ತಿರುವಂತನಪುರಂ: ಕೇರಳದ ಕೃಷಿ ಮಂತ್ರಿ ವಿ.ಎಸ್ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ತ್ರಿಶೂರ್ ನ ವೃದ್ಧಾಶ್ರಮವೊಂದರಲ್ಲಿ 60 ವರ್ಷದ ವೃದ್ಧ ಜೋಡಿಗಳು ಶನಿವಾರ ಮದುವೆಯಾಗಿದ್ದಾರೆ.
ಥೈಕ್ಕಟ್ಟುಸೇರಿಯದ ಲಕ್ಷ್ಮಿ ಅಮ್ಮಲ್ (65) ಮತ್ತು ಕೊಚಾನಿಯನ್ ಮೆನನ್ (67) ಮದುವೆ ಮಾಡಿಕೊಂಡ ದಂಪತಿ. ಮೆನನ್ ಲಕ್ಷ್ಮಿ ಅಮ್ಮಲ್ ಅವರ ಮಾಜಿ ಪತಿಯ ಜೊತೆ ಕೆಲಸ ಮಾಡುತ್ತಿದ್ದ ವ್ಯಕ್ತಿಯಾಗಿದ್ದು, ಇಬ್ಬರು ಕಳೆದ 20 ವರ್ಷದಿಂದ ಸ್ನೇಹಿತರಾಗಿದ್ದರು.
Advertisement
Advertisement
ಲಕ್ಷ್ಮಿ ಅಮ್ಮಲ್ ಅವರ ಪತಿ ಸಾವನ್ನಪ್ಪಿದ ನಂತರ ಅವರು ತ್ರಿಶೂರ್ ನಲ್ಲಿರುವ ಸರ್ಕಾರಿ ವೃದ್ಧಾಶ್ರಮ ಸೇರಿದ್ದರು. ಇತ್ತ ಮಕ್ಕಳಿಂದ ಮನೆಯಿಂದ ಹೊರಹಾಕಲ್ಪಟ್ಟು ಬೀದಿ ಬೀದಿ ಸುತ್ತುತ್ತಿದ್ದ ಮೆನನ್ ಅವರನ್ನು ಸರ್ಕಾರೇತರ ಸಂಸ್ಥೆಯೊಂದು ಅದೇ ವೃದ್ಧಾಶ್ರಮಕ್ಕೆ ಸೇರಿಸಿತ್ತು. ಇದಕ್ಕೂ ಮುಂಚೆಯೇ ಪರಿಚಯವಿದ್ದ ಕಾರಣ ಲಕ್ಷ್ಮಿ ಅಮ್ಮಲ್ ಮತ್ತು ಮೆನನ್ ವೃದ್ಧಾಶ್ರಮದಲ್ಲಿ ಸ್ನೇಹಿತರಾಗಿದ್ದಾರೆ.
Advertisement
ಹೀಗೆ ದಿನ ಪೂರ್ತಿ ಜೊತೆಗೆ ಇರುತ್ತಿದ್ದ ಇವರು, ತಮ್ಮ ಜೀವನದ ದು:ಖವನ್ನು ಪರಸ್ಪರ ಹಂಚಿಕೊಂಡಿದ್ದಾರೆ. ಹೀಗೆ ಕಾಲ ಕಳೆಯುತ್ತಿದ್ದ ಹಾಗೇ ಅವರ ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಆಗ ಇಬ್ಬರು ಸೇರಿ ನಾವು ಮದುವೆಯಾಗಬೇಕು ಎಂದುಕೊಂಡಿದ್ದನ್ನು ವೃದ್ಧಾಶ್ರಮದವರಿಗೆ ಹೇಳಿದ್ದಾರೆ. ಆಗ ವೃದ್ಧಾಶ್ರಮದವರು ಈ ಇಬ್ಬರು ವೃದ್ಧ ಜೋಡಿಗೆ ವೃದ್ಧಾಶ್ರಮದಲ್ಲೇ ಮದುವೆ ಮಾಡಿಸಿದ್ದಾರೆ.
Advertisement
ಈ ಮದುವೆಗೆ ಕೇರಳದ ಕೃಷಿ ಸಚಿವ ವಿ.ಎಸ್ ಸುನೀಲ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಎಸ್. ಶಾನವಾಸ್ ಕೂಡ ಆಗಮಿಸಿ ಶುಭ ಹಾರೈಸಿದರು. ವೃದ್ಧಾಶ್ರಮದ ಎಲ್ಲರೂ ಸೇರಿ ಹಾಡಿ ಕುಣಿದು ಈ ವೃದ್ಧಜೋಡಿಯ ಮದುವೆ ಮಾಡಿದ್ದಾರೆ. ಹಾಗೂ ಕೊಚಾನಿಯನ್ ಮೆನನ್ ಅವರು ಲಕ್ಷ್ಮಿ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.