Latest
ಶಬರಿಮಲೆ ಪ್ರವೇಶಿಸಿದ ಮಹಿಳೆಯರಿಗೆ ಮ್ಯಾಗಜಿನಲ್ಲಿ ವಿಶೇಷ ಗೌರವ- ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ತಿರುವನಂತಪುರಂ: ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಶಬರಿಮಲೆ ಪ್ರವೇಶ ಮಾಡಿದ್ದ ಇಬ್ಬರು ಮಹಿಳೆಯರಿಗೆ ಕೇರಳದ ಕಾಲೇಜ್ ಮ್ಯಾಗಜಿನ್‍ವೊಂದು ವಿಶೇಷ ಗೌರವ ಸಲ್ಲಿಸಿ, ಭಾರೀ ಟೀಕೆಗೆ ಗುರಿಯಾಗಿದೆ.
ಕೋತಮಂಗಲಂನ ಮಾರ್ ಅಥಾನಸಿಸ್ ಎಂಜಿನಿಯರಿಂಗ್ ಕಾಲೇಜು ‘ನವೋದಯದ ನಾಯಕಿಯರು’ ಎಂಬ ಮ್ಯಾಗಜಿನ್ ಪ್ರಕಟ ಮಾಡಿದೆ. ಈ ಮ್ಯಾಗಜಿನ್‍ನಲ್ಲಿ ಶಬರಿಮಲೆ ದೇಗುಲ ಪ್ರವೇಶಿಸಿದ ಬಿಂದು ಮತ್ತು ಕನಕದುರ್ಗ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಲಾಗಿದೆ. ಆದರೆ ಇದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಕಾಲೇಜಿನ ವಿರುದ್ಧ ಅನೇಕರು ಕಿಡಿಕಾರಿದ್ದಾರೆ.
ಮಾರ್ ಅಥಾನಸಿಸ್ ಎಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ಅನೇಕ ಹಿಂದೂ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ. ಶಬರಿಮಲೆ ದೇವಾಲಯ ಪ್ರವೇಶಿಸಿದ ಮಹಿಳೆಯರಿಗೆ ವಿಶೇಷ ಗೌರವ ನೀಡಿರುವುದು ಖಂಡನೀಯ. ಮ್ಯಾಗಜಿನ್ ಸಂಪಾದಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೆ ಕಾಲೇಜು ಆಡಳಿತ ಮಂಡಳಿ ವಿರುದ್ಧ ಹಿಂದೂ ಐಕ್ಯ ವೇದಿಕೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಹಿಂದೂ ಸಂಘಟನೆಗಳು ಪೊಲೀಸ್ ದೂರು ನೀಡಿದ ಬಳಿಕ ಹಾಗೂ ಪ್ರತಿಭಟನೆ ಚುರುಕುಗೊಳಿಸಿದ್ದರಿಂದ ಕಾಲೇಜು ಮಂಡಳಿ ಎಚ್ಚೆತ್ತುಕೊಂಡಿದೆ. ಈ ಮೂಲಕ ‘ನವೋದಯದ ನಾಯಕಿಯರು’ ಮ್ಯಾಗಜಿನ್‍ನ್ನು ಹಿಂಪಡೆಯಲು ನಿರ್ಧರಿಸಿದೆ.
ಶಬರಿಮಲೆಗೆ ಮಹಿಳೆಯರ ಪ್ರವೇಶ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿತ್ತು. ಇದಾದ ಕೆಲವೇ ದಿನಗಳ ನಂತರ ಬಿಂದು ಮತ್ತು ಕನಕದುರ್ಗ ಮೊಟ್ಟ ಮೊದಲ ಬಾರಿಗೆ ದೇವಾಲಯ ಪ್ರವೇಶ ಮಾಡಿದ್ದರು. ಇದಕ್ಕೆ ಶಬರಿಮಲೆ ಭಕ್ತರು, ಅನೇಕ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಅಷ್ಟೇ ಅಲ್ಲದೆ ದೊಡ್ಡಮಟ್ಟದ ಪ್ರತಿಭಟನೆ ಹಾಗೂ ಲಾಠಿ ಚಾರ್ಜ್ ಕೂಡ ನಡೆದಿತ್ತು.
