ತಿರುವನಂತಪುರಂ: ಮಹಾಮಳೆಗೆ ದೇವರನಾಡಿನ ಜನತೆ ತತ್ತರಿಸಿ ಹೋಗಿದ್ದಾರೆ. ಜೀವ ಉಳಿದರೆ ಸಾಕು ಎಂದು ಮನೆ, ಆಸ್ತಿ ಎಲ್ಲವನ್ನೂ ಬಿಟ್ಟು ಬಂದಿದ್ದರು. ಈಗ ಪ್ರವಾಹ ನಿಂತಿದ್ದು, ಮತ್ತೆ ಮನೆ ಸೇರಲು ಜನರು ಮುಂದಾಗುತ್ತಿದ್ದಾರೆ. ಆದರೆ ಅವರಿಗೆ ಈಗ ಹಾವು ಹಾಗೂ ಮೊಸಳೆ ಕಾಣಿಸಿ ಭಯದ ವಾತಾವರಣ ಸೃಷ್ಟಿಸಿವೆ.
ತ್ರಿಶೂರ್ ಜಿಲ್ಲೆಯ ಚಾಲಕುಡಿಯ ವ್ಯಕ್ತಿಯೊಬ್ಬರು ಸೋಮವಾರ ರಾತ್ರಿ ತಮ್ಮ ಮನೆಗೆ ಹೋಗಿದ್ದರು. ಒಳಗೆ ಹೋಗುತ್ತಿದ್ದಂತೆ ಮೊಸಳೆ ಕಂಡು ಬೆಚ್ಚಿಬಿದ್ದಿದ್ದಾರೆ. ಅಲ್ಲಿಂದ ತಕ್ಷಣವೇ ಹೊರಗೆ ಬಂದು ನೆರೆಹೊರೆಯವರ ಸಹಾಯ ಪಡೆದು ಹಗ್ಗ ಹಾಕಿ ಮೊಸಳೆಯನ್ನು ಕಟ್ಟಿಹಾಕಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಲ್ಲಪ್ಪುರಂನ ಮುಸ್ತಾಫ್ ಎಂಬವರು ಹಾವು ಹಿಡಿಯುವುದಲ್ಲಿ ನಿರತರಾಗಿದ್ದು, ಈಗಾಗಲೇ ಎರಡು ದಿನದಲ್ಲಿ 100 ಹಾವುಗಳನ್ನು ಹಿಡಿದಿದ್ದಾರೆ. ಇತ್ತ ಎರ್ನಾಕುಲಂ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಹಾವು ಕಚ್ಚಿದ್ದ 52 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯನ್ನು ಸ್ವಚ್ಛಗೊಳಿಸಲು ಬಂದಿದ್ದ ಅನೇಕರು ಹಾವು ಕಾಣುತ್ತಿದ್ದಂತೆ ಭಯಗೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ವರದಿಯಾಗಿದೆ.
ತ್ರಿಶೂರ್ ಜಿಲ್ಲೆಯು ಹೆಚ್ಚು ಹಾನಿಗೆ ಒಳಗಾದ ಜಿಲ್ಲೆಯಾಗಿದ್ದು, ರಾಜ್ಯದಲ್ಲಿ 370 ಜನರು ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಅಗತ್ಯ ಔಷಧಿ ಹಾಗೂ ಕ್ರಿಮಿನಾಶಕ ಕಳುಹಿಸಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv