ಹಾಸ್ಟೆಲ್‌ನ್ನು ಜೈಲಿನಂತೆ ಮಾಡಿಟ್ಟಿದ್ದ ವಾರ್ಡನ್!
ತಿರುವನಂತಪುರಂ: ಕೇರಳದ (Kerala) ಕೋಝಿಕೋಡ್‌ನ ಹಾಸ್ಟೆಲ್ (Hostel) ಒಂದರಲ್ಲಿ ಕಳೆದ ಡಿಸೆಂಬರ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿ ಕೋಮಾದಲ್ಲಿದ್ದ ನರ್ಸಿಂಗ್ ವಿದ್ಯಾರ್ಥಿನಿ (Nursing Student) ಮೂರು ತಿಂಗಳ ಬಳಿಕ ಸಾವನ್ನಪ್ಪಿದ್ದಾಳೆ.
ಮೃತ ವಿದ್ಯಾರ್ಥಿನಿಯನ್ನು ಕೊಟ್ಟಾಯಂ ಮೂಲದ ಚೈತನ್ಯ ಕುಮಾರಿ (20) ಎಂದು ಗುರುತಿಸಲಾಗಿದೆ. ಆಕೆ ಮಂಜೂರ್ ಆಸ್ಪತ್ರೆ (Hospital) ಹಾಗೂ ನರ್ಸಿಂಗ್ ಕಾಲೇಜ್‌ನಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಅವಳು ಒಂದು ದಿನ ಹಾಸ್ಟೆಲ್‌ನಿಂದ ಹೊರಗೆ ಹೋಗಿ ಆರೋಗ್ಯ ಏರುಪೇರಾಗಿತ್ತು. ಇದರಿಂದ ವಾರ್ಡನ್ ರಂಜನಿ ವಿದ್ಯಾರ್ಥಿನಿಗೆ ಗದರಿಸಿದ್ದರು. ಅಂದಿನಿಂದ ಆಕೆ ಆಹಾರ ನೀರನ್ನು ತ್ಯೆಜಿಸಿದ್ದಳು. ಡಿಸೆಂಬರ್ 7 ರಂದು ಆಕೆ ಹಾಸ್ಟೆಲ್ ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಮೂರು ತಿಂಗಳಿಗೂ ಹೆಚ್ಚು ಕಾಲ ಕೋಮಾದಲ್ಲಿದ್ದಳು. ಚಿಕಿತ್ಸೆ ಫಲಿಸದೇ ಬಾನುವಾರ ರಾತ್ರಿ ಚೈತನ್ಯ ಸಾವನ್ನಪ್ಪಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ್ದ ಆಕೆಯನ್ನು ಮೊದಲು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆತರಲಾಗಿತ್ತು. ನಂತರ ಆಕೆಯನ್ನು ಕಸ್ತೂರ್ಬಾ ಆಸ್ಪತ್ರೆಗೆ ಮತ್ತು ಕಣ್ಣೂರಿನ ಆಸ್ಟರ್ ಮಿಮ್ಸ್‌ಗೆ ಸ್ಥಳಾಂತರಿಸಲಾಯಿತು. ಬಳಿಕ ಆಕೆಯನ್ನು ಕೋಝಿಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆ.
ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಮಹಿಳೆಯ ತಾಯಿ ಹಾಗೂ ವಿದ್ಯಾರ್ಥಿನಿಯರು ವಾರ್ಡನ್ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಭಾರೀ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಹಾಸ್ಟೆಲ್‌ನಲ್ಲಿ ಜೈಲಿನಂತ ಪರಿಸ್ಥಿತಿ ಸೃಷ್ಟಿ ಮಾಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದರು. ಇದಾದ ಬಳಿಕ ವಾರ್ಡನ್ ಅವರನ್ನು ಕರ್ತವ್ಯದಿಂದ ತೆಗೆದುಹಾಕಲಾಗಿತ್ತು. ವಿದ್ಯಾರ್ಥಿನಿಯ ಸಾವಿನ ನಂತರ, ಪೊಲೀಸರು ವಾರ್ಡನ್ ಅವರನ್ನು ವಶಕ್ಕೆ ಪಡೆದಿದ್ದಾರೆ.