– ಚೇನಾಬ್ ರೈಲು ಸೇತುವೆಯ ರುದ್ರರಮಣೀಯ ದೃಶ್ಯ; ವೀಡಿಯೋ ನೋಡಿ…
1. ಅಬ್ದುಲ್ ಕಲಾಂರನ್ನ ಲಾಡೆನ್‌ಗೆ ಹೋಲಿಸಿ ವಿವಾದ
ಸಮಾಜದ ಪರಿಸ್ಥಿತಿಗಳೇ ಒಸಾಮಾ ಬಿನ್ ಲಾಡೆನ್‌ನನ್ನು ಭಯೋತ್ಪಾಕನನ್ನಾಗಿ ಮಾಡಿತು ಅಂತ ಮಹಾರಾಷ್ಟ್ರದ ಶರದ್ ಪವಾರ್ ಎನ್‌ಸಿಪಿ ಪಕ್ಷದ ನಾಯಕ ಜಿತೇಂದ್ರ ಅವಧ್ ಪತ್ನಿ ಋತು ಅವಧ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ. ಲಾಡೆನ್ ಜೀವನ ಚರಿತ್ರೆ ಓದಿ.. ಅಬ್ದುಲ್ ಕಲಾಂ ಹೇಗೆ ರಾಷ್ಟ್ರಪತಿ ಆದ್ರೋ, ಲಾಡೆನ್ ಹೇಗೆ ಉಗ್ರನಾದನೋ ಗೊತ್ತಾಗುತ್ತೆ ಎಂದು ಮಕ್ಕಳಿಗೆ ಕರೆ ನೀಡಿದ್ದಾರೆ. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಉಗ್ರರ ಪರ ಮಾತಾಡೋದು ಇಂಡಿ ಕೂಟದ ರಕ್ತದಲ್ಲೇ ಇದೆ ಎಂದು ಬಿಜೆಪಿ ಕಿಡಿಕಾರಿದೆ.
2. ಅಜಿತ್ ಪವಾರ್ ಭಿನ್ನರಾಗ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸನಿಹದಲ್ಲಿ ಡಿಸಿಎಂ ಅಜಿತ್ ಪವಾರ್ ಭಿನ್ನರಾಗ ತೆಗೆದಿದ್ದಾರೆ. ಸಮ್ಮಿಶ್ರ ಸರ್ಕಾರ ಇದ್ದರೇ ಇದೇ ಪ್ರಾಬ್ಲಂ… ಯಾವುದೇ ಅಭಿವೃದ್ದಿ ಕೆಲಸಗಳು ಆಗಲ್ಲ ಎಂದಿದ್ದಾರೆ. ಅಜಿತ್ ಪವಾರ್ ಹೇಳಿಕೆಗೆ ಈಗ ಆಡಳಿತ ಮೈತ್ರಿಕೂಟದಲ್ಲಿ ಅಸಮಾಧಾನದ ಹೊಗೆ ಎಬ್ಬಿಸಿದೆ.
Advertisement
3. ಪಿಯೂಶ್ ಗೋಯೆಲ್ ವಿರುದ್ಧ ಪ್ರಿಯಾಂಕ್ ಕಿಡಿ
ಬೆಂಗಳೂರು ಬೈ ಬೈ ಅಂದ್ರೆ.. ಭಾರತ ಬೈ ಬೈ ಎಂದು ಹೇಳಬೇಕಾಗುತ್ತದೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯೆಲ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ. ಪಿಯೂಶ್ ಗೋಯಲ್ ಬಾಯ್ ಬಾಯ್ ಬೆಂಗಳೂರು ಅಂತ ಹೇಳಿದ್ರು. ಅವರು ದೇಶದ ಮಂತ್ರಿಗಳಾಗಿಲ್ಲ.. ಮೋದಿಯವರಿಗೆ ಮಂತ್ರಿಗಳಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು. ಸೆಮಿ ಕಂಡಕ್ಟರ್‌ನ 4 ವಲಯಗಳು ಗುಜರಾತ್‌ಗೆ ಹೋಗಿವೆ. ಇದಕ್ಕೆ ಕುಮಾರಸ್ವಾಮಿ ಉತ್ತರ ಕೊಡಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ರು.
