ತಿರುವನಂತಪುರಂ: ವ್ಯಕ್ತಿಯೊಬ್ಬ ತನ್ನ ಪತ್ನಿ (Wife) ಮತ್ತು ಆಕೆಯ ಸ್ನೇಹಿತನ ನಡುವೆ ಅನೈತಿಕ ಸಂಬಂಧವಿದೆ ಎಂಬ ಅನುಮಾನದಿಂದ ಇಬ್ಬರನ್ನೂ ಹತ್ಯೆಗೈದ ಘಟನೆ ಕೇರಳದ (Kerala) ಪತ್ತನಂತಿಟ್ಟ ಜಿಲ್ಲೆಯ ಕಲಂಜೂರು ಗ್ರಾಮದಲ್ಲಿ ನಡೆದಿದೆ.
ಹತ್ಯೆಗೀಡಾದವರನ್ನು ವೈಷ್ಣವಿ ಮತ್ತು ವಿಷ್ಣು ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಬೈಜು ಎಂದು ಗುರುತಿಸಲಾಗಿದೆ. ಪತ್ನಿ ಹಾಗೂ ಆಕೆಯ ಸ್ನೇಹಿತನ ನಡುವೆ ಮೊಬೈಲ್‌ನಲ್ಲಿ ನಡೆದ ಚಾಟಿಂಗ್‌ನ್ನು ನೋಡಿ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಭಾನುವಾರ ರಾತ್ರಿ ಬೈಜು ಮತ್ತು ವೈಷ್ಣವಿ ನಡುವೆ ಜಗಳ ನಡೆದಿದ್ದು, ಆಕೆಯ ಮೇಲೆ ಹಲ್ಲೆ ಮಾಡಲು ಆರೋಪಿ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ವಿಷ್ಣುವಿನ ಮನೆಗೆ ಓಡಿಹೋಗಿದ್ದಳು. ಬಳಿಕ ಅವಳನ್ನು ಬೆನ್ನಟ್ಟಿ ಮಚ್ಚಿನಿಂದ ಹಲ್ಲೆ ಮಾಡಿದ್ದ. ಈ ವೇಳೆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ನಂತರ ಬೈಜು, ವಿಷ್ಣುವಿನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆತ ಸಾವನ್ನಪ್ಪಿದ್ದ.
ಸ್ಥಳೀಯ ಕೂಡಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಜುನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.