ತಿರುವನಂತಪುರಂ: ಸೆಕ್ಸ್ ವರ್ಕರ್ಸ್‌ಗಳಿಂದ (Sex Worker) ಸೇವೆ ಪಡೆಯುವ ವ್ಯಕ್ತಿಯನ್ನು ‘ಗ್ರಾಹಕ’ ಎಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಲೈಂಗಿಕ ಕಾರ್ಯಕರ್ತೆ ‘ಉತ್ಪನ್ನ’ (ವಸ್ತು) ಅಲ್ಲ ಎಂದು ಕೇರಳ ಹೈಕೋರ್ಟ್ (Kerala High Court) ಹೇಳಿದೆ.
ಲೈಂಗಿಕ ಕಾರ್ಯಕರ್ತೆಯರ ಸೇವೆಗಳನ್ನು ಪಡೆಯುವ ವ್ಯಕ್ತಿಯ ವಿರುದ್ಧ ಅನೈತಿಕ ಕಳ್ಳಸಾಗಣೆ (ತಡೆಗಟ್ಟುವಿಕೆ) ಕಾಯ್ದೆ 1956ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬಹುದು. ಏಕೆಂದರೆ ಲೈಂಗಿಕ ಕಾರ್ಯಕರ್ತೆಗೆ ಹಣ ಪಾವತಿಸುವ ಮೂಲಕ ವೇಶ್ಯಾವಾಟಿಕೆಗೆ ಪ್ರೇರೇಪಿಸುವಂತಾಗುತ್ತದೆ ಎಂದು ನ್ಯಾಯಮೂರ್ತಿ ವಿ.ಜಿ. ಅರುಣ್ (Justice V.G. Arun) ಅವರಿದ್ದ ಏಕಸದಸ್ಯ ಪೀಠ ಹೇಳಿದೆ. ಇದನ್ನೂ ಓದಿ: ಮತ್ತೆ ಅನುಚಿತ ವರ್ತನೆ ತೋರಿದ್ರೆ ದರ್ಶನ್ ಬಳ್ಳಾರಿಗೆ ಶಿಫ್ಟ್ – ಐಜಿಪಿಗೆ ಅಧಿಕಾರ ಕೊಟ್ಟ ಕೋರ್ಟ್
ಏನಿದು ಪ್ರಕರಣ?
1956ರ ಅನೈತಿಕ ಕಳ್ಳಸಾಗಣೆ (ತಡೆಗಟ್ಟುವಿಕೆ) (Immoral Traffic) ಕಾಯ್ದೆಯ ಸೆಕ್ಷನ್ 3 (ವೇಶ್ಯಾಗೃಹವನ್ನು ನಡೆಸಿದ್ದಕ್ಕಾಗಿ ಶಿಕ್ಷೆ), 4 (ಇನ್ನೊಬ್ಬ ವ್ಯಕ್ತಿಯ ವೇಶ್ಯಾವಾಟಿಕೆಯ ಗಳಿಕೆಗೆ ಅವಲಂಬನೆಗೆ ಶಿಕ್ಷೆ), 5(1)(d) (ವೇಶ್ಯಾವಾಟಿಕೆ ಪ್ರೇರಣೆ), ಮತ್ತು 7 (ಸಾರ್ವಜನಿಕ ಸ್ಥಳಗಳಲ್ಲಿ ವೇಶ್ಯಾವಾಟಿಕೆಗೆ ಶಿಕ್ಷೆ) ಅಡಿಯಲ್ಲಿ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಿಚಾರಣೆ ನಡೆಸಿತು. ಈ ವೇಳೆ, ಸೇವೆ ಪಡೆಯುವ ವ್ಯಕ್ತಿಯನ್ನು ‘ಗ್ರಾಹಕ’ ಎಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಲೈಂಗಿಕ ಕಾರ್ಯಕರ್ತೆ ‘ಉತ್ಪನ್ನ’ ಅಲ್ಲ ಎಂದು ಅಭಿಪ್ರಾಯಪಟ್ಟಿದೆ.
ಮಾರ್ಚ್ 2021 ರಲ್ಲಿ ಪೆರೂರ್ಕಡ ಪೊಲೀಸ್ ಠಾಣೆ ವ್ಯಾಪ್ತಿಯ ಕುಡಪ್ಪನಕುನ್ನುವಿನ ಮನೆಯೊಂದರಲ್ಲಿ ಅರ್ಜಿದಾರ ಮತ್ತು ಮಹಿಳೆಯೊಬ್ಬರು ಬೆತ್ತಲೆಯಾಗಿ ಪತ್ತೆಯಾಗಿದ್ದರು. ಈ ಪ್ರಕರಣದ ಇತರ ಇಬ್ಬರು ಆರೋಪಿಗಳು ಮೂವರು ಮಹಿಳೆಯರನ್ನು ಹಣಕೊಟ್ಟು ಖರೀದಿಸಿ ವೇಶ್ಯಾವಾಟಿಕೆ ಉದ್ದೇಶಕ್ಕಾಗಿ ಬಳಸುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿತ್ತು.
ಈ ಪ್ರಕರಣದಲ್ಲಿ ಪತ್ತೆಯಾಗಿದ್ದ ವ್ಯಕ್ತಿ ಗ್ರಾಹಕ ಮಾತ್ರ. ಆತನ ವಿರುದ್ಧ ವೇಶ್ಯಾವಾಟಿಕೆಗೆ ಪ್ರೇರೇಪಿಸಿದ ಆರೋಪ ಹೊರಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ಪೀಠ ಹೇಳಿದ್ದೇನು?
ಲೈಂಗಿಕ ಕಾರ್ಯಕರ್ತೆಯನ್ನು ಉತ್ಪನ್ನವೆಂದು ಅವಮಾನಿಸಲಾಗುವುದಿಲ್ಲ. ಆ ಲೈಂಗಿಕ ಕಾರ್ಯಕರ್ತೆಗೆ ಹಣ ಪಾವತಿಸುವ ಮೂಲಕ ವೇಶ್ಯಾವಾಟಿಕೆ ನಡೆಸಲು ಪ್ರೇರೇಪಿಸಿದಂತಾಗುತ್ತದೆ. ಆದ್ದರಿಂದ 1956 ರ ಅನೈತಿಕ ಕಳ್ಳಸಾಗಾಣಿಕೆ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 5(1)(d) ಅಡಿಯಲ್ಲಿ ಅಪರಾಧಕ್ಕಾಗಿ ಕಾನೂನು ಕ್ರಮ ಜರುಗಿಸಲು ಹೊಣೆಗಾರನಾಗಿದ್ದಾನೆ. ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಅಪರಾಧಗಳಿಗಾಗಿ ಅರ್ಜಿದಾರರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲಾಗಿದ್ದು, ಸೆಕ್ಷನ್ 5(1)(d) ಮತ್ತು 7 ರ ಅಡಿಯಲ್ಲಿ ವಿಚಾರಣೆಯನ್ನು ಮುಂದುವರಿಸಲು ಅನುಮತಿ ನೀಡಿ ಕೋರ್ಟ್ ಆದೇಶಿಸಿದೆ. ಇದನ್ನೂ ಓದಿ: ಪುತ್ರನಿಗೆ ಶಸ್ತ್ರಚಿಕಿತ್ಸೆ – ಶಾಸಕ ವಿನಯ್‌ಗೆ 2 ದಿನಗಳ ಮಧ್ಯಂತರ ಜಾಮೀನು ಮಂಜೂರು