Advertisement
4. ಅಗ್ನಿವೀರರಿಗೆ ಉದ್ಯೋಗ ಮೀಸಲಾತಿ
ಅಗ್ನಿವೀರರಿಗೆ ಬ್ರಹ್ಮೋಸ್ ಏರೋಸ್ಪೇಸ್ ಸಂಸ್ಥೆ ಉದ್ಯೋಗ ಮೀಸಲಾತಿ ನೀಡಿದೆ. ತಾಂತ್ರಿಕ ಮತ್ತು ಸಾಮಾನ್ಯ ಆಡಳಿತ ವಿಭಾಗದಲ್ಲಿ ಶೇ.15ರಷ್ಟು ಮೀಸಲಾತಿ ಪ್ರಕಟಿಸಿದೆ. ಭದ್ರತಾ ವಿಭಾಗದಲ್ಲಿ ಕನಿಷ್ಠ ಶೇ.50ರಷ್ಟು ಮೀಸಲಾತಿ ಕಲ್ಪಿಸಿದೆ. ಈ ಮೂಲಕ ಬ್ರಹ್ಮೋಸ್ ಏರೋಸ್ಪೇಸ್ ಸಂಸ್ಥೆ ಅಗ್ನಿವೀರರಿಗೆ ಉದ್ಯೋಗ ಮೀಸಲಾತಿ ನೀಡಿದ ಮೊದಲ ಸಂಸ್ಥೆ ಎನಿಸಿದೆ.
Advertisement
5. ಪೊಲೀಸರ ಮೇಲೆ ಗುಂಪು ದಾಳಿ
ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಅಕ್ರಮ ಗಣಿಗಾರಿಕೆ ಆರೋಪಿ ವಾಹನದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಇದ್ರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಪೊಲೀಸರ ಮೇಲೆ ಗುಂಪು ದಾಳಿ ನಡೆಸಿದ ಘಟನೆ ಉತ್ತರಪ್ರದೇಶದ ಮೊರದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರಿಗೆ ಕಲ್ಲು ಹೊಡೆದಿದ್ದಾರೆ. ಘಟನೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ.
Advertisement
6. ಸ್ನೇಹಮಯಿ ಕೃಷ್ಣ ವಿರುದ್ಧ ವಂಚನೆ ಕೇಸ್
ಮೂರು ಲಕ್ಷ ಹಣ ಪಡೆದು ವಂಚನೆ ಎಸಗಿರುವ ಆರೋಪ ಕೇಸಲ್ಲಿ ಮೈಸೂರಿನ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರಿಂದು ಚಾಮರಾಜನಗರ ಕೋರ್ಟ್‌ಗೆ ತೆರಳಿ ವಿಚಾರಣೆ ಎದುರಿಸಿದ್ರು. ಬಳಿಕ ಮಾತಾಡಿದ ಅವರು, ಕರುಣಾಕರ ಎಂಬುವರು ನನ್ನ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನನ್ನ ನೈತಿಕ ಶಕ್ತಿ ಕುಗ್ಗಿಸುವ ಯತ್ನ ನಡೆಯುತ್ತಿದೆ. ಶೀಘ್ರವೇ ಸತ್ಯ ಗೊತ್ತಾಗುತ್ತೆ ಎಂದಿದ್ದಾರೆ
7. ಬಿಜೆಪಿಯಲ್ಲೇ ಫೈಟ್
