ತಿರುವನಂತಪುರಂ: ವಂದೇ ಭಾರತ್ ರೈಲಿನಲ್ಲಿ ಮಕ್ಕಳು ಆರ್‌ಎಸ್‌ಎಸ್ ಹಾಡು ಹಾಡಿದ ಪ್ರಕರಣ ಸಂಬಂಧ ತನಿಖೆಗೆ ಕೇರಳ ಸರ್ಕಾರ ಆದೇಶಿಸಿದೆ.
ಎರ್ನಾಕುಲಂನಿಂದ ಬೆಂಗಳೂರಿಗೆ ಹೊಸದಾಗಿ ಉದ್ಘಾಟನೆಗೊಂಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ದಕ್ಷಿಣ ರೈಲ್ವೆ ಶಾಲಾ ವಿದ್ಯಾರ್ಥಿಗಳಿಂದ ಆರ್‌ಎಸ್‌ಎಸ್ ಹಾಡನ್ನು ಹಾಡಿಸಲಾಗಿತ್ತು ಎನ್ನಲಾಗಿದೆ.
ಈ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ (ಡಿಪಿಐ) ಸೂಚನೆ ನೀಡಿದ್ದಾರೆ. ಸಚಿವರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸರ್ಕಾರವು ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಶಿವನ್‌ಕುಟ್ಟಿ ಹೇಳಿದ್ದಾರೆ.
ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ರಾಜಕೀಯಗೊಳಿಸುವುದು ಮತ್ತು ಯಾವುದೇ ನಿರ್ದಿಷ್ಟ ಗುಂಪಿನ ಕೋಮು ಕಾರ್ಯಸೂಚಿಯನ್ನು ಉತ್ತೇಜಿಸಲು ಅವರನ್ನು ಬಳಸುವುದು ಸಾಂವಿಧಾನಿಕ ತತ್ವಗಳ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ (ಡಿಪಿಐ) ತಕ್ಷಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ. ಅಧಿಕೃತ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಮಾಡುವಲ್ಲಿ ಏನಾದರು ಲೋಪವಾಗಿದೆಯೇ ಎಂಬುದನ್ನು ತನಿಖೆಯು ಪರಿಶೀಲಿಸುತ್ತದೆ. ವರದಿಯನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ದೇಶದ ಜಾತ್ಯತೀತ ಮತ್ತು ರಾಷ್ಟ್ರೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಸರ್ಕಾರದ್ದು. ಈ ತತ್ವಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಶಿವನ್‌ಕುಟ್ಟಿ ತಿಳಿಸಿದ್ದಾರೆ.

