ತಿರುವನಂತಪುರಂ: ಬಾವಲಿಗಳ ಮೂಲಕ ಹರಡುವ ನಿಪಾ ವೈರಸ್ ಗೆ ಬಲಿಯಾವುದಕ್ಕೂ ಮುನ್ನ ಪತಿಗೆ ಕೇರಳದ ನರ್ಸ್ ಒಬ್ಬರು ಭಾವನಾತ್ಮಕ ಪತ್ರ ಬರೆದು, ತಾನು ಸಾಯುವುದು ಖಚಿತವಾಗಿದ್ದು, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ತಿಳಿಸಿದ್ದಾರೆ.
31 ವರ್ಷದ ಲಿನಿ ಅವರು ಕೇರಳದ್ಯಾಂತ ಹೆಚ್ಚಿನ ಮಂದಿಯನ್ನು ಬಲಿ ಪಡೆಯುತ್ತಿರುವ ನಿಪಾ ವೈರಸ್ ಸೋಂಕು ತಗಲಿದ್ದ ರೋಗಿಗೆ ಚಿಕಿತ್ಸೆ ನೀಡುವ ವೇಳೆ ವೈರಸ್ ಹರಡಿ ಸಾವನ್ನಪ್ಪಿದ್ದರು.
ವೈರಸ್ ಸೋಂಕು ತಗಲಿದ ವೇಳೆ ತನ್ನ ಕುಟುಂಬವನ್ನು ನೋಡಲು ಸಾಧ್ಯವಾಗದ ಲಿನಿ ತಮ್ಮ ಪತಿಗೆ ಪತ್ರ ಬರೆದಿದ್ದರು. ಸೋಕಿನಿಂದ ಮೃತ ಪಟ್ಟ ಲಿನಿ ಅವರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸದೇ ಆಸ್ಪತ್ರೆಯ ಆಡಳಿತ ಮಂಡಳಿ ಶವ ಸಂಸ್ಕಾರವನ್ನು ಮಾಡಿತ್ತು.
ಲಿನಿ ಅವರಿಗೆ 7 ಹಾಗೂ 2 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಕೇರಳದ ಪೇರಾಂಬ್ರ ಆಸ್ಪತ್ರೆಯಲ್ಲಿ ದಾಖಲಾದ ಮೊದಲ ನಿಪಾ ವೈರಸ್ ಸೋಂಕು ತಗುಲಿದ್ದ ರೋಗಿಗೆ ಚಿಕಿತ್ಸೆ ನೀಡಿದ್ದರು. ಈ ವೇಳೆ ಅವರಿಗೂ ಸೋಂಕು ಹರಡಿತ್ತು. ತಮಗೆ ಸೋಂಕು ಹರಡಿರುವುದು ಖಚಿತವಾಗುತ್ತಿದ್ದಂತೆ ಪತಿಗೆ ಪತ್ರ ಬರೆದಿರುವ ಅವರು ನಾನು ಬಹುತೇಕ ಸಾಯುವುದು ಖಚಿತವಾಗಿದ್ದು, ನಿಮ್ಮನ್ನು ಮತ್ತೆ ನೋಡುತ್ತೇನೆ ಎಂದು ಅನ್ನಿಸುತ್ತಿಲ್ಲ. ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಅವರನ್ನು ನಿಮ್ಮೊಂದಿಗೆ ಗಲ್ಫ್ ಗೆ ಕರೆದುಕೊಂಡು ಹೋಗಿ. ನನ್ನ ತಂದೆಯಂತೆ ಅವರನ್ನು ಇಲ್ಲಿ ಏಕಾಂಗಿಯಾಗಿ ಬಿಡಬೇಡಿ. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
https://twitter.com/deepusebin/status/998573629435727873?
ಲಿನಿ ಅವರ ಮೃತ ದೇಹವನ್ನು ಕೊನೆಯ ಬಾರಿಗೆ ನೋಡಲು ಸಹ ಯಾರಿಗೂ ಅವಕಾಶ ನೀಡದೇ ಅಂತಿಮ ಸಂಸ್ಕಾರ ನಡೆಸಲಾಗಿದೆ. ಸೋಂಕು ಇತರೇ ವ್ಯಕ್ತಿಗಳಿಗೂ ಹರಡುವ ಕಾರಣದಿಂದ ಆರೋಗ್ಯ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಲಿನಿ ಅವರ ನಿಸ್ವಾರ್ಥ ಸೇವೆಯನ್ನು ಕೇರಳ ಸ್ಮರಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!
ಮೊದಲ ಬಾರಿಗೆ ನಿಪಾ ವೈರಸ್ ಗೆ ಬಲಿಯಾದ ಮೂವರು ಸಹ ಒಂದೇ ಕುಟುಂಬಕ್ಕೆ ಸೇರಿದ್ದು, ಅದರಲ್ಲಿ ಇಬ್ಬರು ಸಹೋದರರು ಹಾಗೂ ಆನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಅವರನ್ನು ನೋಡಿಕೊಳ್ಳುತ್ತಿದ್ದ ಮಹಿಳೆಯೂ ಸಾವನ್ನಪ್ಪಿದ್ದಾರೆ. ಉಳಿದಂತೆ ಕುಟುಂಬದ ಸಹೋದರರ ತಂದೆಗೂ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೇರಾಂಬ್ರ ಆಸ್ಪತ್ರೆಯ ಮೂಲಗಳು ತಿಳಿಸಿದೆ. ಇದುವರೆಗೂ ಕೇರಳದಲ್ಲಿ 16ಕ್ಕೂ ಹೆಚ್ಚಿನ ಜನ ನಿಪಾ ವೈರಸ್ ಗೆ ಬಲಿಯಾಗಿದ್ದಾರೆ.