ನವದೆಹಲಿ: ಮಂಗಳವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು 2003ರಲ್ಲಿ ಹೆಚ್‍ಐವಿ ಪೀಡಿತ ಮಕ್ಕಳನ್ನು ತಬ್ಬಿ ಮುದ್ದಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
2003ರಲ್ಲಿ ಕೇಂದ್ರ ಆರೋಗ್ಯ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಹೆಚ್‍ಐವಿ ರೋಗದ ಬಗ್ಗೆ ಜನರಲ್ಲಿ ಇರುವ ಮೂಢನಂಬಿಕೆಯನ್ನು ಹೋಗಲಾಡಿಸಲು, ಹೆಚ್‍ಐವಿ ಪೀಡಿತ ಮಕ್ಕಳನ್ನು ತಬ್ಬಿ ಮುದ್ದಾಡಿದ್ದರು. ಈ ಮೂಲಕ ಮುಟ್ಟುವುದು ಮತ್ತು ತಬ್ಬಿಕೊಳ್ಳುವುದರಿಂದ ಹೆಚ್‍ಐವಿ ಹರಡುವುದಿಲ್ಲ ಎಂದು ಜನರಿಗೆ ಸಂದೇಶ ನೀಡಿದ್ದರು.
ಈಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಪಿಯೂ ನಾಯರ್ ಎಂಬುವರು ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಾಕಿ “ಹಳೇಯ ಫೋಟೋ, ಸುಷ್ಮಾ ಜೀ ಹೆಚ್‍ಐವಿ ಪೀಡಿತ ಇಬ್ಬರು ಕೇರಳದ ಮಕ್ಕಳನ್ನು ಅಪ್ಪಿಕೊಂಡಿದ್ದಾರೆ. ಅ ಮಕ್ಕಳಿಗೆ ತಮ್ಮ ತಾಯಿಯಿಂದ ಕಾಯಿಲೆ ಬಂದಿದೆ (ಮಕ್ಕಳ ಪೋಷಕರು ಹೆಚ್‍ಐವಿ ಕಾರಣದಿಂದ ಮೃತ ಪಟ್ಟಿದ್ದರು) ಈ ಮಕ್ಕಳಿಂದ ಹೆಚ್‍ಐವಿ ಹರಡುತ್ತದೆ ಎಂಬ ಕಾರಣಕ್ಕೆ ಶಾಲೆಯಿಂದ ಹೊರಹಾಕಲಾಗಿತ್ತು” ಎಂದು ಬರೆದುಕೊಂಡಿದ್ದಾರೆ.
Blast from the past : Sushama ji hugging 2 children from Kerala, Benson & bency who received AIDS from their mother (both parents passed away because of AIDS) Both of the children were removed from their school because of the fear of spreading virus. #RIPSushmaJi pic.twitter.com/S6LV550XV9
— Piyu ????⚕️ ???????? Nutrition Jeevi ???????? (@PiyuNair) August 7, 2019
ಈ ಮಕ್ಕಳನ್ನು ಭೇಟಿಯಾಗಿದ್ದ ಸುಷ್ಮಾ ಸ್ವರಾಜ್ ಅವರು ಮಕ್ಕಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರ ಯೋಚನೆಗಳನ್ನು ಪ್ರಸ್ತಾಪ ಮಾಡಿದ್ದರು. ನಂತರ ಅ ಮಕ್ಕಳನ್ನು ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಭೇಟಿಯಾಗಿ ಅ ಇಬ್ಬರು ಹೆಚ್‍ಐವಿ ಪೀಡಿತ ಮಕ್ಕಳನ್ನು ಶಾಲೆ ಸೇರಿಸುವ ವ್ಯವಸ್ಥೆ ಮಾಡಿದ್ದರು.
ಇದಾದ ನಂತರ ಸುಷ್ಮಾ ಸ್ವರಾಜ್ ಅವರು ಅ ಇಬ್ಬರು ಮಕ್ಕಳ ಶಿಕ್ಷಣದ ಬಗ್ಗೆ ಖಚಿತಪಡಿಸಿಕೊಂಡು. ಈ ರೀತಿಯ ಮಕ್ಕಳಿಗಾಗಿ ವಿಶೇಷ ಬೋಧಕರನ್ನು ನೇಮಿಸಬೇಕು. ದೇಶದ ವಿವಿಧ ಭಾಗಗಳಲ್ಲಿ ಈ ರೀತಿ ಹೆಚ್‍ಐವಿ ಪೀಡಿತ ಮಕ್ಕಳು ಇದ್ದಾರೆ. ಅವರಿಗೂ ಶಿಕ್ಷಣ ಕೊಡಿಸಬೇಕು ಎಂದು ಹೇಳಿದ್ದರು.
ಇಂದು ಈ ವಿಚಾರದ ಬಗ್ಗೆ ಮಾತನಾಡಿರುವ ಹೆಚ್‍ಐವಿ ಪೀಡಿತ ಮಕ್ಕಳ ಅಜ್ಜಿ ಸಲ್ಲಮ್ಮ “ಸುಷ್ಮಾ ಸ್ವರಾಜ್ ಅವರ ಅಪ್ಪುಗೆಯಿಂದ ನನ್ನ ಮೊಮ್ಮಕ್ಕಳ ಜೀವನ ಸಂಪೂರ್ಣ ಬದಲಾಗಿದೆ. ಅವರ ವಿದ್ಯಾಭ್ಯಾಸಕ್ಕೆಂದು ನಮಗೆ ತಿಂಗಳಿಗೊಮ್ಮೆ ಬೆಂಬಲ ರೂಪದಲ್ಲಿ ಹಣ ಬರುತ್ತಿದೆ. ನಾವು ಅವಳನ್ನು ಎಂದಿಗೂ ಮರೆಯುವುದಿಲ್ಲ” ಎಂದು ಹೇಳಿದ್ದಾರೆ.
ಇಂದು ಅವರ ಸಾವಿನ ಸುದ್ದಿ ಕೇಳಿ ಕಂಬನಿ ಮಿಡಿದ ಸಲ್ಲಮ್ಮ, ನನ್ನ ಇಬ್ಬರು ಹೆಚ್‍ಐವಿ ಪೀಡಿತ ಮೊಮ್ಮಕ್ಕಳ ಮೇಲೆ ಅವರು ದಯೆ ತೋರಿಸದೆ ಇದ್ದರೆ 2003ರಲ್ಲೆ ನನ್ನ ಮತ್ತು ನನ್ನ ಮೊಮ್ಮಕ್ಕಳ ಜೀವನ ಮುಗಿದು ಹೋಗುತಿತ್ತು ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. ಹೆಚ್‍ಐವಿ ಪೀಡಿತ ಈ ಇಬ್ಬರು ಮಕ್ಕಳಲ್ಲಿ ಹೆಣ್ಣು ಮಗು 2010ರಲ್ಲಿ ಸಾವನ್ನಪ್ಪಿದ್ದು. ಯುವಕನಿಗೆ 23 ವರ್ಷವಾಗಿದೆ.