ರಾಜ್ಯ ಬಿಜೆಪಿಯಲ್ಲಿ ಬಣ ಸಂಘರ್ಷ ತಾರಕಕ್ಕೇರಿದೆ. ನಿನ್ನೆ ಯತ್ನಾಳ್ ಟೀಂ ನಡೆಸಿದ್ದ ರೆಬೆಲ್ ಸಭೆಗೆ ಪ್ರತಿಯಾಗಿ ರೇಣುಕಾಚಾರ್ಯ ಬೆಂಗಳೂರಲ್ಲಿ ಸಭೆ ನಡೆಸಿದ್ದಾರೆ. ಕಟ್ಟಾ ಸುಬ್ರಹ್ಮಣ್ಯನಾಯ್ಡು ಮನೆಯಲ್ಲಿ ನಡೆದ ಸಭೆಯಲ್ಲಿ ಎಲ್ರೂ ವಿಜಯೇಂದ್ರ ಪರ ಬ್ಯಾಟ್ ಬೀಸಿದ್ರು. ರಾಜ್ಯಾಧ್ಯಕ್ಷರ ಬದಲಾವಣೆ ಸಾಧ್ಯವಿಲ್ಲ. ವಿಜಯೇಂದ್ರರನ್ನ ಇಳಿಸಿ ನೋಡಿ ಎಂದು ಸವಾಲ್ ಹಾಕಿದ್ರು. ಪಕ್ಷ ವಿರೋಧಿಗಳನ್ನು ಉಚ್ಛಾಟಿಸಬೇಕು ಎಂದು ಆಗ್ರಹಿಸಿದ್ರು
8. ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ
ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ರೈಲಿನ ಗಾಜುಗಳು ಪುಡಿ ಪುಡಿಯಾಗಿದ್ದು, ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ರೈಲ್ವೇ ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
9. ಭಾರತದಲ್ಲಿ ಮತ್ತೊಂದು ಮಂಕಿಪಾಕ್ಸ್ ಕೇಸ್ ಪತ್ತೆ
ಭಾರತದಲ್ಲಿ ಮತ್ತೊಂದು ಮಂಕಿಪಾಕ್ಸ್ ಕೇಸ್ ಪತ್ತೆಯಾಗಿದೆ. ಕೇರಳದ ಎರ್ನಾಕುಲಂನಲ್ಲಿ ವ್ಯಕ್ತಿಯೊಬ್ಬರಿಗೆ ಈ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಎಂ-ಪಾಕ್ಸ್ ಪ್ರಕರಣಗಳ ಸಂಖ್ಯೆ ಮೂರಕ್ಕೇರಿದೆ. ಕೇರಳದಲ್ಲೇ ಮೂರೂ ಪ್ರಕರಣಗಳು ಪತ್ತೆಯಾಗಿರುವುದು ಗಮನಾರ್ಹ.
10. ಚೇನಾಬ್ ರೈಲ್ ಬ್ರಿಡ್ಜ್ ಸ್ಪಷಲ್ ವೀಡಿಯೋ
ಕಾಶ್ಮೀರ ಕಣಿವೆಯನ್ನು ಸಂಪರ್ಕಿಸುವ ಚೇನಾಬ್ ರೈಲ್ವೇ ಸೇತುವೆಯ ರುದ್ರರಮಣೀಯ ದೃಶ್ಯವನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಂಚಿಕೊಂಡಿದ್ದಾರೆ. ಇದು ವಿಶ್ವದ ಅತಿ ಎತ್ತರದ ರೈಲು ಸೇತುವೆ ಮತ್ತು ವಿಶ್ವದ ಅತಿ ಎತ್ತರದ ಕಮಾನು ಸೇತುವೆ ಎಂದು ಅಶ್ವಿನಿ ವೈಷ್ಣವ್ ಬಣ್ಣಿಸಿದ್ದಾರೆ. ಈ ಸೇತುವೆಯು ನದಿಯಿಂದ 1,178 ಅಡಿ ಎತ್ತರದಲ್ಲಿದೆ.