ಮಂಗಳೂರು ಆಸ್ಪತ್ರೆಯಲ್ಲಿ ಸಾವು – ಕೇರಳ ಆಸ್ಪತ್ರೆಯ ಶವಾಗಾರದಲ್ಲಿ ಪುನರ್ಜನ್ಮ!

Public TV
2 Min Read
man declared dead in Mangaluru hospital found alive in Kannur mortuary

– ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದ ಮಂಗಳೂರು ಆಸ್ಪತ್ರೆ
– ಅಂತ್ಯಸಂಸ್ಕಾರ ನಡೆಸಲು ಮುಂದಾಗಿದ್ದ ಕುಟುಂಬಸ್ಥರು

ತಿರುವನಂತಪುರಂ: ಚಿಕಿತ್ಸೆ ಫಲಿಸದೇ ಮಂಗಳೂರು (Mangaluru) ಆಸ್ಪತ್ರೆಯಲ್ಲಿ ಮೃತಪಟ್ಟ 67 ವರ್ಷದ ವ್ಯಕ್ತಿಗೆ ಕೇರಳ (Kerala) ಆಸ್ಪತ್ರೆಯ ಶವಾಗಾರದಲ್ಲಿ (Mortuary) ಪುನರ್ಜನ್ಮ ಸಿಕ್ಕಿದೆ.

ಪಾರ್ಶ್ವವಾಯು ಹಾಗೂ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಕಣ್ಣೂರಿನ ಪಚಪೊಯ್ಕಾದ ವೆಲ್ಲುವಕ್ಕಂಡಿ ಪವಿತ್ರನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರೂ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಜೀವರಕ್ಷಕ ಸಾಧನಗಳನ್ನು ಹಿಂತೆಗೆದುಕೊಳ್ಳುವುದಾಗಿ ಕುಟುಂಬಕ್ಕೆ ಆಸ್ಪತ್ರೆ ತಿಳಿಸಿತ್ತು. ಸೋಮವಾರ ಸಂಜೆಯ ವೇಳೆ ಪವಿತ್ರನ್‌ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಘೋಷಿಸಿತ್ತು. ಇದನ್ನೂ ಓದಿ: ಮದುವೆಗೆ 4 ದಿನ ಬಾಕಿಯಿರುವಾಗಲೇ ಪೊಲೀಸರ ಮುಂದೆ ಮಗಳನ್ನ ಗುಂಡಿಕ್ಕಿ ಕೊಂದ ತಂದೆ

man declared dead in Mangaluru hospital found alive in Kannur mortuary 1

ಸೋಮವಾರ ಸಂಜೆ 6:30 ರ ಸುಮಾರಿಗೆ ಅವರ ಶವವನ್ನು ಅಂಬುಲೆನ್ಸ್‌ (Ambulance) ಮೂಲಕ ಕಣ್ಣೂರಿಗೆ ಕಳುಹಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯಗೊಂಡ ಹಿನ್ನೆಲೆಯಲ್ಲಿ ರಾತ್ರಿ ಶವವವನ್ನು ಕಣ್ಣೂರಿನ ಎಕೆಜಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿ ಮಂಗಳವಾರ ಊರಿಗೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸಲು ಕುಟುಂಬ ನಿರ್ಧರಿಸಿತ್ತು.

ರಾತ್ರಿ 11:30ರ ಹೊತ್ತಿಗೆ ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸುತ್ತಿದ್ದಾಗ ಪವಿತ್ರನ್‌ ಕೈ ಅಲುಗಾಡುವನ್ನು ಕರ್ತವ್ಯದಲ್ಲಿದ್ದ ಅಟೆಂಡೆಂಟ್ ಜಯನ್ ಗಮನಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಯ ವೈದ್ಯಕೀಯ ತಂಡವು ದೇಹ ಪರೀಕ್ಷಿಸಿ ಪವಿತ್ರನ್ ಜೀವಂತವಾಗಿರುವುದನ್ನು ಎಂದು ದೃಢಪಡಿಸಿತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ತಕ್ಷಣವೇ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ಈಗ ಚಿಕಿತ್ಸೆಗೆ ಪವಿತ್ರನ್‌ ಸ್ಪಂದಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಅಟೆಂಡೆಂಟ್ ಜಯನ್ ಪ್ರತಿಕ್ರಿಯಿಸಿ, ಅಂಬುಲೆನ್ಸ್‌ನಿಂದ ದೇಹವನ್ನು ಇಳಿಸಿದಾಗ ಕೈ ಸ್ವಲ್ಪ ಚಲಿಸಿದನ್ನು ನೋಡಿದೆ. ನನಗೆ ಅನುಮಾನ ಬಂದ ವಿಚಾರವನ್ನು ನನ್ನ ಸಹೋದ್ಯೋಗಿ ಜೊತೆ ಹೇಳಿದೆ. ನಂತರ ಅವರ ಹೃದಯದ ನಾಡಿ ಮಿಡಿತ ಪರೀಕ್ಷೆ ಮಾಡಿದಾಗ ಅವರು ಜೀವಂತ ಇರುವುದು ದೃಢವಾಯಿತು ಎಂದು ತಿಳಿಸಿದರು.

ಈಗ ಮಂಗಳೂರಿನ ಖಾಸಗಿ ಆಸ್ಪತ್ರೆ ಮಾಡಿದ ಸಾವಿನ ದೃಢೀಕರಣದ ಬಗ್ಗೆ ಹಲವು ಪ್ರಶ್ನೆಗಳು ಸೃಷ್ಟಿಯಾಗಿದೆ. ಪವಿತ್ರನ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಬೆನ್ನಲ್ಲೇ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

 

Share This Article