಹೆಚ್ಚಿನ ಸಿಬ್ಬಂದಿಗೆ ʻಅರಣ್ಯ ಅಧಿಕಾರಿʼ ಅಧಿಕಾರ:

ಹೊಸ ತಿದ್ದುಪಡಿಯು ಬೀಟ್ ಫಾರೆಸ್ಟ್ ಆಫೀಸರ್, ಬುಡಕಟ್ಟು ವೀಕ್ಷಕ ಮತ್ತು ಅರಣ್ಯ ವೀಕ್ಷಕರನ್ನು ʻಅರಣ್ಯ ಅಧಿಕಾರಿ’ ಎಂಬ ವ್ಯಾಖ್ಯಾನಕ್ಕೆ ತಂದಿದೆ. ಈ ಮೂಲಕ ಅವರು ಅರಣ್ಯಾಧಿಕಾರಿಯ ಯಾವುದೇ ಕರ್ತವ್ಯವನ್ನು ನಿರ್ವಹಿಸಬಹುದು ಎನ್ನಲಾಗಿದೆ. ಸದ್ಯ ಕೆಲವರು ರಾಜಕೀಯ ಪಕ್ಷಗಳ ಶಿಫಾರಸುಗಳ ಆಧಾರದ ಮೇಲೆ ನೇಮಕಗೊಂಡಿದ್ದಾರೆ. ಇನ್ನೂ ಕೆಲವರು ತಾತ್ಕಾಲಿಕ ಅವಧಿ ನಿರ್ವಹಿಸುತ್ತಿದ್ದಾರೆ. ಎಲ್ಲರಿಗೂ ಅರಣ್ಯ ಅಧಿಕಾರಿಯ ಅಧಿಕಾರ ನೀಡುವುದರಿಂದ ಅವರು ಅದನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎನ್ನಲಾಗಿದೆ.

bandipur forest man arrest

ಅರಣ್ಯಕ್ಕೆ ಹರಿಯುವ ನದಿಗಳ ಬಗ್ಗೆ ಮಾತ್ರವೇ ಕಾಳಜಿ?

ಈ ಮಸೂದೆಯು ಅರಣ್ಯ ಪ್ರದೇಶದ ಮೂಲಕ ಹರಿಯುವ ನದಿಗಳನ್ನು ಹೊರತುಪಡಿಸಿ, ಅರಣ್ಯಕ್ಕೆ ಹರಿಯುವ ನದಿಗಳ ಸಂರಕ್ಷಣೆ ಮಾಡುವುದನ್ನು ಮಾತ್ರ ಕಾಯ್ದೆ ವ್ಯಾಪ್ತಿಯೊಳಗೆ ತಂದಿದೆ. ಕೇರಳದಲ್ಲಿ ಅನೇಕ ನದಿಗಳು ಅರಣ್ಯ ಪ್ರವೇಶಿಸುವ ಮೊದಲು ಇತರ ಭೂಪ್ರದೇಶಗಳಲ್ಲಿ ಹರಿಯುತ್ತದೆ. ತಿದ್ದುಪಡಿ ಕಾಯ್ದೆ ಅಂಶದಿಂದ ಅರಣ್ಯದ ಹೊರಗಿನ ನದಿಗಳ ಮೇಲೂ ಹಕ್ಕನ್ನು ನೀಡಿದಂತಾಗುತ್ತದೆ. ಅಲ್ಲದೇ ಸ್ಥಳೀಯರು ಅರಣ್ಯ ಅಪರಾಧಗಳನ್ನು ಎದುರಿಸುವಂತಾಗುತ್ತದೆ ಎಂಬ ಆತಂಕ ಎದುರಾಗಿದೆ.

ದಂಡದ ಪ್ರಮಾಣ ದುಪ್ಪಟು:

ಸದ್ಯ ಅರಣ್ಯ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಸಣ್ಣ ಅರಣ್ಯ ಅಪರಾಧಗಳಿಗೆ 1,000 ರೂ. ದಂಡ ವಿಧಿಸಲಾಗುತ್ತಿದೆ. ಈ ಪ್ರಮಾಣ 25,000 ರೂ.ಗಳಿಗೆ ಹೆಚ್ಚಾಗುತ್ತದೆ. 25,000 ರೂ. ವರೆಗಿನ ಇತರ ದಂಡದ ಪ್ರಮಾಣ 50,000 ರೂ.ಗಳಿಗೆ ಹೆಚ್ಚಾಗುತ್ತದೆ.

Bandipur Road 1

ಅರಣ್ಯಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ:

ಈ ಮಸೂದೆ ಅನುಷ್ಠಾನಗೊಳಸುವ ಮೂಲಕ ಅರಣ್ಯಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗುತ್ತದೆ. ಬೀಟ್‌ ಫಾರೆಸ್ಟ್‌ ಅಧಿಕಾರಿ ಸಹ ಯಾವುದೇ ವಾಹನವನ್ನು ನಿಲ್ಲಿಸಬಹುದು, ಶೋಧಿಸಬಹುದು ಅಥವಾ ವಿಚಾರಣೆ ನಡೆಸಬಹುದು. ಅಲ್ಲದೇ ಆ ಅಧಿಕಾರಿಯ ವ್ಯಾಪ್ತಿಯಲ್ಲಿರುವ ಕಟ್ಟಡ, ಆವರಣ, ಜಮೀನು ಹಡಗುಗಳನ್ನು ಪ್ರವೇಶಿಸಿ ಶೋಧಿಸಬಹುದು. ಯಾವುದೇ ಸಂಶಯಾಸ್ಪದ ವ್ಯಕ್ತಿಯನ್ನು ತನ್ನ ನಿಯಂತ್ರಣದಲ್ಲಿಡುವುದಕ್ಕೆ ಅನುವುಮಾಡಿಕೊಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಹೀಗಾಗಿ ಕೇರಳ ಸರ್ಕಾರ ಅನುಷ್ಠಾನಗೊಳಿಸಲು ಮುಂದಾಗಿರುವ ನೂತನ ಮಸೂದೆಯ ಕರಡಿನಲ್ಲಿ ಅನುಕೂಲಕರ ಅಂಶಗಳಿಗಿಂತ ಅನಾನುಕೂಲಕರ ಅಂಶಗಳೇ ಹೆಚ್ಚಾಗಿವೆ. ಹೀಗಾಗಿ ಇದಕ್ಕೆ ಸ್ಥಳೀಯರ ವಿರೋಧ ಹೆಚ್ಚಾಗಿದೆ. ಈ ನಡುವೆ ಈ ಅಂಶಗಳಲ್ಲಿ ಮಾರ್ಪಾಡು ತರುವ ಬಗ್ಗೆ ಚರ್ಚಿಸಬೇಕು ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ.

Share This Article